ಕರ್ನಾಟಕಕ್ಕೆ ಗೊತ್ತೇ ಆಗದೆ ಮಹಾರಾಷ್ಟ್ರದಿಂದ ₹19,000 ಕೋಟಿಯ ಕೃಷ್ಣಾ ನದಿ ತಿರುವು ಯೋಜನೆ; ಎಂ.ಬಿ. ಪಾಟೀಲ ಆಕ್ಷೇಪ

Published : Nov 01, 2026, 05:44 PM IST
krishna river diversion project

ಸಾರಾಂಶ

ಕೃಷ್ಣಾ ನದಿಯ 40 ಟಿಎಂಸಿ ಪ್ರವಾಹದ ನೀರನ್ನು ಭೀಮಾ ನದಿಗೆ ತಿರುಗಿಸುವ ಮಹಾರಾಷ್ಟ್ರದ ಬೃಹತ್ ಯೋಜನೆಗೆ ಸಚಿವ ಎಂ.ಬಿ. ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಆಲಮಟ್ಟಿ ಜಲಾಶಯದ ಒಳಹರಿವಿಗೆ ಕಂಟಕ ಎದುರಾಗಲಿದ್ದು, ರಾಜ್ಯದ ಹಿತಾಸಕ್ತಿ ಕಾಪಾಡಲು ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯಪುರ (ನ.01): ಕರ್ನಾಟಕದ ಹಿತಾಸಕ್ತಿಗಳಿಗೆ ತೀವ್ರ ಧಕ್ಕೆ ತರುವ ರೀತಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಕೃಷ್ಣಾ ನದಿಯ 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಗೆ ತಿರುಗಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿರುವುದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಹಾರಾಷ್ಟ್ರದ ಈ ಏಕಪಕ್ಷೀಯ ನಡವಳಿಕೆಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಭಾನುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ನೀಡಿದ ಶಾಕಿಂಗ್ ಮಾಹಿತಿ:

ಅಕ್ಟೋಬರ್ 9ರಂದು ಮುಂಬೈನಲ್ಲಿ ನಡೆದ ‘ಇಂಡಿಯಾ ಟುಡೇ ಕಾನ್ ಕ್ಲೈವ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾಬಲೇಶ್ವರದ ಸಮೀಪ ಕೃಷ್ಣಾ ನದಿಯಿಂದ ಸುಮಾರು 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಯ ಉಜ್ಜನಿ ಅಣೆಕಟ್ಟಿಗೆ ತಿರುಗಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಮರಾಠವಾಡದ ಎರಡು ಜಿಲ್ಲೆಗಳು, ಸಾಂಗ್ಲಿ ಹಾಗೂ ಸೊಲ್ಲಾಪುರ ಜಿಲ್ಲೆಗಳಿಗೆ ಈ ನೀರು ಪೂರೈಸುವ ಉದ್ದೇಶವಿದ್ದು, ಯೋಜನೆಗೆ ವಿಶ್ವ ಬ್ಯಾಂಕ್ (World Bank) ಹಣಕಾಸು ನೆರವು ನೀಡುತ್ತಿದೆ ಎಂದೂ ತಿಳಿಸಿದ್ದರು. ಈ ಹೇಳಿಕೆಯ ವೀಡಿಯೋ ತುಣುಕನ್ನು ಸಚಿವ ಎಂ.ಬಿ. ಪಾಟೀಲ ತಮ್ಮ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

₹19,000 ಕೋಟಿ ವೆಚ್ಚದ ರಹಸ್ಯ ಯೋಜನೆ!

ಲಭ್ಯವಾಗಿರುವ ಮಹತ್ವದ ಮಾಹಿತಿಯ ಪ್ರಕಾರ, ಈ ಯೋಜನೆಗೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ಮಹಾರಾಷ್ಟ್ರ ಸರ್ಕಾರ 2026ರ ಜುಲೈನಲ್ಲಿ ₹24 ಕೋಟಿ ಮಂಜೂರು ಮಾಡಿದೆ. ಸುಮಾರು 84 ಕಿ.ಮೀ. ಉದ್ದದ ಮಾರ್ಗದಲ್ಲಿ ಭೂವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದ್ದು, 2026ರ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧವಾಗಲಿದೆ. ಈ ಯೋಜನೆಗೆ ಅಂದಾಜು ₹19,000 ಕೋಟಿ ವೆಚ್ಚ ಮಾಡಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವರು ವಿವರಿಸಿದರು.

ಗೆಜೆಟ್ ಅಧಿಸೂಚನೆಯೇ ಆಗಿಲ್ಲ, ಕೇಂದ್ರ ಸರ್ಕಾರ ಹೇಗೆ ಅನುಮತಿ ನೀಡಿತು?:

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-2 (KWDT-II) ತೀರ್ಪಿನ ವ್ಯಾಪ್ತಿಗೆ ಒಳಪಡದ ಈ ಯೋಜನೆಗೆ ಯಾವ ಕಾನೂನಾತ್ಮಕ ಆಧಾರವಿದೆ ಎಂದು ಎಂ.ಬಿ. ಪಾಟೀಲ ಸವಾಲೆಸೆದಿದ್ದಾರೆ. 'ಕೆಡಬ್ಲ್ಯುಡಿಟಿ-2 ತೀರ್ಪು ಇನ್ನೂ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರವು ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಡಿಪಿಆರ್ ಅನ್ನು ಪದೇ ಪದೇ ವಾಪಸ್ ಕಳುಹಿಸುತ್ತಿದೆ. ಹೀಗಿರುವಾಗ ಮಹಾರಾಷ್ಟ್ರದ ನಿಯಮಬಾಹಿರ ಯೋಜನೆಗೆ ವಿಶ್ವ ಬ್ಯಾಂಕ್ ನೆರವು ದೊರೆಯಲು ಹೇಗೆ ಸಾಧ್ಯವಾಯಿತು? ಇದಕ್ಕೆ ಕೇಂದ್ರ ಸರ್ಕಾರದ ಅಥವಾ ಭಾರತ ಸರ್ಕಾರದ ಮಂಜೂರಾತಿ ಇದೆಯೇ?" ಎಂದು ಪಾಟೀಲ ಆಕ್ರೋಶ ಹೊರಹಾಕಿದ್ದಾರೆ.

ಆಲಮಟ್ಟಿ ಜಲಾಶಯದ ಒಳಹರಿವಿಗೆ ಕಂಠಕ!

ಕೃಷ್ಣಾ ಮೇಲ್ದಂಡೆ ಉಪಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆಗೆ ವರ್ಗಾಯಿಸುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಇದು ಕರ್ನಾಟಕ ಮಾತ್ರವಲ್ಲದೆ, ನದಿಯ ಕೆಳಹಂತದಲ್ಲಿರುವ ಇತರ ರಾಜ್ಯಗಳ ಹಕ್ಕುಗಳ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ.

ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ:

ರಾಜ್ಯದ ನೀರಾವರಿ ಹಿತಾಸಕ್ತಿಯ ರಕ್ಷಣೆಗಾಗಿ ಶೀಘ್ರವೇ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗುವುದು. ಪಕ್ಷಾತೀತವಾಗಿ ಧ್ವನಿಯೆತ್ತಿ ಈ ಯೋಜನೆಯ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟ ರೂಪಿಸಲಾಗುವುದು ಎಂದು ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಮೊಬೈಲ್ ಕುಮಾರಸ್ವಾಮಿ ಮನೆಯಲ್ಲೇ ಎಕ್ಸ್‌ಚೇಂಜ್: ಪೊಲೀಸ್ ಆಯುಕ್ತರಿಂದ ರಿವೀಲ್