ಮುಡಾ ಸೈಟ್ ಹಂಚಿಕೆಯಲ್ಲಿ ಮತ್ತೊಂದು ಟ್ವಿಸ್ಟ್: ಸಿಎಂ ಖಾಸಗಿ ಪಿಎ ಕುಮಾರ್ ಹಾಗೂ ಸಂಸದ ಕುಮಾರ್‌ ನಾಯಕ್‌ಗೆ ಇಡಿ ವಿಚಾರಣೆ

By Sathish Kumar KH  |  First Published Nov 13, 2024, 12:53 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಹೆಚ್ಚುವರಿ ಸೈಟುಗಳ ಹಂಚಿಕೆ ಪ್ರಕರಣದಲ್ಲಿ ಸಿಎಂ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್‌ ಮತ್ತು ಮಾಜಿ ಜಿಲ್ಲಾಧಿಕಾರಿ ಜಿ. ಕುಮಾರ್ ನಾಯಕ್‌ ಇಡಿ ವಿಚಾರಣೆಗೆ ಒಳಗಾಗಿದ್ದಾರೆ. ಅರ್ಜಿಯಲ್ಲಿ 13 ಸೈಟ್‌ಗಳಿಗೆ ಮನವಿ ಮಾಡಿದ್ದರೂ 14 ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.


ಮೈಸೂರು (ನ.13): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50-50 ನಿಯಮದಲ್ಲಿ 13 ಸೈಟುಗಳನ್ನು ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಮುಡಾದಿಂದ ಹಂಚಿಕೆ ಆಗಿದ್ದು ಮಾತ್ರ 14 ನಿವೇಶನಗಳು. ಇದೀಗ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್‌ನನ್ನು ಹಾಗೂ ಮೈಸೂರು ಮಾಜಿ ಜಿಲ್ಲಾಧಿಕಾರಿ ಆಯುಕ್ತ ಹಾಲಿ ಸಂಸದ ಜಿ. ಕುಮಾರ್ ನಾಯಕ್‌ ಅವರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸಿಎಂ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್ ಮೈಸೂರು ಹಾಗೂ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಯತೀಂದ್ರಗೆ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಅರ್ಜಿಗೆ ಸಹಿ ಮಾಡಿ ಯಡವಟ್ಟು ಮಾಡಿದ್ದ ಆಸಾಮಿ ಇವರೇ ಎಂಬುದು ಬಹಿರಂಗವಾಗಿದೆ. ಇನ್ನು ಆಸ್ತಿಯ ಕ್ರಯಕ್ಕೆ ಅರ್ಜಿ ಹಾಕುವಾಗಲೂ ಯಡವಟ್ಟು ಮಾಡಿದ್ದ ಕುಮಾರ್. ಸಿಎಂ‌ ಪತ್ನಿ ಕೇಳಿದ್ದು 13 ಸೈಟ್, ಆದರೆ ಖಾತೆ ಮಾಡಿಕೊಟ್ಟಿ‌ದ್ದು 14 ಸೈಟ್. ಸಿಎಂ ಪತ್ನಿ ಪಾರ್ವತಿ ಹೆಸರಿಲ್ಲಿ ಅರ್ಜಿ ಹಾಕಿ 13 ಸೈಟ್ ಖಾತೆಗೆ ಮನವಿ ಮಾಡಲಾಗಿತ್ತು.
ನಮ್ಮ 13 ಸೈಟ್ ಖಾತೆ ನೋಂದಣಿ ಮಾಡಿಕೊಡುವಂತೆ ಅರ್ಜಿಯನ್ನು ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಸಲ್ಲಿಕೆ ಮಾಡಿದ್ದರು. 13-01-2022 ರಂದು ಕ್ರಯಪತ್ರವನ್ನು ನೋಂದಣಿ ಮಾಡಿಸಲಾಗಿದೆ. ಇದನ್ನು ಖಾತೆ ಮಾಡಿಕೊಡಿ ಎಂದು ಅರ್ಜಿ ಹಾಕಲಾಗಿತ್ತು. ಪಾರ್ವತಿ ಅವರ ಹೆಸರಿನಲ್ಲಿ ಅರ್ಜಿ ಹಾಕಿದ್ದ ಸಿಎಂ ಖಾಸಗಿ ಆಪ್ತ ಸಹಾಯಕ ಎಸ್.ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್. ಆದರೆ, ಆ ಅರ್ಜಿಯಲ್ಲಿಯೂ ಹಲವು ತಪ್ಪುಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿದ್ದರು.

Latest Videos

undefined

ಇದನ್ನೂ ಓದಿ: 120 ನಿಮಿಷ ವಿಚಾರಣೆ, ಸಿದ್ದರಾಮಯ್ಯ 40 ವರ್ಷಗಳ ಕ್ಲೀನ್ ಇಮೇಜ್‌ಗೆ ಮುಡಾ ಕೊಳ್ಳಿ !

ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಕುಮಾರ್, ಮೊದಲಿಗೆ ಖಾತೆ ಮಾಡಿಕೊಡುವಂತೆ ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ ಅರ್ಜಿ ನೀಡಿ ಸಹಿ ಮಾಡಿದ್ದಾನೆ. ಈ ಅರ್ಜಿಯಲ್ಲಿ 13 ನಿವೇಶನ ಸಂಖ್ಯೆ ನಮೂದಿಸಿ ಮನವಿ ಪತ್ರ ಸಲ್ಲಿಕೆಯಾಗಿದೆ. ವಿಜಯನಗರ 3 ನೇ ಹಂತ ಸಿ,ಡಿ,ಇ & ಜಿ ಬ್ಲಾಕ್ ನಲ್ಲಿ ನಿವೇಶನ ಸಂ. 25, 331, 332, 213, 214, 215, 05 ಮತ್ತು ವಿಜಯನಗರ 4 ನೇ ಹಂತ 2 ನೇ ಫೇಸ್ ನಿವೇಶನ ಸಂಖ್ಯೆ 5108, 5085, 11189, 10855, 12065, & 12068 ಸಂಖ್ಯೆಯ ನಿವೇಶನ ಖಾತೆಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಬೆನ್ನಲ್ಲಿಯೇ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನ‌ ಮೂಡಿಸಿತ್ತು. ಸಿಎಂ ಕುಟುಂಬ ಹಾಗೂ ಮುಡಾ ಅಧಿಕಾರಿಗಳು ಬದಲಿ ನಿವೇಶನ ನೀಡುವಾಗ ಹೆಜ್ಜೆ ಹೆಜ್ಜೆಗೂ ತಪ್ಪು ಮಾಡುತ್ತಲೇ ಹೋಗುದ್ದಾರೆ. ಇದೀಗ ಅಧಿಕಾರಿಗಳು, ಸಿಎಂ ಆಪ್ತ, ಸಿಎಂ ಪತ್ನಿ ಹಾಗೂ ಸಂಬಂಧಿಕರು, ನಿವೇಶನ ಮಾರಾಟ ಮಾಡಿದ ವ್ಯಕ್ತಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಸದ ಜಿ. ಕುಮಾರ ನಾಯಕ ವಿಚಾರಣೆ:  ಮೈಸೂರಿನಲ್ಲಿ 2002ರಿಂದ 2005ರವರೆಗೆ 3 ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್ ಅವರ ಅವಧಿಯಲ್ಲಿ ಮುಡಾಗೆ ಜಮೀನು ಸೇರಿದ ಮೇಲೂ ಅದನ್ನು ವಾಪಸ್ ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಲಾಗಿತ್ತು. ಈ ವೇಳೆ ಕುಮಾರ್ ನಾಯಕ್ ಅವರಿಂದ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಇಡಿ ಅಧಿಕಾರಿಗಳಿಂದ ಕುಮಾರ್ ನಾಯಕ್ ವಿಚಾರಣೆ ಮಾಡುತ್ತಿದ್ದಾರೆ. ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ನಿವೇಶನ ಮಾರಾಟ ಮಾಡುವುದಕ್ಕಿಂತ ಮೊದಲು ದೇವರಾಜು ಅವರು 2000ರಲ್ಲಿ ಮೂಡಾ ವಶಕ್ಕೆ ತಮ್ಮ ಜಮೀನು ಪಡೆಯದಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ವೇಳೆ ಆಗಿನ ಡಿಸಿ ಕುಮಾರ್ ನಾಯ್ಕ್ ಗೆ ದೇವರಾಜು ಪತ್ರ ಬರೆದಿದ್ದರು.

ಇದನ್ನೂ ಓದಿ:News Hour: ಮುಡಾದಲ್ಲಿ ಒಬ್ಬನಿಗೆ 26 ಸೈಟ್‌, 60 ವರ್ಷಗಳ ಬಳಿಕ ಪರಿಹಾರ!

ಇದಾದ ನಂತರ ಡಿಸಿ ಕುಮಾರ ನಾಯಕ್ ಅವರು, ದೇವರಾಜು ತಮ್ಮ ಜಮೀನಿನ ಭೂ ಸ್ವಾಧೀನ ಕೈಬಿಡಿ ಎಂದು ಕೋರಿದ್ದ ಪತ್ರವನ್ನು ಆಧಾರದ ಮೇಲೆ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿಕೊಂಡು ವರದಿ ನೀಡುವಂತೆ ಸೂಚನೆ ನೀಡಿದ್ದರು. ಆದರೆ, ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡದೆಯೇ ವರದಿ ನೀಡಿದ್ದರು. ತಹಸೀಲ್ದಾರ್ ವರದಿ ಆಧರಿಸಿ ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಲಾಗಿತ್ತು. ಆಗ ಮುಡಾ ವಶಕ್ಕೆ ಪಡೆದಿದ್ದ ದೇವರಾಜು ಭೂಮಿ 2003ರಲ್ಲಿ ಕೃಷಿ ಭೂಮಿಯಾಗಿ ಪರಿವರ್ತನೆ ಆಗುತ್ತದೆ. ದೇವರಾಜು 2004ರಲ್ಲಿ ಇದೇ 3.16 ಎಕರೆ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದಾರೆ. ಹೀಗಾಗಿ, ಕುಮಾರ್ ನಾಯ್ಕ್ ಗೆ ವಿಚಾರಣೆಗೆ ಇಡಿ ಕರೆದಿತ್ತು. ಸದ್ಯ ಮೇಲಿನ ಅಂಶಗಳನ್ನು ಇಟ್ಟುಕೊಂಡು ಕುಮಾರ್ ನಾಯ್ಕ ವಿಚಾರಣೆ ಮಾಡಲಾಗುತ್ತಿದೆ.

click me!