ಸರ್ಕಾರದ ಶಿಕ್ಷಣ ಸಲಹೆಗಾರ ದೊರೆಸ್ವಾಮಿ ಅವರು, ರಾಜ್ಯದ ಎಲ್ಲಾ ಶಾಸಕರಿಗೂ ಪತ್ರ ಬರೆದು ರಾಜ್ಯದಲ್ಲಿ ಶಿಕ್ಷಣ ಸುಧಾರಣೆ ದೃಷ್ಟಿಯಿಂದ ತಮ್ಮ ಕ್ಷೇತ್ರದ ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವಂತೆ ಕೋರಿದ್ದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜು.10): ರಾಜ್ಯದ ಪ್ರತಿಯೊಬ್ಬ ಶಾಸಕರೂ ತಮ್ಮ ಕ್ಷೇತ್ರದ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವಂತೆ ಸರ್ಕಾರದ ಶಿಕ್ಷಣ ಸಲಹೆಗಾರ ಪ್ರೊ. ಎಂ.ಆರ್.ದೊರೆಸ್ವಾಮಿ ಅವರು ನೀಡಿದ್ದ ಕರೆಗೆ ಸ್ಪಂದನೆ ದೊರೆತಿದ್ದು, ಮಾಗಡಿ ಶಾಸಕ ಎ.ಮಂಜುನಾಥ್ ತಮ್ಮ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಮಂಜುನಾಥ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಬೈರಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಟಗಲ್ ಹೋಬಳಿಯ ಜಾಲಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಗಡಿ ತಾಲ್ಲೂಕು ಕುದೂರು ಹೋಬಳಿಯ ಹುಲಿಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಜತೆಗೆ, ಈ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ.
undefined
ಜತೆಗೆ, ದೊರೆಸ್ವಾಮಿ ಅವರಿಗೆ ಪತ್ರ ಬರೆದಿರುವ ಶಾಸಕ ಮಂಜುನಾಥ್ ಅವರು, ‘ಪ್ರತಿಯೊಬ್ಬ ಶಾಸಕನೂ ಪ್ರತೀ ವರ್ಷ ಮೂರು ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸಬೇಕೆಂಬ ತಮ್ಮ ಸಲಹೆ ಅತ್ಯಂತ ಅರ್ಥಪೂರ್ಣವಾಗಿದ್ದು, ಅದರಂತೆ ನಾನು ನನ್ನ ಕ್ಷೇತ್ರದ ಮೂರು ಶಾಲೆಗಳನ್ನು ದತ್ತು ಪಡೆದಿದ್ದು, ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ತಮಗೆ ಈ ಮೂಲಕ ತಿಳಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ದೊರಸ್ವಾಮಿ ಹರ್ಷ:
ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ಪಿಇಎಸ್ ವಿವಿ ಕುಲಾಧಿಪತಿಯೂ ಆದ ಸರ್ಕಾರದ ಶಿಕ್ಷಣ ಸಲಹೆಗಾರ ದೊರೆಸ್ವಾಮಿ ಅವರು, ರಾಜ್ಯದ ಎಲ್ಲಾ ಶಾಸಕರಿಗೂ ಪತ್ರ ಬರೆದು ರಾಜ್ಯದಲ್ಲಿ ಶಿಕ್ಷಣ ಸುಧಾರಣೆ ದೃಷ್ಟಿಯಿಂದ ತಮ್ಮ ಕ್ಷೇತ್ರದ ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವಂತೆ ಕೋರಿದ್ದೆ. ಶಾಲೆಗಳ ಅಭಿವೃದ್ಧಿಗೆ ಕಾರ್ಪೋರೆಟ್ ಸಂಸ್ಥೆಗಳು, ದಾನಿಗಳು, ಇತರೆ ಸಂಘ ಸಂಸ್ಥೆಗಳು ಹಾಗೂ ಅನಿವಾಸಿ ಭಾರತೀಯರ ನೆರವು ಪಡೆದು ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು ಎಂದು ತಿಳಿಸಿದ್ದೆ.
ಶೈಕ್ಷಣಿಕ ಸುಧಾರಣೆ: ಸಿಎಂಗೆ ದೊರೆಸ್ವಾಮಿ ಕೊಟ್ಟ 5 ಸಲಹೆ..!
ಶಾಲೆಗಳ ಅಭಿವೃದ್ಧಿಗೆ ಶಾಸಕರು ಈ ಕೈಂಕರ್ಯ ಕೈಗೊಂಡರೆ ರಾಜ್ಯದಲ್ಲಿ ಹೊಸ ಶೈಕ್ಷಣಿಕ ಮನ್ವಂತರ ಆರಂಭವಾಗಲಿದೆ ಎಂದು ತಿಳಿಸಿದ್ದೆ. ಇದಕ್ಕೆ ಮಂಜುನಾಥ್ ಸ್ಪಂದಿಸಿ ಕಾರ್ಯತತ್ಪರರಾಗಿದ್ದಾರೆ. ಮಂಜುನಾಥ್ ಅವರಂತೆಯೇ ಇತರ ಶಾಸಕರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದ್ದಾರೆ.