
ಕೊಪ್ಪಳ, (ಮೇ.2): ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಡಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಕೊಪ್ಪಳದ ಗಂಗಾವತಿಯಲ್ಲಿ ಗಂಭೀರ ಹೇಳಿಕೆ ನೀಡಿದ್ದಾರೆ.
ಈ ಘಟನೆ ರಾಜ್ಯದಲ್ಲಿನ 'ಅರಾಜಕತೆ'ಗೆ ಸಾಕ್ಷಿ ಎಂದು ಕರೆದಿರುವ ಸ್ವಾಮೀಜಿ, ಸರ್ಕಾರ ಮತ್ತು ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಕುಸಿಯುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರವು ಯೋಗ್ಯ ಕ್ರಮ ಕೈಗೊಳ್ಳುವ ಸಂಕಲ್ಪ ಮಾಡಿದರೆ, ಇಂತಹ ಅತಿರೇಕದ ಘಟನೆಗಳು ದೂರವಾಗುವ ಭರವಸೆ ಇದೆ. ಜನರು ಕಾನೂನು ಮತ್ತು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಕಳೆದುಕೊಂಡು ಕೈಗೆ ಕಾನೂನು ತೆಗೆದುಕೊಳ್ಳುವ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ. ಒಂದೆಡೆ ದೊಂಬಿ, ಮತ್ತೊಂದೆಡೆ ಪ್ರತೀಕಾರ.. ಇದು ಕೇವಲ ಒಂದು ಘಟನೆಯಲ್ಲ, ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದನ್ನೇ ಅರಾಜಕತೆ ಎಂದು ಕರೆಯುತ್ತಾರೆ ಎಂದರು.
ಇದನ್ನೂ ಓದಿ: ಮಂಗಳೂರು ಸುಹಾಸ್ ಹ*ತ್ಯೆಯ ಮಹತ್ವದ ಸಾಕ್ಷ್ಯ ಲಭ್ಯ, ಮೈಸೂರಿನಿಂದ ಶಿಫ್ಟ್ ಆಗಿದ್ದ ಶೆಟ್ಟಿ ಕುಟುಂಬ
ರಾಜ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಕೊಲೆಯಿಂದ ಹಿಡಿದು ಮಕ್ಕಳ ಮೇಲಿನ ಅತ್ಯಾಚಾರದಂತಹ ಘಟನೆಗಳಿಗೆ ಸರ್ಕಾರ ಮತ್ತು ನ್ಯಾಯಾಂಗದ ಮೇಲಿನ ವಿಶ್ವಾಸದ ಕೊರತೆಯೇ ಕಾರಣ ಎಂದು ಸ್ವಾಮೀಜಿ ದೂರಿದ್ದಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಪತ್ರಿಕಾರಂಗವು ಸಮಗ್ರ ಚಿಂತನೆ ನಡೆಸಿ, ಈ ಅರಾಜಕತೆಗೆ ಕಡಿವಾಣ ಹಾಕಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮಂಗಳೂರಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಸರ್ಕಾರ ಈ ಘಟನೆಗೆ ಹೇಗೆ ಪ್ರತಿಕ್ರಿಯಿಸಲಿದೆ ಮತ್ತು ತನಿಖೆಯಲ್ಲಿ ಯಾವ ಪ್ರಗತಿ ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ