ರಾಗಿ ಬೆಂಬಲ ಬೆಲೆ ದುಡ್ಡು ರೈತರ ಸಾಲಕ್ಕೆ ಜಮಾ..!

By Kannadaprabha News  |  First Published Jul 27, 2021, 9:52 AM IST
  • ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಖರೀದಿಸಿದ್ದ ರಾಗಿಯ ಹಣ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆ
  • ರೈತರ ಹಳೆಯ ಸಾಲದ ಮೊತ್ತಕ್ಕೆ ಬೆಂಬಲ ಬೆಲೆ ಜಮೆ 

ಬೆಂಗಳೂರು (ಜು.27):  ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಖರೀದಿಸಿದ್ದ ರಾಗಿಯ ಹಣ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗುತ್ತಿದ್ದಂತೆ ರೈತರ ಹಳೆಯ ಸಾಲದ ಮೊತ್ತವನ್ನು ಬ್ಯಾಂಕ್‌ಗಳು ಮುರಿದುಕೊಳ್ಳುತ್ತಿದ್ದು, ಇದಕ್ಕೆ ರೈತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬ್ಯಾಂಕ್‌ನಲ್ಲಿ ಚೆಕ್‌ ಕೊಟ್ಟು ಟೋಕನ್‌ ಹಿಡಿದು ಹಣಕ್ಕಾಗಿ ಕೌಂಟರ್‌ ಮುಂದೆ ರೈತರು ನಿಂತಾಗ, ಖಾತೆ ಪರಿಶೀಲಿಸಿ ಸಾಲ ಇರುವ ಬಗ್ಗೆ ದೃಢಪಡಿಸಿಕೊಳ್ಳುವ ಬ್ಯಾಂಕ್‌ ಸಿಬ್ಬಂದಿ ರೈತರಿಗೆ ಹಣ ನೀಡದೆ ಬ್ಯಾಂಕ್‌ ಮ್ಯಾನೇಜರ್‌ ಬಳಿ ಕಳುಹಿಸುತ್ತಿದ್ದಾರೆ. 

Latest Videos

undefined

ಅಲ್ಲಿ ರೈತರೊಂದಿಗೆ ಚೌಕಾಶಿ ನಡೆಸುವ ವ್ಯವಸ್ಥಾಪಕರು, ಹಳೆಯ ಸಾಲಕ್ಕೆ ಪೂರ್ತಿ ಹಣ ಮುರಿದುಕೊಳ್ಳುತ್ತೇವೆ ಎಂದು ಮೊದಲಿಗೆ ಪೀಠಿಕೆ ಹಾಕಿ ನಂತರ ಬೆಂಬಲ ಬೆಲೆ ಯೋಜನೆಯಡಿ ಆ ರೈತರ ಖಾತೆಗೆ ಎಷ್ಟುಹಣ ಜಮೆಯಾಗಿರುತ್ತದೆಯೋ ಅದರ ಆಧಾರದ ಮೇಲೆ ಶೇ.20ರಿಂದ 30 ಹಣವನ್ನು ಸಾಲದ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಎಷ್ಟುಗೋಗರೆದರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ.

ಗುಡ್ ನ್ಯೂಸ್ : 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ

ರಾಗಿಗೆ ಕ್ವಿಂಟಲ್‌ಗೆ 3339 ರು. ಬೆಂಬಲ ಬೆಲೆಯನ್ನು ಸರ್ಕಾರ ನೀಡಿದ್ದು, ಗರಿಷ್ಠ ಎಂದರೆ 50 ಕ್ವಿಂಟಲ್‌ವರೆಗೆ ರೈತರ ಖಾತೆಗೆ ಹಣ ಜಮೆಯಾಗಿದೆ. ಕಡಿಮೆ ಬೆಳೆದವರು ತಮ್ಮ ಪಹಣಿಯಲ್ಲಿ ಬೇರೆಯವರ ರಾಗಿಯನ್ನೂ ಎಪಿಎಂಸಿಗಳಿಗೆ ಹಾಕಿದ್ದಾರೆ. ಆದರೆ, ಬ್ಯಾಂಕ್‌ಗಳ ಈ ಕಾರ್ಯದಿಂದ ಅಂತಹವರು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ವರ್ಷ ಕೋವಿಡ್‌ ಸಂಕಷ್ಟದಿಂದಾಗಿ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ರೈತರು ಸಂಕಷ್ಟಅನುಭವಿಸಿದ್ದರು. ತರಕಾರಿ ಬೆಳೆದಿದ್ದರೂ ಮಾರುಕಟ್ಟೆಗಳು ಪ್ರಾರಂಭವಾಗಿರಲಿಲ್ಲ. ಬೆಲೆಯಲ್ಲೂ ಕುಸಿತ ಉಂಟಾಗಿತ್ತು. ಇದೀಗ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ರಾಗಿ ಬಿತ್ತಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೊಲಗಳನ್ನು ಉಳುಮೆ ಮಾಡಿಟ್ಟುಕೊಂಡಿದ್ದು ಬೀಜ ಮತ್ತು ಗೊಬ್ಬರಕ್ಕೆ ಹಣದ ಅವಶ್ಯಕತೆಯಿದೆ. ಆದರೆ, ಬ್ಯಾಂಕ್‌ಗಳು ಹೀಗೆ ಮಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಒಟಿಎಸ್‌ಗೂ ಕುತ್ತು:  ಬ್ಯಾಂಕ್‌ ಸಾಲ ಎನ್‌ಪಿಎ (ನಾನ್‌ ಪರ್‌ಫಾರ್ಮಿಂಗ್‌ ಅಸೆಟ್‌) ಆಗಿದ್ದರೆ ರೈತರು ಬ್ಯಾಂಕ್‌ ವ್ಯವಸ್ಥಾಪಕರೊಂದಿಗೆ ಮಾತನಾಡಿ ಒನ್‌ ಟೈಂ ಸೆಟ್‌್ಲಮೆಂಟ್‌ (ಒಟಿಎಸ್‌) ಮಾಡಿಕೊಳ್ಳಲು ಅವಕಾಶವಿರುತ್ತದೆ. ಸೆಟ್‌್ಲಮೆಂಟ್‌ ಮಾಡಿಕೊಂಡರೆ ಒಂದಷ್ಟುಮೊತ್ತವನ್ನು ಬಿಟ್ಟು ಉಳಿದ ಹಣ ಪಾವತಿಸಬಹುದು. ಆದರೆ ಎನ್‌ಪಿಎ ಆದ ಸಾಲದ ಖಾತೆಗಳಿಗೂ ಇದೀಗ ಬೆಂಬಲ ಬೆಲೆ ಯೋಜನೆಯಡಿ ಬಂದ ಒಂದಷ್ಟುಹಣ ಜಮಾ ಮಾಡುತ್ತಿರುವುದರಿಂದ ಸೆಟಲ್ಮೆಂಟ್‌ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ನಾವೊಬ್ಬರೇ ಕಟ್‌ ಮಾಡಿಲ್ಲ

ಎಲ್ಲಾ ಕಡೆ, ಎಲ್ಲಾ ಬ್ಯಾಂಕ್‌ಗಳೂ ರೈತರ ಖಾತೆಗಳಿಗೆ ಬಂದ ಬೆಂಬಲ ಬೆಲೆ ಯೋಜನೆಯ ಹಣವನ್ನು ಬ್ಯಾಂಕ್‌ನ ಹಳೆಯ ಸಾಲಗಳಿಗೆ ಒಂದಷ್ಟನ್ನು ಜಮಾ ಮಾಡಿಕೊಳ್ಳುತ್ತಿವೆ. ನಮ್ಮ ಬ್ಯಾಂಕ್‌ನಲ್ಲೂ ಜಮಾ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ಚನ್ನಕೇಶವ.

ಸರ್ಕಾರದ ಯಾವುದೇ ಯೋಜನೆಯ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ. ಈ ಬಗ್ಗೆ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ, ನಬಾರ್ಡ್‌ಗಳು ಸೂಚನೆ ನೀಡಿವೆ. ಒಂದೊಮ್ಮೆ ಯಾವುದೇ ಬ್ಯಾಂಕ್‌ ಸಾಲಕ್ಕೆ ಜಮಾ ಮಾಡಿಕೊಂಡರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕು. ಜಿಲ್ಲಾಧಿಕಾರಿಗಳು ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

- ಕುರುಬೂರು ಶಾಂತಕುಮಾರ್‌, ರೈತ ಮುಖಂಡ

1 ರು. ಸಹ ಕಡಿತ ಮಾಡಬಾರದು

ಕೊರೋನಾ ಹೊಡೆತದಿಂದಾಗಿ ನಾಡಿನ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಂಕ್‌ಗಳು ಸಭ್ಯತೆಯಿಂದ ನಡೆದುಕೊಳ್ಳಬೇಕು. ಬೆಂಬಲ ಬೆಲೆ ಯೋಜನೆಯಡಿ ರೈತರ ಖಾತೆಗೆ ಜಮೆಯಾದ ಹಣದಲ್ಲಿ ಒಂದು ರುಪಾಯಿಯನ್ನೂ ಸಹ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಆಗ್ರಹಿಸಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಮುಂದಿನ ಬಿತ್ತನೆ ಕಾರ್ಯಗಳಿಗೆ ಆ ಹಣ ಬಳಸಲು ಯೋಜನೆ ಹಾಕಿಕೊಂಡಿದ್ದ ರೈತರಿಗೆ ಬ್ಯಾಂಕ್‌ಗಳ ಕಾರ್ಯದಿಂದ ಭಾರಿ ಹೊಡೆತ ಬಿದ್ದಿದೆ. ಇಂತಹ ಸಮಯದಲ್ಲಿ ಸಾಲ ವಸೂಲಿಗೆ ಇಳಿದಿರುವುದು ಅಮಾನವೀಯ. ವಸೂಲಿ ಮಾಡಿರುವ ಸಾಲವನ್ನು ಕೂಡಲೇ ಆಯಾ ರೈತರ ಖಾತೆಗಳಿಗೆ ವಾಪಸ್‌ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

click me!