ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಗಣಿತ ಕಿಟ್‌!

By Web DeskFirst Published Jan 31, 2019, 9:28 AM IST
Highlights

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಗಣಿತ ಕಿಟ್‌| ಉತ್ತರ ಕರ್ನಾಟಕದಲ್ಲಿದ್ದ ಯೋಜನೆ ರಾಜ್ಯಾದ್ಯಂತ ಜಾರಿ| 28 ವಸತಿ ಶಾಲೆ ಮೇಲ್ದರ್ಜೆಗೆ: ಸಂಪುಟ ನಿರ್ಧಾರ

ಬೆಂಗಳೂರು[ಜ.31]: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಅನುತ್ತೀರ್ಣರಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಮಕ್ಕಳಿಗೆ ಗಣಿತ ಕಿಟ್‌ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಸರ್ಕಾರಿ ಶಾಲೆಗಳ ಫಲಿತಾಂಶವನ್ನು ಗಮನಿಸಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಮಂದಿ ಗಣಿತ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಅವರಿಗೆ ಗಣಿತದ ಬಗ್ಗೆ ಸೂಕ್ತ ತರಬೇತಿ ನೀಡಲು ಉತ್ತರ ಕರ್ನಾಟಕ ಭಾಗದಲ್ಲಿ ನೀಡಿದ್ದ ಗಣಿತ ಕಿಟ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಗಣಿತ ಕಿಟ್‌ನ್ನು ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೂ ವಿತರಿಸಲು ಕ್ರಮ ಕೈಗೊಳ್ಳಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.

28 ವಸತಿ ಶಾಲೆಗಳು ಮೇಲ್ದರ್ಜೆಗೆ:

ಸಮಾಜ ಕಲ್ಯಾಣ ಇಲಾಖೆ ವತಿಯಿಂದ 28 ವಸತಿ ಶಾಲೆಗಳ ಕಟ್ಟಡಗಳನ್ನು ನಿರ್ಮಾಣ ಮಾಡಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ 24 ಹಾಲಿ ಪ್ರೌಢ ಶಾಲೆಗಳನ್ನು ಪಿಯುಸಿ ಶಿಕ್ಷಣ ನೀಡಲು ಮೇಲ್ದರ್ಜೆಗೇರಿಸಿ ಅಗತ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು. ಉಳಿದಂತೆ 4 ವಸತಿ ಕಾಲೇಜು ಕಟ್ಟಡಗಳನ್ನು ನೂತನವಾಗಿ ನಿರ್ಮಿಸಲಾಗುವುದು. 28 ವಸತಿ ಶಾಲೆಗಳ ಪೈಕಿ 16 ಉತ್ತರ ಕರ್ನಾಟಕ ಭಾಗದಲ್ಲಿದ್ದು, 12 ಇತರೆ ಭಾಗದಲ್ಲಿರಲಿವೆ. ಇವುಗಳಿಗಾಗಿ 700 ಕೋಟಿ ರು.ಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸಲು 29 ಕೋಟಿ ರು. ಹಾಗೂ ಮೈಸೂರು ವೈದ್ಯಕೀಯ ಕಾಲೇಜಿಗೆ 67 ಕೋಟಿ ರು. ನೀಡಲು ಅನುಮೋದನೆ ನೀಡಲಾಗಿದೆ ಎಂದರು.

ಸರ್ವ ಶಿಕ್ಷಣ ಅಭಿಯಾನ ವಿಲೀನ:

ಕೇಂದ್ರ ಸರ್ಕಾರವು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿರುವ ಮಾಧ್ಯಮಿಕ ಶಿಕ್ಷಣ ಅಭಿಯಾನ ಹಾಗೂ ಸರ್ವ ಶಿಕ್ಷಣ ಅಭಿಯಾನವನ್ನು ವಿಲೀನಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಎರಡೂ ವಿಲೀನಗೊಳಿಸಿ ಸಮಗ್ರ ಶಿಕ್ಷಣ ಕರ್ನಾಟಕ ಟ್ರಸ್ಟ್‌ ಹೆಸರಿನಲ್ಲಿ ಮುನ್ನಡೆಸಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್‌:

ಅಲ್ಲದೆ, ಮೈಸೂರಿನಲ್ಲಿ ಚಾಮುಂಡೇಶ್ವರಿ ಸಿಲ್ಕ್‌ ಮೆಗಾ ಕ್ಲಸ್ಟರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಶೇಷ ಉದ್ದೇಶ ವಾಹಕ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಬೆಳವಾಡಿ ಹತ್ತಿರ 10 ಎಕರೆ ವ್ಯಾಪ್ತಿಯಲ್ಲಿ ಸ್ಥಾಪನೆಯಾಗಲಿರುವ ಮೆಗಾ ಕ್ಲಸ್ಟರ್‌ಗೆ ಸರ್ಕಾರ 49 ಕೋಟಿ ರು. ಬಂಡವಾಳ ಹೂಡಲಿದೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ನೆಲಮಂಗಲದ ಟಿ. ಬೇಗೂರು ಬಳಿ ನಿರ್ಮಿಸಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಯ ನೀಲನಕ್ಷೆ ಪಡೆಯಲು ನಗರ ಯೋಜನಾ ವಿಭಾಗದಿಂದ ಘಟನೋತ್ತರ ಅನುಮತಿ ನೀಡಿ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜತೆಗೆ ಮೈಸೂರಿನ ಎನ್‌ಐಎ ಕಾಲೇಜಿಗೆ ವಿಶ್ವವಿದ್ಯಾಲಯ ಮಾನ್ಯತೆ ನೀಡಲು ಕರಡು ವಿಧೇಯಕಕ್ಕೆ ಅನುಮತಿ ನೀಡಲು ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಹಾಗೂ ಮದ್ದೂರು ತಾಲೂಕುಗಳಲ್ಲಿ 196 ಕೋಟಿ ರು. ವೆಚ್ಚದಲ್ಲಿ ಆರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಅಂಗೀಕಾರ ನೀಡಿದೆ ಎಂದರು.

ಬುಧವಾರ ವಿಧಾನಸಭೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ 10 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 19 ಕೋಟಿ ರು. ಮೊತ್ತದ ಯೋಜನೆಗೆ ಮಂಜೂರಾತಿ ನೀಡಲಾಗಿದೆ.

ಜತೆಗೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಕೆ. ಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ 28 ಕೋಟಿ ರು. ಮೊತ್ತ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಗಾಮನಹಳ್ಳಿ ಹಾಗೂ 19 ಗ್ರಾಮಗಳಿಗೆ 21 ಕೋಟಿ ರು. ಮೊತ್ತದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಆನೆಕೆರೆಗೆ ಸುತ್ತಮುತ್ತಲಿನ ಹಳ್ಳಿಗಳಿಗೆ ಹೇಮಾವತಿಯಿಂದ ಕುಡಿಯುವ ನೀರು ಪೂರೈಸಲು 28 ಕೋಟಿ ರು. ಒದಗಿಸಲಾಗುವುದು. ಅಲ್ಲದೆ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ 3 ಬಹು ಗ್ರಾಮದ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗಳಿಗೆ 100 ಕೋಟಿ ರು. ವೆಚ್ಚದಲ್ಲಿ ಅಂಗೀಕಾರ ನೀಡಲಾಗಿದೆ. ಇದರಲ್ಲಿ ಮದ್ದೂರಿನ ತೊರೆಶೆಟ್ಟಿಹಳ್ಳಿ ಹಾಗೂ 53 ಗ್ರಾಮಗಳಿಗೆ 39 ಕೋಟಿ ರು. ವೆಚ್ಚ, ಬೆಸಗರಹಳ್ಳಿಯ ಹಾಗೂ 37 ಗ್ರಾಮಗಳಿಗೆ 34 ಕೋಟಿ ರು. ವೆಚ್ಚದಲ್ಲಿ, ಕೊಪ್ಪ ಸುತ್ತಮುತ್ತಲಿನ 49 ಗ್ರಾಮಗಳಿಗೆ 28 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಅಂಗೀಕಾರ ನೀಡಲಾಗಿದೆ.

click me!