ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ 14 ಮಂದಿ ಸುಟ್ಟು ಕರಕಲು, ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿ ಗ್ರಾಮದ 10 ಮಂದಿ ಕಾರ್ಮಿಕರು ಸಾವು. ಇವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು, ಹೆಚ್ಚಿನವರು 17 ವರ್ಷದವರು.
ಬೆಂಗಳೂರು (ಅ.8): ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ತಮಿಳುನಾಡಿನಿಂದ ಲಾರಿಗಳಲ್ಲಿ ತಂದು ಸಂಗ್ರಹಿಸುತ್ತಿದ್ದ ಪಟಾಕಿ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 14 ಕಾರ್ಮಿಕರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ಸಮೀಪದ ಅತ್ತಿಬೆಲೆಯಲ್ಲಿ ಶನಿವಾರ ಸಂಭವಿಸಿದೆ. 6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ಮಾಡಿಸಲೇಬೇಕಿದೆ.
ಅತ್ತಿಬೆಲೆ ಪಟಾಕಿ ದುರಂತದಲ್ಲಿ 14 ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಕರ್ನಾಟಕ ಮತ್ತು ತಮಿಳುನಾಡನ್ನು ಕಂಗಲಾಗಿಸಿದೆ, ಇದರಲ್ಲಿ ಮೃತಪಟ್ಟಿರುವವರದು ಒಂದೊಂದು ಕಥೆ ಹೊರ ಬರುತ್ತಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿ ಗ್ರಾಮದಿಂದ 10 ವಿದ್ಯಾರ್ಥಿಗಳು ಕೆಲಸಕ್ಕಾಗಿ ಬಂದಿದ್ದರು, 10 ಮಂದಿ ಪೈಕಿ ಇಬ್ಬರು ಮಾತ್ರ ಬದುಕಿಳಿದಿದ್ದಾರೆ, ಮೃತ ಎಂಟು ಜನ ಯುವಕರೆಲ್ಲಾ ವಿದ್ಯಾರ್ಥಿಗಳೇ ಆಗಿದ್ದು, ಪಿಯುಸಿ ಮತ್ತು ಡಿಗ್ರಿ ಓದುತ್ತಿದ್ದವರು, ಕೆಲಸ ಮಾಡಿ ಮೊಬೈಲ್ ತೆಗೆದುಕೊಳ್ಳಲು ಬಂದಿದ್ದರೆಂದು ಮೃತ ಗಿರಿ ಎಂಬ ವಿದ್ಯಾರ್ಥಿ ಚಿಕ್ಕಪ್ಪ ಕಣ್ಣನ್ ವಿವರಿಸಿದ್ದಾರೆ.
undefined
ಮೃತಪಟ್ಟ ವಿದ್ಯಾರ್ಥಿಗಳೆಂದರೆ:
ಆದಿಕೇಶವನ್ (17)
ಗಿರಿ (17)
ವೇಡಪ್ಪನ್ (22)
ಆಕಾಶ್ (17)
ವಿಜಯರಾಘವನ್(19)
ವೆಳಂಬರದಿ (20)
ವಿನೋದ್ (18)
ಮುನಿವೇಲ್ (19)
ಈ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಪೈಕಿ ಬಹುತೇಕರು ತಮಿಳುನಾಡಿನ ಶಿವಕಾಶಿ ಮೂಲದವರು ಎಂದು ತಿಳಿದು ಬಂದಿದೆ. ಗೋದಾಮಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 20ಕ್ಕೂ ಹೆಚ್ಚಿನ ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅತ್ತಿಬೆಲೆಯಲ್ಲಿರುವ ಪಟಾಕಿ ವ್ಯಾಪಾರಿ ನವೀನ್ ಎಂಬುವರಿಗೆ ಸೇರಿದ ಗೋದಾಮಿನಲ್ಲಿ ಟ್ರಕ್‌ಗಳ ಮೂಲಕ ಭಾರಿ ಪ್ರಮಾಣದಲ್ಲಿ ತರಲಾಗಿದ್ದ ಪಟಾಕಿಯನ್ನು ಮಧ್ಯಾಹ್ನ ಅನ್‌ಲೋಡ್ ಮಾಡುವಾಗ ಈ ದುರಂತ ಸಂಭವಿಸಿದೆ.
ಆ.29ರಂದು ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಪಟಾಕಿ ಗೋದಾಮಿನಲ್ಲೂ ಇದೇ ರೀತಿ ಅಗ್ನಿ ಅನಾಹುತ ಸಂಭವಿಸಿ ಮೂವರು ಸಾವಿಗೀಡಾಗಿದ್ದರು. ಅತ್ತಿಬೆಲೆಯ ದುರಂತ ಹಾವೇರಿ ಘಟನೆಗಿಂತಲೂ ಭೀಕರವಾಗಿದೆ.
ಘಟನೆ ನಡೆದಿದ್ದು ಹೇಗೆ?: ಪಟಾಕಿ ಸಗಟು ವ್ಯಾಪಾರಿ ನವೀನ್, ಎರಡು ವರ್ಷಗಳಿಂದ ತಮಿಳುನಾಡು ಗಡಿ ಭಾಗದ ಅತ್ತಿಬೆಲೆಯಲ್ಲಿ ಗೋದಾಮು ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಬೆಂಗಳೂರು ಸೇರಿ ವಿವಿಧೆಡೆಗೆ ಪಟಾಕಿಯನ್ನು ನವೀನ್ ಪೂರೈಸುತ್ತಿದ್ದರು. ದೀಪಾವಳಿ ಹಬ್ಬದ ಸಲುವಾಗಿಯೇ ಭಾರಿ ಪ್ರಮಾಣದ ಪಟಾಕಿಯನ್ನು ಮಾಲಿಕ ಸಂಗ್ರಹಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಲಾಜಿ ಕ್ರ್ಯಾಕರ್ಸ್ ಮಾಲೀಕ ರಾಮಸ್ವಾಮಿರೆಡ್ಡಿ (70) ಲೈಸೆನ್ಸ್ ಮಾಲೀಕರಾಗಿದ್ದು, ನವೀನ್ ರಾಮಸ್ವಾಮಿರೆಡ್ಡಿ ಮಗನಾಗಿದ್ದಾರೆ. ಸದ್ಯ ಪೊಲೀಸ್ ವಶದಲ್ಲಿದ್ದಾರೆ. ಜಮೀನಿನ ಮಾಲೀಕರಾದ ಜಯಮ್ಮ ,ಸಿದ್ದಾರೆಡ್ಡಿ, ಅನಿಲ್ ಎಲ್ಲರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಪಟಾಕಿ ತಯಾರಿಕೆಗೆ ಖ್ಯಾತಿ ಪಡೆದಿರುವ ತಮಿಳುನಾಡಿನ ಶಿವಕಾಶಿಯಿಂದ ಲಾರಿ ಹಾಗೂ ಟ್ರಕ್‌ಗಳಲ್ಲಿ ಸುಮಾರು 5 ಕೋಟಿ ರು.ಗೂ ಅಧಿಕ ಮೊತ್ತದ ಭಾರಿ ಪ್ರಮಾಣದ ಪಟಾಕಿಯನ್ನು ತಂದು ಗೋದಾಮಿನಲ್ಲಿ 29ಕ್ಕೂ ಹೆಚ್ಚಿನ ಕಾರ್ಮಿಕರು ಅನ್‌ಲೋಡ್ ಮಾಡುತ್ತಿದ್ದರು. ಆ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಪಟಾಕಿಗಳು ಸ್ಫೋಟಗೊಂಡಿವೆ.
ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಉಗ್ರಾಣವನ್ನು ಆವರಿಸಿದೆ. ದೊಡ್ಡ ದೊಡ್ಡ ಪಟಾಕಿಗಳು ಸಿಡಿದು ಬೆಂಕಿ ತೀವ್ರತೆ ಹೆಚ್ಚಾದ ಪರಿಣಾಮ ಕಾರ್ಮಿಕರು ಹೊರ ಬರಲಾಗದೆ ಸಿಲುಕಿ ಸಜೀವ ದಹನವಾಗಿದ್ದಾರೆ. ಕೆಲವರು ಉಗ್ರಾಣದ ಹಿಂಬದಿ ಬಾಗಿಲಿನಿಂದ ಕೂಡಲೇ ಹೊರಗೆ ಓಡಿ ಬಂದು ಜೀವ ರಕ್ಷಿಸಿಕೊಂಡಿದ್ದಾರೆ. ಬೆಂಕಿಯ ಜ್ವಾಲೆ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ. ಗೋದಾಮಿನಲ್ಲಿ ಸುಮಾರು 7 ಅಗ್ನಿಶಾಮಕ ದಳ ವಾಹನಗಳು ಸತತ ನಾಲ್ಕು ತಾಸುಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಆನಂತರ ಗೋದಾಮಿನೊಳಗೆ ತೆರಳಿ ಸುಟ್ಟು ಕರಕಲಾಗಿದ್ದ ಕಾರ್ಮಿಕರ ಮೃತದೇಹಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತಂದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.