ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತಡೆದು ಸಂವಿಧಾನವನ್ನು ಉಳಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಕಾರವಾರ, ಉತ್ತರಕನ್ನಡ (ಮಾ.17): ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತಡೆದು ಸಂವಿಧಾನವನ್ನು ಉಳಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಬಿಜೆಪಿಯ ಸರ್ವಾಧಿಕಾರಿ ಧೋರಣೆಯಿಂದ ಮುಂದೊಂದು ದಿನ ದೇಶದಲ್ಲಿ ಚುನಾವಣೆಯೂ ಮಾಯವಾಗುತ್ತದೆ. ಹೀಗಾಗಿ ಆಮ್ ಆದ್ಮಿ ಫಾರ್ಟಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದೆ ಎಂದರು.
ಸಿದ್ದರಾಮಯ್ಯ ಬಗ್ಗೆ ಅವಹೇಳನ: ಸಂಸದ ಅನಂತ್ ಕೇಸಿಗೆ ಹೈಕೋರ್ಟ್ ತಡೆ
ಸಂವಿಧಾನವನ್ನೇ ಬದಲಾಯಿಸುವ ಹೇಳಿಕೆ ನೀಡಿದ ಅನಂತ ಕುಮಾರ್ ಹೆಗಡೆ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಜೆಪಿಯ ನಿರ್ಧಾರವೂ ಸಂವಿಧಾನ ಬದಲಾವಣೆಯೇ ಆಗಿದೆ. ಮತ್ತೊಮ್ಮೆ ಹೆಗ್ಡೆಗೆ ಟಿಕೆಟ್ ನೀಡಿದರೆ ಬಿಜೆಪಿ ನಿರ್ಧಾರ ಖಚಿತವಾಗುತ್ತದೆ. ಇದೀಗ ರಾಮ, ಧರ್ಮದ ಹೆಸರಿನಲ್ಲಿ ಚುನಾವಣೆ ನಡೆಸುತ್ತಿದ್ದಾರೆ. ಪೌರತ್ವ ಕಾಯ್ದೆಯನ್ನು ಚುನಾವಣೆಯ ಸಂದರ್ಭದಲ್ಲಿ ಜಾರಿಗೆ ತಂದಿದ್ದಾರೆ. ವಿವಿಧ ಕಾನೂನುಗಳನ್ನು ತಂದು ಮುಖ್ಯ ನ್ಯಾಯಾಧೀಶರನ್ನೇ ಇಳಿಸಿದ್ದಾರೆ. ಇ.ಡಿ. ಯನ್ನು ಉಪಯೋಗಿಸಿ ಪಕ್ಷಕ್ಕೆ ಹಣ ಸಂಗ್ರಹಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಹಿಂದೆ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರುತ್ತೇವೆ ಎಂದು ಜನರನ್ನ ಮರುಳು ಮಾಡಿದ್ದರು. ಅಧಿಕೃತ ಅಧಿಕಾರ ಉಪಯೋಗಿಸಿ ದರೋಡೆ ಮಾಡಿದ್ದರು. ನರೇಂದ್ರ ಮೋದಿ ಸರ್ಕಾರ ಹಿಟ್ಲರ್‌ಗಿಂತ ಕೆಟ್ಟ ಸರ್ಕಾರವಾಗಿದೆ. ವಿಶ್ವ ಮಾನವ ಅನಿಸಿಕೊಂಡವರು ಖಾಸಗಿ ವ್ಯಕ್ತಿಗಳ 10 ಲಕ್ಷ ಕೋಟಿ ರೂ. ಮನ್ನಾ ಮಾಡಿ ರೈತರನ್ನು ಬೀದಿಗೆ ತಂದಿದ್ದಾರೆ. ದೇಶದ ಶೇ.80 ರಷ್ಟು ರೈತರನ್ನು ಹತ್ತಿಕ್ಕಿ ಮೂರ್ನಾಲ್ಕು ಸ್ನೇಹಿತರನ್ನು ಉಳಿಸಲು ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ನಾನು ಇರುವ ತನಕ ಕಾಂಗ್ರೆಸ್‌ಗೆ ನೆಮ್ಮದಿ ಕೊಡಲ್ಲ: ಸಂಸದ ಅನಂತಕುಮಾರ ಹೆಗ್ಡೆ!
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಜನರು ಉಸಿರಾಡಲು ಸಾಧ್ಯವಿಲ್ಲ. ಕುಟುಂಬ ರಾಜಕಾರಣದಿಂದ ಅಭಿವೃದ್ಧಿ ಆಗೊಲ್ಲ ಅಂದಿದ್ರು. ಆದರೆ ಯಡಿಯೂರಪ್ಪ, ಸೋಮಣ್ಣ, ತೇಜಸ್ವಿಸೂರ್ಯ, ದೇವೇಗೌಡ ಅವರದ್ದು ಕುಟುಂಬ ರಾಜಕಾರಣ ಅಲ್ಲವೇ? ಎಂದು ಪ್ರಶ್ನಿಸಿದರು. ಇದೇ ವೇಳೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಆಮ್ ಆದ್ಮಿ ಪಕ್ಷ ಸ್ಪರ್ಧಿಸುವುದಿಲ್ಲ. ಬಿಜೆಪಿಯನ್ನು ಸೋಲಿಸುವ ಹಿನ್ನೆಲೆ ಕಾಂಗ್ರೆಸ್‌ನೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಇದ್ದರೂ ಕೈ ಜೋಡಿಸಿದ್ದೇವೆ. ಕಾಂಗ್ರೆಸ್‌ನವರು ಆಹ್ವಾನಿಸಿದರೆ ನಮ್ಮ ಪಕ್ಷದ ಚಿಹ್ನೆ, ಬಾವುಟ ಹಿಡಿದು ಪ್ರಚಾರದಲ್ಲಿ ಭಾಗವಹಿಸುತ್ತೇವೆ ಎಂದರು.