ಬೆಳ್ಳಂಬೆಳಗ್ಗೆ 'ಲೋಕಾ' ಶಾಕ್: ಬೆಂಗಳೂರು ಸೇರಿ ರಾಜ್ಯಾದ್ಯಂತ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

Published : Oct 14, 2025, 10:41 AM IST
Karnataka lokayukta

ಸಾರಾಂಶ

ರಾಜ್ಯಾದ್ಯಂತ 12 ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದಲ್ಲಿ ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ ಮತ್ತು ಬೆಂಗಳೂರು ನಗರದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ಬೆಂಗಳೂರು (ಅ.14): ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 12 ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದಲ್ಲಿ ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ ಮತ್ತು ಬೆಂಗಳೂರು ನಗರದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಮೆಡಿಕಲ್ ಅಧಿಕಾರಿ- ಮಂಜುನಾಥ್, ಜಿ. ವಿ. ಪಿ.ಯು ಬೋರ್ಡ್ ನಿರ್ದೇಶಕಿ- ಸುಮಂಗಳ, ಸರ್ವೇಯರ್ ಅಧಿಕಾರಿ ಗಂಗಾ ಮರೀಗೌಡ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆ ಪ್ರೌಢ ಶಿಕ್ಷಣಾ ಮಂಡಳಿ ನಿರ್ದೇಶಕಿ ಆಗಿದ್ದ ಸುಮಂಗಳ ಮನೆ ಮೇಲೆ, ನಾಲ್ಕು ವಾಹನಗಳಲ್ಲಿ ಬಂದ ಹತ್ತು ಲೋಕಾಯುಕ್ತ ಅಧಿಕಾರಿಗಳು ಸತತ ನಾಲ್ಕು ಗಂಟೆಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜ್‌ ಭೇಟಿ‌ ನೀಡಿದ್ದಾರೆ.

ಎರಡು ಕೇಸ್‌ಗಳ ವಿರುದ್ಧ ದಾಳಿ ಮಾಡಿದ್ದೇವೆ. ಬೆಳಿಗ್ಗೆ 6 ಗಂಟೆಗೆ ದಾಳಿ ನಡೆಸಲಾಗಿದೆ. ಮಂಜುನಾಥ್ ಅಂತಾ ಓರ್ವ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಾಲ್ಕು ತಂಡಗಳಲ್ಲಿ ಮಾಡಿದ್ದೇವೆ. ಆಫೀಸ್ ಹಾಗೂ ಮನೆ ಮೇಲೆ ದಾಳಿ ಮಾಡಲಾಗಿದೆ. ಈ ಹಿಂದೆ ಪ್ರೌಢ ಶಿಕ್ಷಣ ಮಂಡಳಿ ಇಲಾಖೆ ನಿರ್ದೇಶಕಿ ಆಗಿದ್ದ ಸುಮಂಗಲ ಮನೆ ಸೇರಿದಂತೆ ಮಂಜುನಾಥ್‌ಗೆ ಸೇರಿದ್ದ ಕಡೆ 16 ಅಧಿಕಾರಿಗಳು ದಾಳಿ‌‌ ಮಾಡಿದ್ದಾರೆ. ಸುಮಂಗಳಗೆ ಸೇರಿದ ಮನೆ ಹಾಗೂ ಕಚೇರಿ ಮೇಲೆ 25 ಜನ ಸಿಬ್ಬಂದಿ ದಾಳಿಮಾಡಿದ್ದು, ಪಂಚರ ಸಮ್ಮುಖದಲ್ಲಿ ದಾಖಲೆ ಸೀಜ್ ಮಾಡಲಾಗುತ್ತೆ ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ದಾಳಿ: ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಇಲ್ಲಿನ ಕೃಷಿ ಇಲಾಖೆ ಎಡಿ (ಹೆಚ್ಚುವರಿ ನಿರ್ದೇಶಕ) ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಚಂದ್ರಕಾಂತ್‌ ಅವರಿಗೆ ಸೇರಿದ 2 ಮನೆ ಮತ್ತು ಚಿತ್ರದುರ್ಗದ ಕೃಷಿ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ತರಳಬಾಳು ನಗರ, ಹೊಳಲ್ಕೆರೆ ತಾಲೂಕಿನ ಟಿ ನುಲೇನೂರು ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಶೋಧ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ದಾಳಿ: ಆಲಮಟ್ಟಿ ಬಲದಂಡೆ ಯೋಜನೆ ಜೂನಿಯರ್ ಇಂಜಿನಿಯರ್ ಚೇತನ್ ಮಲಜಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇರೆಗೆ ಬಾಗಲಕೋಟೆಯ ನವನಗರ ಸೆಕ್ಟರ್ ನಂಬರ್ 16ರಲ್ಲಿರುವ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ಮನೆಯೊಳಗೆ ವಿವಿಧ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಟಿ ಮಲ್ಲೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಕಾರ್ಯ ನಿರ್ವಹಿಸುವ ಕಮತಗಿ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಇನ್ಸ್‌ಪೆಕ್ಟರ್ ಗಳು ಸೇರಿದಂತೆ ಸುಮಾರು 12 ಜನರಿಂದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದು, ನವನಗರ ಸೆಕ್ಟರ್ ನಂ.16 ರಲ್ಲಿ ಬೃಹತ್ ಮನೆ ಮೇಲೆ ದಾಳಿ ಮಾಡಲಾಗಿದೆ.

ದಾವಣಗೆರೆಯಲ್ಲೂ ದಾಳಿ: ದಾವಣಗೆರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಅಧಿಕಾರಿಗಳಿಗೆ ಸೇರಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಸ್ತಿ ಪಾಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಕೆಆರ್ ಐಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್​ಡಿಎ ನಡುವಿನಮನೆ ಎಂಬುವವರ ನಿವಾಸಗಳ ಮೇಲೆ ದಾಳಿ​ ನಡೆದಿದೆ. ದಾವಣಗೆರೆ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದ ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಹಾವೇರಿಯಲ್ಲಿ ದಾಳಿ: ಹಾವೇರಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಡಿಎಸ್‌ಪಿ ಮಧುಸೂದನ್ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ಕಂದಾಯ ನೀರಿಕ್ಷಕ ಅಶೋಕ್ ಅರಳೇಶ್ವರ ಮನೆ ಮತ್ತು ಕಚೇರಿ ಹಾಗೂ ಸವಣೂರು ತಾಲ್ಲೂಕು ಪಂಚಾಯತಿ ಇಓ ಬಸವೇಶ್ವರ ಶಿಡೇನೂರು ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ದಾಖಲೆಗಳನ್ನ‌ ಪರಿಶೀಲನೆ ‌ನಡೆಸಿದ್ದಾರೆ.

ಬೀದರ್‌ನಲ್ಲಿ ದಾಳಿ: ಬೀದರ್‌ನಲ್ಲಿ ಕೃಷಿ ಇಲಾಖೆಯ ಅಧಿಕಾರಿ ಧೂಳಪ್ಪ ಹೊಸಾಳೆ‌ ಮನೆ ಮೇಲೆ ದಾಳಿ ನಡೆಸಿ, ಪರಿಶೀಲಿಸಲಾಗುತ್ತಿದೆ. ಔರಾದ್ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಧೂಳಪ್ಪ ಹೊಸಾಳೆ ಆದಾಯಕ್ಕಿಂತ ಹೆಚ್ಚಿನ ಗಳಿಕೆ ಆರೋಪದ ಮೇಲೆ ಲೋಕಾ ಪೊಲೀಸರು ಅವರಿಗೆ ಸೇರಿದ 3 ಮನೆ ಹಾಗು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಭಾಲ್ಕಿ ತಾಲೂಕಿನ ಕರಡ್ಯಾಳ ಮನೆ, ಕಮಲನಗರ ತಾಲೂಕು ಮುದೊಳ ಮನೆ, ಔರಾದ್ ಕೃಷಿ ಇಲಾಖೆ ಕಚೇರಿ ಹಾಗು ಬೀದರ್ ನಗರದ ಗುರುನನಾಕ್ ಕಾಲೊನಿಯಲ್ಲಿರುವ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ‌ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.

ಕಾರವಾರದಲ್ಲಿ ದಾಳಿ

ಅಕ್ರಮ ಆಸ್ತಿ ವಿಚಾರ ಹಿನ್ನೆಲೆ ಉಡುಪಿ RTO ಅಧಿಕಾರಿ ಎಲ್.ಪಿ ನಾಯ್ಕ್ ಮನೆ, ಮೂಲ ಮನೆ ಹಾಗೂ ಖಾಸಗಿಯಾಗಿ ಕಟ್ಟಡಗಳ ಮೇಲೂ ದಾಳಿ ನಡೆದಿದ್ದು, ಏಕಕಾಲದಲ್ಲಿ ಉಡುಪಿ ಮತ್ತು ಕುಮಟಾದ ಚಂದಾವರಲ್ಲಿರುವ ಮನೆಗಳ ಮೇಲೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ವಿನಾಯಕ್ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ಚಂದಾವರದಲ್ಲಿರುವ ಎಲ್‌.ಪಿ.ನಾಯ್ಕ್ ಮೂಲ ಮನೆಯಲ್ಲಿ ದೊಡ್ಡಪ್ಪ, ಚಿಕ್ಕಪ್ಪಂದಿರು ನೆಲೆಸಿದ್ದಾರೆ. ಎಲ್.ಪಿ.ನಾಯ್ಕ್ ಕುಮಟಾದಲ್ಲಿ ಉದಯ್ ಹಾಗೂ ವೈಭವ್ ಬಿಲ್ಡಿಂಗ್ ಹೊಂದಿದ್ದು, ಬಿಲ್ಡಿಂಗ್‌ಗಳು ಸಂಬಂಧಿಕರ ಹೆಸರಿನಲ್ಲಿರುವುದಾಗಿ ಪತ್ತೆಯಾಗಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌