Muslim Leaders Meeting: ಮುಸ್ಲಿಮರ ಮುನಿಸು ಶಮನಕ್ಕೆ ಮುಖಂಡರ ಮನೆಗೆ ಉಸ್ತುವಾರಿ ಸಚಿವರ ಭೇಟಿ!

Published : Jun 03, 2025, 08:32 AM ISTUpdated : Jun 03, 2025, 09:49 AM IST
Mangaluru, dinesh gundurao

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಪುನಃಸ್ಥಾಪಿಸಲು ಮತ್ತು ಅತೃಪ್ತ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಮರಳಿ ಗಳಿಸಲು, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮಂಗಳೂರು (ಜೂ.3): ದ.ಕ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಸ್ಥಾಪಿಸುವ ಜೊತೆಗೆ ಅತೃಪ್ತ ಮುಸ್ಲಿಂ ಸಮುದಾಯದ ಮರು ವಿಶ್ವಾಸ ಗಳಿಸಲು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಶನಿವಾರ ಮುಸ್ಲಿಂ ಮುಖಂಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಕೆ.ಎಸ್‌. ಮಸೂದ್‌ ಅವರ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಅತೃಪ್ತಿ ಶಮನದ ಬಗ್ಗೆ ಮಾತುಕತೆಯೂ ನಡೆಯಿತು ಎಂದು ಹೇಳಲಾಗಿದೆ.

ದ.ಕ. ಸೆಂಟ್ರಲ್‌ ಮುಸ್ಲಿಂ ಕಮಿಟಿ ಅಧ್ಯಕ್ಷ ಕೆ.ಎಸ್‌. ಮಸೂದ್‌ ಅವರ ನಿವಾಸಕ್ಕೆ ಬೆಳಗ್ಗೆ ತೆರಳಿ, ಲಘು ಉಪಹಾರ ಸೇವಿಸಿದರು. ರಾಜ್ಯ ಸರ್ಕಾರ ಕರಾವಳಿಯಲ್ಲಿ ಅಹಿತಕರ ಘಟನೆಯನ್ನು ಸರಿಯಾಗಿ ನಿಭಾಯಿಸದೇ ಇರುವ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಇರುವ ಅಪನಂಬಿಕೆ, ಅಸಮಾಧಾನ ಹಾಗೂ ಸಾಮೂಹಿಕ ರಾಜಿನಾಮೆ ಕುರಿತಂತೆ ಮನಸ್ತಾಪ ಸರಿಪಡಿಸುವ ದಿಶೆಯಲ್ಲಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಸುಮಾರು ಒಂದು ಗಂಟೆಗಳ ಕಾಲ ಮುಸ್ಲಿಮರ ಹಿರಿಯ ಮುಖಂಡ ಕೆ.ಎಸ್‌.ಮಸೂದ್‌ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ ನೀಡಿದ ಮುಖಂಡರನ್ನು ಸಮಾಧಾನ ಪಡಿಸಬೇಕು. ಪಕ್ಷ ಹಾಗೂ ಸರ್ಕಾರದಿಂದ ಮುಸ್ಲಿಂ ಸಮುದಾಯಕ್ಕೆ ಎಂದಿಗೂ ಅನ್ಯಾಯ ಆಗುವುದಿಲ್ಲ, ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಸಚಿವರು ಈ ಸಂದರ್ಭ ಭರವಸೆ ನೀಡಿದರು ಎಂದು ಹೇಳಲಾಗಿದೆ. ದ್ವೇಷ ಭಾಷಣ ಮಾಡುವವರ ಹಾಗೂ ಅಹಿತಕರ ಘಟನೆಗೆ ಕಾರಣರಾದವರ ಬಗ್ಗೆ ಕಠಿಣ ಕ್ರಮ ಹಾಗೂ ಪೊಲೀಸರ ನಿಷ್ಪಕ್ಷಪಾತ ತನಿಖೆಯ ಭರವಸೆ ನೀಡಿದರು.

ಮಠದಿಂದ ಸಾಮರಸ್ಯ ಅರಿವು:

ಬಳಿಕ ರಾಮಕೃಷ್ಣ ಮಠಕ್ಕೂ ಭೇಟಿ ನೀಡಿ ಸೌಹಾರ್ದತೆ ರೂಪಿಸುವಲ್ಲಿ ಮಠದ ಸಹಕಾರವನ್ನು ಬಯಸಿದರು. ಜನರಲ್ಲಿ ಸಾಮರಸ್ಯದ ಅರಿವು ಮೂಡಿಸಬೇಕು. ಒಡೆದ ಮನಸುಗಳನ್ನು ಒಂದಾಗಿಸಿ ಮುನ್ನಡೆಯಬೇಕು. ಶಾಂತಿ ಸ್ಥಾಪನೆಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಯಾವುದೇ ಪ್ರಚೋದನೆ, ಉದ್ರೇಕಕಾರಿ ಭಾಷಣಗಳಿಗೆ ಅವಕಾಶ ನೀಡಬಾರದು. ಸಹಬಾಳ್ವೆ ನಡೆಸಿದರೆ ಸಮಾಜ, ಜಿಲ್ಲೆ ಬೆಳವಣಿಗೆ ಆಗುತ್ತದೆ ಎಂದರು.

ನೀರು ಪಾಲಾದ ಮೀನುಗಾರರು

ಮೀನುಗಾರಿಕೆಗೆ ತೆರಳಿ ನೀರು ಪಾಲಾದ ಬೆಂಗರೆಯ ಇಬ್ಬರು ಮೀನುಗಾರರಾದ ಯಶವಂತ ಮತ್ತು ಕಮಲಾಕ್ಷರ ಮನೆಗೆ ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಮಾಧಾನ ಹೇಳಿದರು. ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯಿಂದ ತಲಾ 8 ಲಕ್ಷ ರುಪಾಯಿ ಪರಿಹಾರ ನೀಡುವ ಭರವಸೆಯನ್ನು ಸಚಿವರು ನೀಡಿದರು. ಬೆಂಗರೆಯಲ್ಲಿ ಭಾರಿ ಮಳೆಯ ವೇಳೆ ಅಳಿವೆ ಬಾಗಿಲನಲ್ಲಿ ನಾಡದೋಣಿ ಮಗುಚಿ ಮೀನುಗಾರರು ನೀರು ಪಾಲಾಗಿ ಎರಡು ದಿನ ಕಳೆದರೂ ಇದುವರೆಗೆ ಪತ್ತೆಯಾಗಿಲ್ಲ.

ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮೀನುಗಾರಿಕಾ ಉಪನಿರ್ದೇಶಕ ದಿಲೀಪ್, ಮೀನುಗಾರ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌