
ಮೈಸೂರು (ಏ.23): ರಾಜ್ಯದಲ್ಲಿ ಅತ್ಯಂತ ಗಂಭೀರ ಪ್ರಕರಣವಾಗಿರುವ ಮುರುಘಾ ಶ್ರೀಗಳ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ಸಾಕ್ಷಿಗಳ ಮೇಲೆ ಪ್ರಭಾವ ಬೀರುಬಹುದು. ಹೀಗಾಗಿ, ಅವರನ್ನು ಬೇರೆ ರಾಜ್ಯದಲ್ಲಿಟ್ಟು ಸಾಕ್ಷಿಗಳ ವಿಚಾರಣೆ ನಡೆಸಬೇಕು ಎಂದು ಮೈಸೂರು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಗಂಭೀರ ಪ್ರಕರಣವಾಗಿರುವ ಹಾಗೂ ಅತ್ಯಂತ ಪ್ರಭಾವಿಯೂ ಆಗಿರುವ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಮುರುಘಾ ಶರಣರನ್ನು ಪೋಕ್ಸೋ ಕೇಸ್‌ನಲ್ಲಿ ಪುನಃ ಜೈಲಿಗೆ ಕಳಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಸಂತಸದಿಂದ ಸ್ವಾಗತಿಸುತ್ತೇವೆ. ಆದರೆ, ಸಾಕ್ಷಿಗಳ ಪೂರ್ಣ ವಿಚಾರಣೆ ಮುಕ್ತಾಯ ಆಗುವವರೆಗೂ ಮುರುಘಾ ಶರಣರನ್ನು ಬೇರೆ ರಾಜ್ಯದಲ್ಲಿ ಇರಿಸಬೇಕು. ಇಲ್ಲವಾದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಮುರುಘಾ ಶ್ರೀ ಮತ್ತೆ ಜೈಲಿಗೆ; ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ
ಮುರುಘ ಶ್ರೀಗಳಿಗೆ ಮತ್ತೆ ನ್ಯಾಯಾಂಗ ಬಂಧನ ಆದೇಶ ಮಾಡಿರುವುದು ಮಹತ್ತರವಾದ ಮಕ್ಕಳ ಪರವಾದ ತೀರ್ಪು. ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಶೋಷಣೆಗೊಳಪಟ್ಟ ಮಕ್ಕಳಿಗೆ ನ್ಯಾಯ ಸಿಗುತ್ತೆ ಅನ್ನುವುದಕ್ಕೆ ಇಂತಹ ಆದೇಶಗಳು ಸಾಕ್ಷಿ. ಸಾಕ್ಷಿಗಳ ವಿಚಾರಣೆ ಮಾಡದೆ ಜಾಮೀನು ಕೊಡಲಾಗಿತ್ತು. 2022ರಲ್ಲಿ ನಡೆದ ಪ್ರಕರಣವಾದರೂ ಸಾಕ್ಷಿಗಳ ವಿಚಾರಣೆ ಆಗಿರಲಿಲ್ಲ. ಮುರುಘ ಶ್ರೀ ಪ್ರಬಲವಾದ ವ್ಯಕ್ತಿಯಾಗಿದ್ದು, ಇಡೀ ರಾಜ್ಯದಲ್ಲಿ ತಮ್ಮ ಪ್ರಾಬಲ್ಯ ಹೊಂದಿರುವಂತವರು. ಈ ಪ್ರಕರಣದಲ್ಲಿ ಇವರ ಜೊತೆ ಇದ್ದವರಿಗೂ ಕೂಡ ಜಾಮೀನು ಸಿಕ್ಕಿದೆ. ಹೀಗಾಗಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದರು.
ಮುರುಘಾ ಶ್ರೀಗಳಿಗೆ ಜಾಮೀನು ಸಿಕ್ಕಿದ್ದಷ್ಟೆ ಅಲ್ಲದೆ ಅವರೇ ಸ್ವತಃ ಈಗ ಮಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಚಿತ್ರದುರ್ಗದಿಂದ ಹೊರಗಿದ್ದರೂ, ಅವರ ಪರವಾಗಿರುವವರು ಮಠದಲ್ಲೇ ಇದ್ದು ಕೆಲಸ ನೋಡಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಆರೋಪಿಯನ್ನ ಬೇರೆ ರಾಜ್ಯದಲ್ಲಿ ಇರಿಸಿ ವಿಚಾರಣೆಗೊಳಪಡಿಸಬೇಕು. ಈ ನಿಟ್ಟಿನಲ್ಲಿ ನಾವು ಮತ್ತಷ್ಟು ಹೋರಾಟ ಮಾಡುತ್ತೇವೆ. ಈ ಪ್ರಕರಣ ಎಲ್ಲಾ ಧರ್ಮದ ಮಠಗಳಿಗೆ ಚಾಟಿ ಬೀಸಿದಂತಾಗಿದೆ. ಇದು ಗಂಭೀರವಾದ ಪ್ರಕರಣ. ಈ ಕಾರಣದಿಂದ ತನಿಖೆಯನ್ನ ಸಿಬಿಐ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ