ಪೊಲೀಸರಿಗೆ 5 ವರ್ಷ ಬದಲು 4 ವರ್ಷಕ್ಕೇ ಬಡ್ತಿಗೆ ಅವಕಾಶ!

By Kannadaprabha NewsFirst Published Oct 6, 2021, 11:51 AM IST
Highlights

* ನಿಯಮ ಬದಲಿಸಲು ಸಚಿವ ಸಂಪುಟ ಒಪ್ಪಿಗೆ

* ಪೊಲೀಸರಿಗೆ 5 ವರ್ಷ ಬದಲು 4 ವರ್ಷಕ್ಕೇ ಬಡ್ತಿಗೆ ಅವಕಾಶ

ಬೆಂಗಳೂರು(ಅ.06): ಪೊಲೀಸ್‌ ಇಲಾಖೆಯಲ್ಲಿ(Police Department) ಸೇವೆ ಸಲ್ಲಿಸುತ್ತಿರುವ ಕಾನ್ಸ್‌ಟೇಬಲ್‌ನಿಂದ(Constable) ಸಬ್‌ ಇನ್ಸ್‌ಪೆಕ್ಟರ್‌(Sub-Inspector) ಹಂತದ ಸಿಬ್ಬಂದಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದ್ದು, ಬಡ್ತಿಯ(Promotion) ಅವಧಿಯನ್ನು ಒಂದು ವರ್ಷ ಕಡಿತಗೊಳಿಸಿ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಒಂದು ಕೇಡರ್‌ನಿಂದ ಮತ್ತೊಂದು ಕೇಡರ್‌ಗೆ ಮುಂಬಡ್ತಿ ಪಡೆಯಲು ಕನಿಷ್ಠ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಒಂದು ವೇಳೆ ಅರ್ಹರು ಇಲ್ಲದಿದ್ದರೆ ಐದು ವರ್ಷಕ್ಕೆ ಬಡ್ತಿ ನೀಡಲಾಗುತ್ತದೆ. ಇದನ್ನು ನಾಲ್ಕು ವರ್ಷಕ್ಕೆ ಇಳಿಕೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.

ಮಂಗಳವಾರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ರಾಜ್ಯ ಪೊಲೀಸ್‌ ಲಿಪಿಕ ಸೇವೆಗಳನ್ನು ಒಳಗೊಂಡಂತೆ (ನೇಮಕಾತಿ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾನ್ಸ್‌ಟೇಬಲ್‌ನಿಂದ ಸಬ್‌ ಇನ್ಸ್‌ಪೆಕ್ಟರ್‌ವರೆಗೆ ಬಡ್ತಿ ಸುಲಲಿತವಾಗಿ ಸಿಗಲಿದೆ. ಒಂದು ಕೇಡರ್‌ನಿಂದ ಮತ್ತೊಂದು ಕೇಡರ್‌ಗೆ ಮುಂಬಡ್ತಿ ಹೊಂದಲು ಕನಿಷ್ಠ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಒಂದು ವೇಳೆ ಅಂತಹ ಅರ್ಹರು ಇಲ್ಲದಿದ್ದರೆ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರಿಗೆ ಬಡ್ತಿ ನೀಡಲಾಗುತ್ತದೆ. ಇದನ್ನು ನಾಲ್ಕು ವರ್ಷಕ್ಕೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆಧುನೀಕರಣಕ್ಕೆ 14.65 ಕೋಟಿ:

ಪೊಲೀಸ್‌ ಆಧುನೀಕರಣ ಯೋಜನೆಯಡಿಯಲ್ಲಿ ಬೆಂಗಳೂರು ನಗರಕ್ಕೆ ಅವಶ್ಯವಿರುವ ಡಿಜಿಟಲ್‌ ರೇಡಿಯೋ ಸಂಪರ್ಕ ವ್ಯವಸ್ಥೆಯ ವಿನ್ಯಾಸ, ಅಳವಡಿಕೆ ಮತ್ತು ನಿರ್ವಹಣೆ ಕಾರ್ಯವನ್ನು 14.65 ಕೋಟಿ ರು. ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜ್ಯ ಸರ್ಕಾರವು 9 ಕೋಟಿ ರು. ಮತ್ತು ಉಳಿದ ಮೊತ್ತವನ್ನು ಕೇಂದ್ರ ಸರ್ಕಾರವು ಭರಿಸಲಿದೆ. ಕರ್ನಾಟಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನವರಿಗೆ ನಬಾರ್ಡ್‌ ಮೂಲಕ 1500 ಕೋಟಿ ರು. ಮೊತ್ತವನ್ನು ಸಾಲ ಪಡೆಯಲು ಸರ್ಕಾರ ಖಾತ್ರಿ ನೀಡಲು ತೀರ್ಮಾನಿಸಿದೆ ಎಂದು ವಿವರಿಸಿದರು.

ಸಚಿವ ಸಂಪುಟ ಸಭೆಯ ಇತರೆ ತೀರ್ಮಾನಗಳು

ವೃತ್ತಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸರ್ವಿಸ್‌ ಕಿಟ್‌ ವಿತರಣೆಗಾಗಿ ಮೈಸೂರು ಸೋಪ್‌ ಆ್ಯಂಡ್‌ ಡಿಟರ್ಜಂಟ್‌ ಸಂಸ್ಥೆಗೆ 24.8 ಕೋಟಿ ರು. ಅನುದಾನ

ಉಡುಪಿ ಜಿಲ್ಲೆ ಖಾನಾಪುರ ತಾಲೂಕು ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ದ್ವಿಪಥ ಮಾಡಲು 15 ಕೋಟಿ ರು. ಮಂಜೂರು

ಹಿಪ್ಪರಗಿ ಬ್ಯಾರೇಜಿನ ಎಡಭಾಗದ ತಿರುವಿನಲ್ಲಿ ರಕ್ಷಣಾ ತಡೆಗೋಡೆ ನಿರ್ಮಿಸಲು 28.20 ಕೋಟಿ ರು. ಮೊತ್ತದ ಯೋಜನಾ ವರದಿಗೆ ಅನುಮೋದನೆ

ಉಡುಪಿ ಜಿಲ್ಲೆಯ ನೂತನ ಹೆಬ್ರಿ ತಾಲೂಕಿಗೆ ಸೇರ್ಪಡೆಯಾಗಿರುವ ಕಾರ್ಕಳ ತಾಲೂಕಿನ ಅಜೆಕಾರು ಹೋಬಳಿಯ 12 ಗ್ರಾಮಗಳು ಹಾಗೂ ಕುಂದಾಪುರ ಹೋಬಳಿಯ 4 ಗ್ರಾಮಗಳನ್ನು ಸೇರಿಸಿ ಹೊಸದಾಗಿ ಹೆಬ್ರಿ ಹೋಬಳಿಯನ್ನು ರಚನೆಗೆ ಅನುಮೋದನೆ

ಪವನ ವಿದ್ಯುತ್‌ ಉತ್ಪಾದನೆ ಮಾಡುವ ಸಂಬಂಧ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ 32 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ರೋಹನ್‌ ಸೋಲಾರ್‌ ಕಂಪನಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಸಮ್ಮತಿ.

ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 60 ವರ್ಷ ಮತ್ತು 65 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ಈಗಾಗಲೇ ಹೆಚ್ಚಳ ಮಾಡಲಾಗಿದ್ದು, ಇದಕ್ಕೆ ಘಟನೋತ್ತರ ಒಪ್ಪಿಗೆ

ಯಾರಿಗೆ ಲಾಭ?

- ಕಾನ್ಸ್‌ಟೇಬಲ್‌ಗಳಿಂದ ಸಬ್‌ ಇನ್ಸ್‌ಪೆಕ್ಟರ್‌ವರೆಗಿನ ಹುದ್ದೆಗೆ ಅನ್ವಯ

- ಈ ಮೊದಲು ಮುಂಬಡ್ತಿ ಪಡೆಯಲು 8 ವರ್ಷ ಸೇವೆ ಸಲ್ಲಿಸಿರಬೇಕಿತ್ತು

- ಅರ್ಹರು ಇಲ್ಲದಿದ್ದರೆ ಕನಿಷ್ಠ 5 ವರ್ಷದ ಸೇವೆಗೆ ಬಡ್ತಿ ನೀಡಲಾಗುತ್ತಿತ್ತು

- ಈಗ 5 ವರ್ಷದ ಮಿತಿಯನ್ನು 4 ವರ್ಷಕ್ಕೆ ಇಳಿಸಲು ಸರ್ಕಾರದ ನಿರ್ಧಾರ

click me!