
ಬೆಂಗಳೂರು (ಫೆ.8): ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ನಾಳೆಯಿಂದ ಜಾರಿಗೆ ಬರಬೇಕಿದ್ದ ಮೆಟ್ರೋ ಟಿಕೆಟ್ ದರ ಏರಿಕೆ ವಿರುದ್ಧ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ರಣಕಹಳೆ ಮೊಳಗಿಸಿದ್ದಾರೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ:
ಮೆಟ್ರೋ ಟಿಕೆಟ್ ದರ ಏರಿಕೆಯನ್ನು ವಿರೋಧಿಸಿ ಇಂದು ಬೆಂಗಳೂರಿನ ಆರ್‌ವಿ ರೋಡ್ (RV Road) ಮೆಟ್ರೋ ನಿಲ್ದಾಣಕ್ಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಭೇಟಿ ನೀಡಿದರು. ವಿಶೇಷವೆಂದರೆ, ಇಬ್ಬರೂ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ಬರುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು. ಸಂಸದರು ಧರಿಸಿದ್ದ ಟೀ ಶರ್ಟ್ ಮೇಲೆ 'Mr. CM cut the dram'(ಮುಖ್ಯಮಂತ್ರಿಗಳೇ ನಾಟಕ ನಿಲ್ಲಿಸಿ) ಎಂಬ ಬರಹ ಹಾಗೂ #farehikebeda ಎಂಬ ಹ್ಯಾಶ್‌ಟ್ಯಾಗ್ ಗಮನ ಸೆಳೆಯಿತು.
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ತೇಜಸ್ವಿ ಸೂರ್ಯ, ದರ ಏರಿಕೆಯಿಂದ ಜನರಿಗಾಗುತ್ತಿರುವ ತೊಂದರೆಗಳನ್ನು ಆಲಿಸಿದರು. ಈ ವೇಳೆ ಯುವತಿಯೊಬ್ಬಳು ತನ್ನ ಅಳಲು ತೋಡಿಕೊಳ್ಳುತ್ತಾ, 'ಸರ್, ಮನೆಯಿಂದ ಇಲ್ಲಿಗೆ ಬರಲು ಬಸ್ ರಶ್ ಇರುತ್ತದೆ, ಆಟೋಗೆ ಹತ್ತಿರ ಹತ್ತಿರ 50 ರೂ. ಕೊಡಬೇಕು. ಮೆಟ್ರೋಗೆ ದಿನಕ್ಕೆ 200 ರೂ. ದಾಟುತ್ತಿದೆ. ದಿನಕ್ಕೆ 250 ರೂ. ಕೇವಲ ಪ್ರಯಾಣಕ್ಕೆ ಹೋದರೆ ಬದುಕುವುದು ಹೇಗೆ? ಎಂದು ಪ್ರಶ್ನಿಸಿದರು. ಗಾರ್ಮೆಂಟ್ಸ್ ಕೆಲಸಗಾರರು ಹಾಗೂ ವಿದ್ಯಾರ್ಥಿಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದರು.
ಸಂಸದರು ಧರಿಸಿದ್ದ ಟೀ ಶರ್ಟ್ ಕೇವಲ ಘೋಷಣೆಗಳಿಗೆ ಸೀಮಿತವಾಗಿರಲಿಲ್ಲ. ಫೇರ್ ಫಿಕ್ಸೇಶನ್ ಕಮಿಟಿ (FFC) ಮುಂದೆ ರಾಜ್ಯ ಸರ್ಕಾರದ ಅಧಿಕಾರಿಗಳು ನೀಡಿರುವ ಹೇಳಿಕೆಗಳನ್ನು ಟೀ ಶರ್ಟ್ ಮೇಲೆ ಮುದ್ರಿಸಲಾಗಿತ್ತು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ, ನಮ್ಮ ಬಳಿ ಹಣವಿಲ್ಲ, ಆದ್ದರಿಂದ ದರ ಏರಿಕೆ ಮಾಡಿ ಎಂದು ಅಧಿಕಾರಿಗಳ ಮೂಲಕ ಸಮಿತಿಗೆ ಹೇಳಿಸಲಾಗಿದೆ. ಉಪಮುಖ್ಯಮಂತ್ರಿಗಳು ಖಾಲಿ ಟ್ರಂಕ್ ಅಂತಾರಲ್ಲ, ಈಗ ಗೊತ್ತಾಗುತ್ತಿದೆ ಖಾಲಿ ಟ್ರಂಕ್ ಯಾರು ಅಂತ ಎಂದು ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾಳೆ ದರ ಏರಿಕೆಯಾದರೆ ಹೋರಾಟದ ಎಚ್ಚರಿಕೆ
ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಚರ್ಚಿಸಿರುವ ಬಗ್ಗೆ ಮಾಹಿತಿ ನೀಡಿದ ಸಂಸದರು, ನಾಳೆಯಿಂದ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸಚಿವರು ಮೆಟ್ರೋ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರ ಸಮಿತಿ ಮರು ರಚನೆಗೂ ಸಿದ್ಧವಿದೆ. ಹೀಗಿದ್ದರೂ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ BMRCL ನಾಳೆ ದರ ಏರಿಕೆ ಮಾಡಿದರೆ, ನಾವು ಸುಮ್ಮನಿರುವುದಿಲ್ಲ. ಪ್ರತಿ ಮೆಟ್ರೋ ನಿಲ್ದಾಣದ ಮುಂದೆ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಿ
ಕಳೆದ ವರ್ಷವಷ್ಟೇ 105% ರಷ್ಟು ದರ ಏರಿಕೆ ಮಾಡಿ, ಬಳಿಕ ಜನರ ಆಕ್ರೋಶಕ್ಕೆ ಹೆದರಿ ಲೆಕ್ಕಾಚಾರ ಬದಲಿಸಿದ್ದರು. ಈಗ ಮತ್ತೆ ದರ ಏರಿಕೆಗೆ ಹವಣಿಸುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯಬೇಕು ಮತ್ತು ಹೊಸ ಸಮಿತಿ ರಚನೆಗೆ ಸಹಕರಿಸಬೇಕು. ಪ್ರತಿನಿತ್ಯ 10-12 ಲಕ್ಷ ಜನ ಓಡಾಡುವ ಮೆಟ್ರೋದಲ್ಲಿ ದರ ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಇಲ್ಲವಾದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೂರ್ಯ ಗುಡುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ