ಜಾತಿ ಗಣತಿ ವರದಿ ಜಾರಿ ತೀರ್ಮಾನಕ್ಕೆ ಒಂದು ವರ್ಷ ಬೇಕು: ಸತೀಶ್ ಜಾರಕಿಹೊಳಿ

Published : Apr 19, 2025, 08:39 AM ISTUpdated : Apr 19, 2025, 08:53 AM IST
ಜಾತಿ ಗಣತಿ ವರದಿ ಜಾರಿ ತೀರ್ಮಾನಕ್ಕೆ ಒಂದು ವರ್ಷ ಬೇಕು: ಸತೀಶ್ ಜಾರಕಿಹೊಳಿ

ಸಾರಾಂಶ

ಜಾತಿಗಣತಿ ವರದಿ ಸಮಸ್ಯೆ ತುಂಬಾ ಜಟಿಲವಾಗಿದೆ. ವರದಿ ವಿಚಾರವಾಗಿ ತೀರ್ಮಾನಕ್ಕೆ ಬರಲು ಒಂದು ವರ್ಷವಾದರೂ ಸಮಯ ಬೇಕಾಗಬಹುದು. ಜತೆಗೆ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ಸದ್ಯಕ್ಕೆ ಸಾಧ್ಯವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

 ಬೆಂಗಳೂರು (ಏ.19): ‘ಜಾತಿಗಣತಿ ವರದಿ ಸಮಸ್ಯೆ ತುಂಬಾ ಜಟಿಲವಾಗಿದೆ. ವರದಿ ವಿಚಾರವಾಗಿ ತೀರ್ಮಾನಕ್ಕೆ ಬರಲು ಒಂದು ವರ್ಷವಾದರೂ ಸಮಯ ಬೇಕಾಗಬಹುದು. ಜತೆಗೆ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ಸದ್ಯಕ್ಕೆ ಸಾಧ್ಯವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಸಚಿವ ಕೆ.ಎಚ್.ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಹತ್ತು ವರ್ಷಗಳ ಬಳಿಕ ವರದಿ ಸಲ್ಲಿಕೆಯಾಗಿದೆ. ವರದಿ ಸಲ್ಲಿಕೆಯಾದ ವರ್ಷಕ್ಕೆ ವರದಿ ಮಂಡನೆಯಾಗಿದೆ. ಇದೀಗ ಹಲವು ಜಾತಿಗಳು ತಮ್ಮ ಜನಸಂಖ್ಯೆಯ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ಜಾತಿಯಲ್ಲ, 800 ಜಾತಿಗಳು ಬೆನ್ನತ್ತಿವೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಒಮ್ಮತದಿಂದ ಜಾರಿ ಮಾಡಲು ಒಂದು ವರ್ಷ ಆದರೂ ಆಗಬಹುದು’ ಎಂದು ಹೇಳಿದರು.

ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಇದರಲ್ಲಿ ತುರ್ತು ಏನೂ ಇಲ್ಲ. ಸಾವಧಾನವಾಗಿ ಎಲ್ಲಾ ಜಾತಿಗಳ ಆಕ್ಷೇಪಣೆ ಕರೆದು ಅವುಗಳನ್ನು ಬಗೆಹರಿಸಿಯೇ ಮುನ್ನಡೆಯಬೇಕಾಗಿದೆ ಎಂದರು.

ಇದನ್ನೂ ಓದಿ: ಜಾತಿ ಗಣತಿಗೆ ಸಚಿವರ ವಿರೋಧ, ಚಕಮಕಿ ಅನ್ನೋದೆಲ್ಲ ಸುಳ್ಳು: ಸಿಎಂ, ಡಿಕೆಶಿ

ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ:
ಒಬಿಸಿ ಮೀಸಲಾತಿ ಪ್ರಮಾಣವನ್ನು ಶೇ.32 ರಿಂದ 51ಕ್ಕೆ ಹಾಗೂ ಒಟ್ಟಾರೆ ಮೀಸಲಾತಿಯನ್ನು ಶೇ.56 ರಿಂದ 75ಕ್ಕೆ ಹೆಚ್ಚಳ ಮಾಡಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಮೀಸಲಾತಿ ಹೆಚ್ಚು ಮಾಡುವುದು ಈಗ ಅಸಾಧ್ಯ. ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್‌ ಮಿತಿ ಹೇರಿದೆ. ತಮಿಳುನಾಡಿನಲ್ಲಿ ಮೀಸಲಾತಿ ಪ್ರಕರಣ ಹಲವು ವರ್ಷದಿಂದ ಕೋರ್ಟ್‌ನಲ್ಲಿದೆ. ಹೀಗಾಗಿ ಎಲ್ಲವನ್ನೂ ನೋಡಿಕೊಂಡು ಹೆಚ್ಚಳ ಮಾಡಬೇಕು. ಮೀಸಲಾತಿ ಹೆಚ್ಚಳ ಆಗುವುದೇ ಇಲ್ಲ ಎಂದು ಅಲ್ಲ. ಸದ್ಯಕ್ಕೆ ಅಂಕಿ-ಅಂಶ ಎಲ್ಲವನ್ನೂ ಸರಿಪಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾಗಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕರಿಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಅಂಕಿ-ಅಂಶ ಸರಿಪಡಿಸುವುದೇ ಕೆಲಸ:
ಸದ್ಯಕ್ಕೆ ಹಲವು ಜಾತಿಗಳು ತಮ್ಮ ಜನಸಂಖ್ಯೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ರೆಡ್ಡಿ ಜನಾಂಗ 30,000 ಎಂದು ತೋರಿಸಿದ್ದಾರೆ. ಕಲಬುರಗಿ, ಯಾದಗಿರಿ ಹಲವು ಜಿಲ್ಲೆಗಳಲ್ಲಿ ಅವರು ಇದ್ದಾರೆ. ಹೀಗಾಗಿ ನಮ್ಮ ಜನಾಂಗ ಎಲ್ಲಿ ಹೋಯಿತು ಎನ್ನುತ್ತಿದ್ದಾರೆ. ಸಾದರ ಜನರನ್ನು ಕಡಿಮೆ ತೋರಿಸಲಾಗಿದೆ. 64 ಸಾವಿರ ಅಷ್ಟೆ ತೋರಿಸಿದ್ದಾರೆ. ಮೂರು ಜಿಲ್ಲೆಗಳಲ್ಲಿ ಅವರಿದ್ದಾರೆ. ಹೀಗಾಗಿ ಅವರು ಸಹ ಧ್ವನಿ ಎತ್ತಿದ್ದಾರೆ. ಮಾಹಿತಿ ನೀಡಿ ಸಹಿ ಹಾಕಿದವರೇ ವಿರೋಧಿಸುತ್ತಿದ್ದಾರೆ ಎಂದರೆ ಗೊಂದಲ ಬಗೆಹರಿಸಿಯೇ ಮುಂದುವರೆಯಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!