ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿ: ಡಿ.ಕೆ.ಶಿವಕುಮಾರ್

Kannadaprabha News   | Kannada Prabha
Published : Jun 27, 2025, 06:55 PM IST
DK Shivakumar

ಸಾರಾಂಶ

ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭಗೊಂಡ ಕಾವೇರಿ ಪೂಜೆ ಕಾರ್ಯಕ್ರಮದ ಕೃಪೆಯಿಂದ ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ತುಮಕೂರು (ಜೂ.27): ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭಗೊಂಡ ಕಾವೇರಿ ಪೂಜೆ ಕಾರ್ಯಕ್ರಮದ ಕೃಪೆಯಿಂದ ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಜಿಲ್ಲೆಯ ಗುಬ್ಬಿ ತಾಲೂಕು ಚೇಳೂರು ಹೋಬಳಿ ರಂಗನಹಳ್ಳಿ ಗೇಟ್ ಬಳಿ ಹೇಮಾವತಿ ಯೋಜನೆಯಡಿ ಜಿಲ್ಲೆಯ ಗುಬ್ಬಿ ಹಾಗೂ ಶಿರಾ ತಾಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು ಮಠದಹಳ್ಳ ಹಾಗೂ ಇತರೆ ಕೆರೆಗಳಿಗೆ ನೀರೊದಗಿಸುವ ಏತ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಪ್ರಸ್ತುತ ಕೃಷ್ಣ ರಾಜಸಾಗರ, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳು ಶೇ.85ರಷ್ಟು ಭರ್ತಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರಮುಖ ಜಲಾಶಯಗಳು ಶೇ.30ರಷ್ಟು ಮಾತ್ರ ಭರ್ತಿಯಾಗಿದ್ದವು. ಉತ್ತಮ ಮಳೆಯಿಂದ ಎಲ್ಲಾ ಕೆರೆಗಳು ತುಂಬಿರುವುದರಿಂದ ರೈತರು ನಿರಾತಂಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದು ತಿಳಿಸಿದರು. ಮಠದಹಳ್ಳ ಹಾಗೂ ಇತರೆ ಕೆರೆಗಳಿಗೆ ನೀರೊದಗಿಸುವ ಏತ ಯೋಜನೆ ಕಾಮಗಾರಿಯನ್ನು ಒಂದು ವರ್ಷದೊಳಗಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿಯ 20 ಗ್ರಾಮ ಹಾಗೂ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ 22 ಗ್ರಾಮ ಸೇರಿದಂತೆ ಒಟ್ಟು 42 ಗ್ರಾಮಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟವು ಅತೀ ಕಡಿಮೆ ಇರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸಲು ಹಾಗಲವಾಡಿ ಹೋಬಳಿ ಮಂಚಲದೊರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಠದಹಳ್ಳ, ಕುರುಬರಹಳ್ಳಿ ಹಾಗೂ ಶೇಷನಹಳ್ಳಿ ಕೆರೆಗಳಿಗೆ ತುಮಕೂರು ಶಾಖಾ ಹೇಮಾವತಿ ನಾಲೆ ಸರಪಳಿ 101.725 ಕಿ.ಮೀ.ನಿಂದ ಏತ ಯೋಜನೆ ಮೂಲಕ 64.48 ಎಂ.ಸಿ.ಎಫ್.ಟಿ. ನೀರು ತುಂಬಿಸಲು ಯೋಜಿಸಲಾಗಿದೆ.

ಈ ಯೋಜನೆಗಾಗಿ ಸರ್ಕಾರದಿಂದ 48.75 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ತಿಳಿಸಿದರು. ಶಿರಾ ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಏತ ಯೋಜನೆಯನ್ನು ರೂಪಿಸಲಾಗಿತ್ತು. ಸದರಿ ಯೋಜನೆಯನ್ನು ಈಗ ಕಾರ್ಯಗತಗೊಳಿಸಲಾಗುತ್ತಿದ್ದು, ಮುಂದಿನ 1 ವರ್ಷದಲ್ಲಿ ನೀರು ಹರಿಯುವಂತಾಗಬೇಕು. ಹೇಮಾವತಿ ಯೋಜನೆಯಡಿ ಜಿಲ್ಲೆಗೆ 24 ಟಿ.ಎಂ.ಸಿ. ನೀರಿನ ಪ್ರಮಾಣ ಹಂಚಿಕೆಯಾಗಿದ್ದರೂ ಈವರೆಗೂ 20 ಟಿ.ಎಂ.ಸಿ. ಪ್ರಮಾಣದಷ್ಟು ನೀರು ಜಿಲ್ಲೆಗೆ ಹರಿದಿಲ್ಲ. ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಹೇಮಾವತಿ ನಾಲೆಗೆ ಹರಿಸಲು ಸಭೆ ನಡೆಸಬೇಕೆಂದು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಏತ ನೀರಾವರಿ ಯೋಜನೆಯು ಈ ಭಾಗದ ಜನರ ಸುಮಾರು 25 ವರ್ಷಗಳ ಹೋರಾಟದ ಪ್ರತಿಫಲವಾಗಿದೆ. ಈ ನೀರಾವರಿ ಯೋಜನೆಯನ್ನು ಕೈಗೊಳ್ಳದಿರುವ ಕಾರಣ ಸ್ಥಳೀಯ ಗ್ರಾಮ ಪಂಚಾಯತಿ ಚುನಾವಣೆಯನ್ನು ಜನರು ಬಹಿಷ್ಕರಿಸಿದ್ದರು. ಉಪ ಮುಖ್ಯಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಚಿರಋಣಿಯಾಗಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಿರಣ್ ಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ತಹಶೀಲ್ದಾರ್ ಆರತಿ, ಎತ್ತಿನಹೊಳೆ ಹಾಗೂ ಹೇಮಾವತಿ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮುರಳೀಧರ್ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!
VB–G RAM G Bill 2025: ಗಾಂಧೀಜಿ, ಹೋರಾಟಗಾರರಿಗೆ ಅಪಮಾನ: ಕೇಂದ್ರದ ವಿರುದ್ಧ ಉಗ್ರಪ್ಪ ಕೆಂಡಾಮಂಡಲ!