
ರಾಯಚೂರು (ಜೂ.16): ರಾಜ್ಯ ಸರ್ಕಾರದ ಸಚಿವ ಸಂಪುಟ ಬದಲಾವಣೆ ಕುರಿತಂತೆ ರಾಯಚೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.
'ಸಚಿವರನ್ನಾಗಿ ಮಾಡೋದು, ಬಿಡೋದು ಕಾಂಗ್ರೆಸ್ ಹೈಕಮಾಂಡ್‌ಗೆ ನಿರ್ಧಾರಕ್ಕೆ ಬಿಟ್ಟ ವಿಚಾರ. ನಾನು ಕೇವಲ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ, ನಮ್ಮ ಸ್ಥಾನ ಉಳಿಸಿಕೊಂಡರೆ ಸಾಕು' ಎಂದು ಅವರು ಮಾರ್ಮಿಕವಾಗಿ ನುಡಿದರು.
ಸಂಪುಟ ಬದಲಾವಣೆ ಕುರಿತು ಕುತೂಹಲಕಾರಿ ಹೇಳಿಕೆ
ಸತೀಶ್ ಜಾರಕಿಹೊಳಿ, 'ರಾಜಕೀಯ ಎಂದರೆ ನಿಂತ ನೀರು ಅಲ್ಲ, ಹರಿಯುವ ಕೃಷ್ಣಾ ನದಿಯಂತೆ. ಒಬ್ಬರನ್ನು ತೆಗೆದು, ಬೇರೊಬ್ಬರಿಗೆ ಅವಕಾಶ ಕೊಡಬೇಕು. ಭವಿಷ್ಯದಲ್ಲಿ ಸಂಪುಟ ಬದಲಾವಣೆ ಆಗಬಹುದು. ಐದು ಬಾರಿ ಗೆದ್ದ ಶಾಸಕರಿಗೆ ಅವಕಾಶ ಕೊಡಬೇಕೆಂಬ ಬೇಡಿಕೆ ಇದೆ. ನಾಯಕತ್ವ ಬೆಳೆಸಲು ಇಂತಹ ಕ್ರಮಗಳು ಅಗತ್ಯ' ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಸಂಪುಟ ಬದಲಾವಣೆಯಾಗಿಲ್ಲ ಎಂದು ಉಲ್ಲೇಖಿಸಿದ ಸಚಿವರು, ನಮ್ಮ ಸರ್ಕಾರ ಗಟ್ಟಿಯಾಗಿದೆ. ಬಿಜೆಪಿ ಆಡಳಿತದಲ್ಲಿ ಮೂರು ಸಿಎಂಗಳು, ಹಲವು ಸಂಪುಟ ಬದಲಾವಣೆಗಳು ಆಗಿವೆ. ಆದರೆ, ನಮ್ಮಲ್ಲಿ ಏನೂ ಆಗಿಲ್ಲ. ಆದರೂ ಬದಲಾವಣೆ ರಾಜಕೀಯದ ಸ್ವಭಾವ, ಶಾಶ್ವತವಾಗಿ ಯಾರೂ ಇರಲಾರರು ಎಂದು ಹೇಳಿದರು.
ದೆಹಲಿ ಭೇಟಿ: ಕೆಲಸಕ್ಕೆ ಸಂಬಂಧಿಸಿದ್ದು
ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯ ಕುರಿತು ಸ್ಪಷ್ಟನೆ ನೀಡಿದ ಜಾರಕಿಹೊಳಿ, ದೆಹಲಿಗೆ ಕೆಲಸದ ಕಾರಣಕ್ಕೆ ಹೋಗಿದ್ದೆ, ರಾಜಕೀಯ ಚರ್ಚೆ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ರವರ ದೆಹಲಿ ಭೇಟಿಯೂ ಕೆಲವು ವಿಚಾರಗಳ ಚರ್ಚೆಗೆ ಸೀಮಿತವಾಗಿತ್ತು ಎಂದರು.
ಡಿಕೆ ಶಿವಕುಮಾರ ಮುಂದಿನ ಸಿಎಂ ಹೇಳಿಕೆ ವಿಚಾರ:
ಶಿವಗಂಗಾ ಬಸವರಾಜ್‌ರಿಂದ ಡಿಕೆ ಶಿವಕುಮಾರ್ ಸಿಎಂ ಆಗುವ ಕುರಿತು ಪದೇಪದೇ ಹೇಳಿಕೆ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ಹತ್ತು ಬಾರಿ ಹೀಗೆ ಹೇಳಿದ್ದಾರೆ. ಪಕ್ಷದ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯರಿಗೆ ಐದು ವರ್ಷ ಸಿಎಂ ಸ್ಥಾನ?
ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಈಗಲೂ ಸಿಎಂ ಆಗಿದ್ದಾರೆ, ಇದ್ದೇ ಇರುತ್ತಾರೆ. ಅವರನ್ನು ತೆಗೆಯುವ ಸನ್ನಿವೇಶ ಎಲ್ಲಿದೆ? ಅವರೇ ಇರುತ್ತಾರೆಂಬ ಭಾವನೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ನಾಯಕತ್ವ ಬೆಳವಣಿಗೆಗೆ ಒತ್ತು
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬೆಳೆಸಲು ಸಂಪುಟ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಂತಹ ಕ್ರಮಗಳು ಅಗತ್ಯ ಎಂದ ಸಚಿವರು, ಬಿಜೆಪಿಯಂತೆ ನಾವೂ ರಾಜಕೀಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಕೆಪಿಸಿಸಿಗೆ ಪೂರ್ಣಕಾಲಿಕ ಅಧ್ಯಕ್ಷರ ನೇಮಕಕ್ಕೆ ಒತ್ತಾಯವಿದೆ ಎಂದು ತಿಳಿಸಿದರು.
ರಾಜಕೀಯ ವಲಯದಲ್ಲಿ ಸಂಪುಟ ಬದಲಾವಣೆ ಕುರಿತ ಚರ್ಚೆಗೆ ಈ ಹೇಳಿಕೆಗಳು ಮತ್ತಷ್ಟು ಕುತೂಹಲ ಮೂಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ