ಬ್ರಿಟನ್‌ ವೈರಸ್‌ ಭೀತಿ: ಮತ್ತೆ ಲಾಕ್‌ಡೌನ್‌ ಆಗುತ್ತಾ?

By Kannadaprabha NewsFirst Published Dec 23, 2020, 8:16 AM IST
Highlights

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಜಾರಿ ಸಾಧ್ಯತೆ| ಇಂದು ಸಿಎಂ ಜೊತೆ ತಾಂತ್ರಿಕ ಸಮಿತಿ ಚರ್ಚೆ| ವೈರಾಣು ತಜ್ಞ ವಿ.ರವಿ ನೇತೃತ್ವದಲ್ಲಿ ಸೋಂಕಿನ ಅನುವಂಶೀಯತೆ ಅಧ್ಯಯನದಂತಹ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ| 

ಬೆಂಗಳೂರು(ಡಿ.23): ಕೋವಿಡ್‌-19 ಎರಡನೇ ಅಲೆ ಭೀತಿ ಹಾಗೂ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೋವಿಡ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಮಹಾಮಾರಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಯಿದೆ.

"

ಕೋವಿಡ್‌ನ ಹೊಸ ರೂಪಾಂತರದ ಹಾವಳಿ ನಮ್ಮ ದೇಶದಲ್ಲೂ ಆರಂಭವಾಗುವ ಲಕ್ಷಣವಿರುವ ಹಿನ್ನೆಲೆಯಲ್ಲಿ ಮಂಗಳವಾರ ವರ್ಚುವಲ್‌ ಸಭೆ ನಡೆಸಿದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೊಸ ಮಾರ್ಗಸೂಚಿಯ ರೂಪರೇಷೆ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಾರ್ಗಸೂಚಿ ಬಗ್ಗೆ ಬುಧವಾರ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅನಂತರ ಜಾರಿಗೆ ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೊಸ ವೈರಾಣು ಹರಡುವುದಕ್ಕೆ ಆರಂಭಗೊಂಡರೆ ಈ ಹಿಂದಿನ ಕೋವಿಡ್‌-19 ವೈರಾಣುಗಿಂತ ವೇಗವಾಗಿ ಹರಡುವ ಸಾಧ್ಯತೆಯಿದೆ. ಇದರ ಜತೆಗೆ ಜನವರಿಯಲ್ಲಿ ಎರಡನೇ ಅಲೆಯ ಭೀತಿಯೂ ಇದೆ. ಇವೆರಡು ಏಕಕಾಲಕ್ಕೆ ರಾಜ್ಯದಲ್ಲಿ ಆರಂಭವಾದರೆ ಅನಾಹುತ ಸೃಷ್ಟಿಯಾಗಬಹುದು. ಹಿಂದಿನಂತೆ ಲಾಕ್‌ಡೌನ್‌, ರಾತ್ರಿ ಕಪ್ರ್ಯೂನಂತೆ ಕಹಿ ಸನ್ನಿವೇಶ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಕಠಿಣ ಮಾರ್ಗಸೂಚಿ ರೂಪಿಸುವ ಪ್ರಯತ್ನವನ್ನು ಸಮಿತಿ ನಡೆಸಿತು ಎನ್ನಲಾಗಿದೆ.
ರಾಜ್ಯದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್‌, ಸಾಮಾಜಿಕ ಅಂತರ ಪಾಲನೆ, ಸಭೆ ಸಮಾರಂಭ ನಿರ್ಬಂಧದ ಜತೆಗೆ, ಪಾರ್ಕ್, ಹೋಟೆಲ್‌, ಈಜುಕೊಳ, ಬಸ್‌, ರೈಲು ನಿರ್ಬಂಧದಂತಹ ಕಠಿಣ ಮಾರ್ಗವನ್ನು ಸಮಿತಿ ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಲ್ಲದೆ, ಹೊಸ ಮಾದರಿಯ ಸೋಂಕು ಪತ್ತೆಯಾದವರಿಗೆ ಆಸ್ಪತ್ರೆಯಲ್ಲಿಯೇ ಕಡ್ಡಾಯ ಚಿಕಿತ್ಸೆ ನೀಡಬೇಕು. ಹೋಂ ಐಸೋಲೇಷನ್‌ಗೆ ಅವಕಾಶ ನೀಡಬಾರದು ಎಂಬ ಶಿಫಾರಸನ್ನು ಸಮಿತಿ ಮಾಡಬಹುದು.

'ಬ್ರಿಟನ್‌ ವೈರಸ್‌ ಬಗ್ಗೆ ಕಟ್ಟೆಚ್ಚರ: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಇಲ್ಲ'

ಪ್ರತ್ಯೇಕ ತಂಡ ರಚನೆ ಸಾಧ್ಯತೆ: 

ಇದರ ಜತೆಗೆ, ಹೊಸ ಮಾದರಿಯ ಕೊರೋನಾ ಸೋಂಕು ಪತ್ತೆಯಾದರೆ ಅದರ ಬಗ್ಗೆ ಅಧ್ಯಯನಕ್ಕೆ ನಿಮ್ಹಾನ್ಸ್‌ನಲ್ಲಿ ಪ್ರತ್ಯೇಕ ತಂಡ ರಚನೆ ಮಾಡುವ ಸಾಧ್ಯತೆಯಿದೆ. ವೈರಾಣು ತಜ್ಞ ವಿ.ರವಿ ನೇತೃತ್ವದಲ್ಲಿ ಸೋಂಕಿನ ಅನುವಂಶೀಯತೆ ಅಧ್ಯಯನದಂತಹ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
 

click me!