ರಾಜ್ಯಾದ್ಯಂತ ವರುಣರಾಯನ ಅಬ್ಬರ ಜೋರಾಗಿದೆ. 10 ಜಿಲ್ಲೆಗಳು ಮಳೆಗೆ ನಲುಗಿ ಹೋಗಿದ್ದು, ಗುರುವಾರ ಒಂದೇ ದಿನ 8 ಮಂದಿಯನ್ನು ಬಲಿ ಪಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಆ.08): ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಬುಧವಾರ 8 ಮಂದಿ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಗುವೊಂದು ಸೇರಿ ನಾಲ್ವರು ಕೊನೆಯುಸಿರೆಳೆದಿದ್ದು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಇಬ್ಬರು ಸೇರಿದಂತೆ ಒಟ್ಟು 8 ಮಂದಿ ಬಲಿಯಾಗಿದ್ದಾರೆ.
ಹೃದಯಾಘಾತದಿಂದ ಯುವತಿ ಸಾವು:
ಘಟಪ್ರಭಾ ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರ ಗ್ರಾಮದಲ್ಲಿ ಮನೆಗೆ ಏಕಾಏಕಿ ನೀರು ನುಗ್ಗಿದ್ದನ್ನು ಕಂಡು ಹೃದಯಾಘಾತವಾಗಿ ಮಾನಸಿಕ ಅಸ್ವಸ್ಥಳಾದ ಪದ್ಮಾವತಿ ಮಹಾದೇವ ಪಾಟೀಲ(19) ಎಂಬ ಯುವತಿ ಮೃತಪಟ್ಟಿದ್ದಾಳೆ.
ಮೈದುಂಬಿ ಧುಮ್ಮಿಕ್ಕುತ್ತಿದೆ ಜೋಗ ಜಲಪಾತ: ಕಣ್ಮನ ಸೆಳೆಯುತ್ತಿದೆ ದೃಶ್ಯ
ಬೆಳಗಾವಿ ತಾಲೂಕಿನ ಚಂದನಹೊಸೂರ ಗ್ರಾಮದಲ್ಲಿ ಮನೆ ಕುಸಿದು ಯಲ್ಲೇಶ ಗಂಗಾರಾಮ ಬಣ್ಣವರ (38) ಮೃತಪಟ್ಟರೆ, ಅಥಣಿ ತಾಲೂಕಿನಲ್ಲಿ ಮನೆ ಜಲಾವೃತವಾಗಿ ಮಗುವೊಂದು ನೀರಲ್ಲಿ ಮುಳುಗಿ ಮೃತಪಟ್ಟಿದೆ. ಅಥಣಿ ತಾಲೂಕಿನ ಸಪ್ತಸಾಗರದ ಬಳಿ ಕೃಷ್ಣಾ ನದಿಯಲ್ಲಿ ಬಸವರಾಜ ಕಾಂಬಳೆ (16) ಎಂಬುವರು ಕೊಚ್ಚಿ ಹೋಗಿದ್ದಾನೆ.
ವಿದ್ಯುತ್ ಶಾಕ್‌ಗೆ ರೈತ ಬಲಿ:
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿಯಲ್ಲಿ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಮೇಲೆ ಕಾಲಿಟ್ಟಪರಿಣಾಮ ಕರೆಂಟ್ ಹೊಡೆದು ಲೇಕಪ್ಪ (45) ಎಂಬ ರೈತ ಮೃತಪಟ್ಟರೆ, ತುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ವ್ಯಕ್ತಿಯೊಬ್ಬರು ಶಿವಮೊಗ್ಗದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಹೇಮಾವತಿ ಪಾಲು:
ಚಿಕ್ಕಮಗಳೂರು ಜಿಲ್ಲೆಯ ದಿಣ್ಣೆ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕುಮಾರ್ (45) ಎಂಬುವರು ಮೃತಪಟ್ಟಿದ್ದರೆ, ಮೂಡಿಗೆರೆ ತಾಲೂಕಿನ ಹಾಲೂರು ಗ್ರಾಮದ ಶ್ರೀವತ್ಸ (21) ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.