
ಬೆಳಗಾವಿ(ಡಿ.11): ಯತೀಂದ್ರ ಅವರ ಹೇಳಿಕೆಗಳಿಂದ ಸಿಎಂಗೆ ಮುಜುಗರವಾಗುವುದು ಸಹಜ. ಆ ರೀತಿ ಹೇಳಿಕೆ ಕೊಡಬಾರದು ಈಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ರಾಜ್ಯ ರಾಜಕೀಯದಲ್ಲಿ ಉಂಟಾದ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಒಟ್ಟಿಗೆ ಕುಳಿತು ಊಟ ಮಾಡಿದ ಬಳಿಕವೂ ತಾವು ಯತೀಂದ್ರ ಅವರನ್ನು ಭೇಟಿ ಮಾಡಿಲ್ಲ ಎಂದ ಸತೀಶ್ ಜಾರಕಿಹೊಳಿ ಅವರು, ಸಿಎಂ ಹೇಳಿಕೆ ಗೊಂದಲ ವಿಚಾರವು ವರಿಷ್ಠರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು. ಈಗ ಆಗಿದ್ದು ಆಗಿಹೋಗಿದೆ ವಾಪಾಸ್ ಬರಲ್ಲ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳೋಣ. ಎಲ್ಲರೂ ಕೂಡಿ ಮುಂದೆ ಹೀಗೆ ಆಗದ ಹಾಗೆ ಮಾತಾಡೋಣ ಎಂದು ತಿಳಿಸಿದರು. ಯತೀಂದ್ರ ಅವರ ಹೇಳಿಕೆಗಳು ಪಕ್ಷಕ್ಕೆ ಏನು ಲಾಭ, ನಷ್ಟ ತರುತ್ತದೆ ಎಂಬುದರ ಕುರಿತು ಚರ್ಚಿಸಲು ತಾವು ಸಂಜೆ ಅಥವಾ ನಾಳೆ ಅವರ ಜೊತೆಗೆ ಮಾತನಾಡುತ್ತೇನೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.
ಯತೀಂದ್ರ ಅವರ ಹೇಳಿಕೆಯಿಂದ ಸಿಎಂಗೆ ಮುಜುಗರ ಆಯ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು (ಯತೀಂದ್ರ) ಹೇಳಬಾರದು. ಅವರ ಪರವಾಗಿ ಬೇರೆ ಯಾರಾದ್ರೂ ಹೇಳಿದ್ರೆ ಓಕೆ. ಅವರು ಹೇಳಿರೋದ್ರಿಂದ ಸ್ವಲ್ಪ ಮುಜುಗರ ಆಗುತ್ತೆ. ಬೇರೆ ಅವರು ಹೇಳಿದ್ರೆ ಅದಕ್ಕೆ ಮಹತ್ವ ಇರುತ್ತೆ ಎಂದರು.
ತಮ್ಮನ್ನು ಸಿಎಂ ಮಾಡಬೇಕು ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ, ಆ ಪ್ರಶ್ನೆ ಉದ್ಭವಿಸಲ್ಲ ಎಂದು ಸತೀಶ್ ಜಾರಕಿಹೊಳಿ ತಳ್ಳಿಹಾಕಿದರು. ಆ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಸ್ಥಾನದಿಂದ ಇಳಿಯುತ್ತಾರೆ ಎಂದು ಏಕೆ ಭಾವಿಸಬೇಕು? ಇದು ಸುಮಾರು ಒಂದು ವರ್ಷದಿಂದ ನಡೀತಾನೆ ಇದೆ. ಸಿದ್ದರಾಮಯ್ಯ ಅವರ ಜಾಗಕ್ಕೆ ಬೇರೆ ಅವರು ಬರೋಕೆ ಅವಕಾಶ ಇಲ್ಲ, ಅದಕ್ಕೆ ಕಾಯಬೇಕು. ಸಂದರ್ಭ ಮತ್ತು ಸನ್ನಿವೇಶಗಳನ್ನು ನೋಡೋಣ. ಸದ್ಯಕ್ಕೆ ಆ ರೀತಿಯ ಸನ್ನಿವೇಶ ನಮ್ಮ ಪಕ್ಷದಲ್ಲಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಪೂರ್ಣ 5 ವರ್ಷ ಮುಂದುವರೆಯುತ್ತಾರೆಯೇ ಎಂಬ ಪ್ರಶ್ನೆಗೆ, ಈಗ ಮಾಡಿರೋದು ಹಂಗೆ ತಿಳಿಯುತ್ತೆ. ನಮಗೆ ಅರ್ಧ ಅಂತ ಯಾರು ಹೇಳಿಲ್ಲ. ಅರ್ಧನೂ ಹೇಳಿಲ್ಲ ಪೂರ್ತಿನೂ ಹೇಳಿಲ್ಲ. ಈಗ ಇದ್ದಾರೆ, ಅಲ್ಲಿಯವರೆಗೆ ಇರ್ತಾರೆ ಅನ್ನೋದು ನಮ್ಮ ಭಾವನೆ ಎಂದು ತಿಳಿಸಿದರು. ಏನೇ ಇದ್ದರೂ, ಹೈಕಮಾಂಡ್‌ನ ನಿರ್ಧಾರ ಅಷ್ಟೇ ಅಂತಿಮ ಎಂದು ಅವರು ಪದೇ ಪದೇ ಒತ್ತಿ ಹೇಳಿದರು.
ಎಲ್ಲರಿಗೂ ನೋಟಿಸ್ ಕೊಡಲು ಆಗೋಲ್ಲ:
ಯತೀಂದ್ರ ಹೇಳಿಕೆಗೆ ಇಕ್ಬಾಲ್ ಹುಸೇನ್ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದ ಮತ್ತು ಅವರಿಗೆ ನೋಟಿಸ್ ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಜಾರಕಿಹೊಳಿ, ಎಲ್ಲರಿಗೂ ನೋಟೀಸ್ ಕೊಡಲು ಆಗಲ್ಲ. ನೋಟೀಸ್ ಕೊಡೋದ್ರಿಂದ ಎಲ್ಲವೂ ಪರಿಹಾರ ಆಗಲ್ಲ. ನೋಟೀಸ್‌ನಿಂದ ಸಮಾಧಾನ ಆದ್ರೆ ಕೊಡಬಹುದು. ಸಮಾಧಾನಕ್ಕೆ ಕೊಡಬೇಕು ಅನ್ನೋದಾದ್ರೆ ಕೊಡಬಹುದು ಎಂದು ಹೇಳಿದರು. ಈಗ ಅವರಿಗೆ ನೋಟೀಸ್ ಕೊಟ್ಟಿದ್ರು ಏನಾಯ್ತು ಅವರಿಗೆ? ರಿಸಲ್ಟ್ ಏನು ಇಲ್ಲ. ಬಂದ್ ಆಗೋದಿದ್ರೆ ಬೇಕಿದ್ರೆ ಕೊಡಿಸೋಣ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ