
ಬೆಂಗಳೂರು (ಸೆ.13): ರಾಜ್ಯದಲ್ಲಿ ನೈಋತ್ಯ ಮುಂಗಾರು ಸದ್ಯಕ್ಕೆ ದುರ್ಬಲವಾಗಿದ್ದರೂ, ವಾಯುಮಂಡಲದಲ್ಲಿ ಉಂಟಾಗಿರುವ ಬದಲಾವಣೆಗಳ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ (ಸೆಪ್ಟೆಂಬರ್ 14 ರಿಂದ 16) ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD Bengaluru) ಮುನ್ಸೂಚನೆ ನೀಡಿದೆ.
ಹವಾಮಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ನೀಡಿರುವ ವರದಿಯ ಪ್ರಕಾರ, ನೈಋತ್ಯ ಮಧ್ಯಪ್ರದೇಶ ಮತ್ತು ಉತ್ತರ ವಿದರ್ಭ ಭಾಗದಲ್ಲಿ ವಾಯುಭಾರ ಕುಸಿತ (Low Pressure Area) ಉಂಟಾಗಿದ್ದು, ಇದರೊಂದಿಗೆ ಚಂಡಮಾರುತದ ಪರಿಚಲನೆ ಸಮುದ್ರ ಮಟ್ಟದಿಂದ 7.6 ಕಿ.ಮೀ ಎತ್ತರದವರೆಗೆ ವ್ಯಾಪಿಸಿದೆ. ಇನ್ನೊಂದೆಡೆ, ಈ ಚಂಡಮಾರುತದ ಪರಿಚಲನೆಯಿಂದ ಹೊರಟ 'ಮಾನ್ಸೂನ್ ಟ್ರಫ್' ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಉತ್ತರ ಒಳನಾಡು, ಆಂಧ್ರದ ರಾಯಲಸೀಮೆ ಹಾಗೂ ತಮಿಳುನಾಡಿನ ಮೂಲಕ ಮನ್ನಾರ್ ಕೊಲ್ಲಿಯವರೆಗೂ ವಿಸ್ತರಿಸಿದೆ. ಇದರ ನೇರ ಪರಿಣಾಮವಾಗಿ ರಾಜ್ಯದ ಒಳನಾಡಿನಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದೆ.
1. ದಕ್ಷಿಣ ಒಳನಾಡು (ಗುಡುಗು ಸಹಿತ ಮಳೆ & ಗಾಳಿ ಎಚ್ಚರಿಕೆ):
ಸೆಪ್ಟೆಂಬರ್ 14 (ದಿನ 2): ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೊಡಗು ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಸೆಪ್ಟೆಂಬರ್ 15 ಮತ್ತು 16 (ದಿನ 3 & 4): ಮೇಲಿನ ಜಿಲ್ಲೆಗಳ ಜತೆಗೆ ಚಾಮರಾಜನಗರ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲೂ ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹಳದಿ (Yellow) ಎಚ್ಚರಿಕೆಯ ನಕ್ಷೆಗಳು ಸೂಚಿಸಿವೆ.
ಸೆಪ್ಟೆಂಬರ್ 17 ರಿಂದ 19: ಮಳೆಯ ಅಬ್ಬರ ಕೊಂಚ ತಗ್ಗಿ, ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ.
ಉತ್ತರ ಒಳನಾಡಿನ ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗಬಹುದು.
ಸೆಪ್ಟೆಂಬರ್ 15 ಮತ್ತು 16 ರಂದು ಬಹುತೇಕ ಒಣ ಹವೆ ಇರಲಿದ್ದು, ಸೆಪ್ಟೆಂಬರ್ 19 ರ ವೇಳೆಗೆ ವಿಜಯಪುರ, ಬಾಗಲಕೋಟೆ ಭಾಗಗಳಲ್ಲಿ ಮತ್ತೆ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತೀರಾ ಕ್ಷೀಣಿಸಿದ್ದು, ಬಹುತೇಕ ದಿನಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಕನ್ನಡ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಮಾತ್ರ ಸೆಪ್ಟೆಂಬರ್ 13 ಮತ್ತು 15 ರಂದು ಹಗುರ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 24 ಗಂಟೆ: ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ ತಾಪಮಾನ 21°C ದಾಖಲಾಗುವ ನಿರೀಕ್ಷೆಯಿದೆ.
ಮುಂದಿನ 48 ಗಂಟೆ: ಸಂಜೆ ಅಥವಾ ರಾತ್ರಿಯ ವೇಳೆ ನಗರದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಗರಿಷ್ಠ ತಾಪಮಾನ 32°C ಹಾಗೂ ಕನಿಷ್ಠ ತಾಪಮಾನ 21°C ಇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ