
ದಾವಣಗೆರೆ (ಜು.23): ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದ್ದು, ನಾವೆಲ್ಲಾ ಸಮಾಜ ಬಾಂಧವರು, ಗುರು-ವಿರಕ್ತರು-ಭಕ್ತರು ಒಂದಾದರೆ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದು ಹಾವೇರಿ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಎಲ್ಲ ಗುರುಭಕ್ತರು ಒಂದಾದರೆ, ಈ ಸಮಾಜವನ್ನು ತಡೆಯುವವರೇ ಯಾರೂ ಇಲ್ಲ ಎಂಬುದನ್ನು ಅರಿಯೋಣ ಎಂದರು.
ಬಹಳ ಸಂಕೀರ್ಣ ಕಾಲದಲ್ಲಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ನಮಗೆ ಬಹಳ ದೊಡ್ಡ ಇತಿಹಾಸವಿದೆ. ಅಷ್ಟೇ ಗಟ್ಟಿಯಾದ ಭವಿಷ್ಯವೂ ಇದೆ. ಚಿಂತನೆ ಮಾಡುವ ಕಾಲ ಇದಾಗಿದೆ. ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವ ಕಾಲವೂ ಇದಲ್ಲ. ಈ ಬಗ್ಗೆ ವಿಚಾರ ಮಾಡಬೇಕಾಗಿದೆ. ನಮಗೆ ದೊಡ್ಡ ಇತಿಹಾಸದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಇದೆ. ನಮ್ಮದೇ ಆದ ಚಿಂತನೆಯಲ್ಲೂ ನಡೆಯುತ್ತೇವೆ ಎಂದು ತಿಳಿಸಿದರು.
ಅಮೃತಘಳಿಗೆ ನಾಂದಿ: ನಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ. ಮೆದುಳು ಮತ್ತು ಹೃದಯ ಒಂದಾದಾಗ ಅದೇ ಅಮೃತಘಳಿಗೆ. ಚಿಂತನೆ ಮತ್ತು ಭಾವನೆ ಒಂದಾದಾಗ ಅದೇ ಅಮೃತಘಳಿಗೆ. ಪಂಚಪೀಠಾಧೀಶರು ಇಂದು ಅಂತಹ ಅಮೃತಘಳಿಗೆಗೆ ನಾಂದಿ ಹಾಡಿದ್ದಾರೆ. ಗುರುಗಳು ಎಲ್ಲರೂ ಒಟ್ಟಾಗಿರುವುದು ನಮಗೆ ದೊಡ್ಡ ಸ್ಫೂರ್ತಿ, ಶಕ್ತಿಯಾಗಿದೆ. ನಾವೆಲ್ಲಾ ಒಂದಾಗಿ ನಡೆದರೆ ವೀರಶೈವ ಲಿಂಗಾಯತ ಅಷ್ಟೇ ಅಲ್ಲ, ಇಡೀ ಭಾರತ ನಮ್ಮ ಜೊತೆಗೆ ನಡೆಯುತ್ತದೆ ಎಂದು ಎಂದು ಹೇಳಿದರು.
ನ್ಯಾಯ, ನೀತಿ, ಧರ್ಮದ ಚೌಕಟ್ಟಿನಲ್ಲಿ ಸದಾ ನಮ್ಮ ಚಿಂತನೆ ಇರುತ್ತದೆ. ನಾವು ಯಾವ ಚೌಕಟ್ಟಿನಲ್ಲಿದ್ದೇವೋ ಅದೇ ಚೌಕಟ್ಟಿನಲ್ಲಿ ಜಗತ್ತು ಇಲ್ಲ. ನಾವು ಚೌಕಟ್ಟನ್ನೂ ಮೀರಿ ಚಿಂತನೆಯನ್ನು ಬದಲಾಯಿಸಬೇಕಾ ಅಥವಾ ಚಿಂತನೆಯ ಒಳಗೆ ಇರುವವರನ್ನು ಚೌಕಟ್ಟಿನ ಒಳಗೆ ತರಬೇಕಾ ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಶ್ರೀ ರೇಣುಕಾಚಾರ್ಯರಿಂದ ಹಿಡಿದು ಬಸವೇಶ್ವರವರೆಗೆ ಜ್ಞಾನ ಮತ್ತು ಧ್ಯಾನದಿಂದ ಪಡೆದುಕೊಂಡಿರುವ ಚಿಂತನೆ ಒರೆಗೆ ಹಚ್ಚುವ ಕಾಲ ನಮಗೆ ಒದಗಿಬಂದಿದೆ ಎಂದು ಬೊಮ್ಮಾಯಿ ಹೇಳಿದರು.
ಸಮಾಜ ಮುನ್ನಡೆಸುವ ಶಕ್ತಿ ವೀರಶೈವ ಲಿಂಗಾಯತರಿಗಿದೆ. ನಮ್ಮ ಚಿಂತನೆ ಮಾನವೀಯ ತಳಹದಿಯ ಮೇಲಿದೆ. ಗುರು ಮತ್ತು ವಿರಕ್ತರು ಬೇರೆ ಎನ್ನುವ ವಾದ ಬಿಟ್ಟು, ಇಡೀ ಮಾನವ ಕುಲಕ್ಕೆ ನೇತೃತ್ವ ಕೊಡುವ ಸಮಯ ಬಂದಿದೆ. ಮಾನವ ಧರ್ಮಕ್ಕೆ ಜಯವಾಗಲಿ ಅಂತ ರೇಣುಕಾಚಾರ್ಯರು ಹೇಳಿದರು. ಅದೇ ರೀತಿ ದಯವೇ ಧರ್ಮದ ಮೂಲವಯ್ಯ ಅಂತಾ ಬಸವಣ್ಣ ಹೇಳಿದರು. ಇದರಲ್ಲಿ ವ್ಯತ್ಯಾಸ ಏನಿದೆ? ಮಹಾಪುರುಷರು ಒಂದೇ ರೀತಿಯಿಂದ ಚಿಂತನೆ ಮಾಡಿದಾಗ ನಮ್ಮಲ್ಲಿ ಭಿನ್ನತೆ ಏಕೆ ಎಂದು ಪ್ರಶ್ನಿಸಿದರು.
ಸಮಾಜದ ಮೇಲೆ ಧಾರ್ಮಿಕವಾಗಿ ಏನು ಪರಿಣಾಮ ಆಗುತ್ತಿದೆ ಎನ್ನುವ ಅರಿವು ನಮಗಿರಬೇಕು. ಅಂಗೈಯಲ್ಲಿ ಲಿಂಗ ಹಿಡಿದಾಗ ಎಲ್ಲವೂ ಒಂದಾಗುತ್ತದೆ. ಪರಮ ಪೂಜ್ಯರು, ಸಿದ್ಧಾಂತ ಶಿಖಾಮಣಿ, ಬಸವಾದಿ ಶರಣರು ಎಲ್ಲರೂ ಹೇಳುವುದು ಲಿಂಗದಲ್ಲಿ ಐಕ್ಯರಾಗುವುದು. ಯಾರೋ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಲು ಪ್ರಯತ್ನಸುತ್ತಿದ್ದಾರೆ. ಅಂತಹವರ ಬಗ್ಗೆ ನಾವು ಸದಾ ಜಾಗೃತರಾಗಿ ಇರಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚ್ಯವಾಗಿ ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ