
- ಮೇಲ್ಮನವಿ ಸಲ್ಲಿಸಲು 50% ಠೇವಣಿ ಕಡ್ಡಾಯವಲ್ಲ: ಕೋರ್ಟ್
ಬೆಂಗಳೂರು (ಮೇ.29): ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿ-ಕಟ್ಟಡಗಳ ಮಾಲೀಕರು ಸುಸ್ತಿದಾರರಾದಾಗ, ಆ ಆಸ್ತಿಯಲ್ಲಿ ವಾಸವಿರುವ ಅಥವಾ ಕಚೇರಿ ಹೊಂದಿರುವ ಬಾಡಿಗೆದಾರರು ಸಾಲ ವಸೂಲಾತಿಗೆ ನ್ಯಾಯಾಧಿಕರಣ (ಡಿಆರ್‌ಟಿ) ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಾಲದ ಮೊತ್ತದ ಶೇ.50ರಷ್ಟನ್ನು ಠೇವಣಿ ಇಡಬೇಕು ಎನ್ನುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯ ಪೀಠ, ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ, ಸಾಲದ ಹೊಣೆಗಾರಿಕೆಯನ್ನು ಬಾಡಿಗೆದಾರನ ಮೇಲೆ ಹೇರಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಣಕಾಸು ಆಸ್ತಿಗಳ ಸಕ್ಯುರಿಟೈಸೇಶನ್ ಮತ್ತು ಪುನರ್‌ನಿರ್ಮಾಣ ಮತ್ತು ಭದ್ರತಾ ಆಸಕ್ತಿ ಜಾರಿ(ಸರ್ಫೇಸಿ) ಕಾಯ್ದೆಯ ಸೆಕ್ಷನ್ 18ರಲ್ಲಿ ‘ಸಾಲಗಾರ’ ಮತ್ತು ‘ಸಾಲಗಾರನಲ್ಲದ ಇತರ ವ್ಯಕ್ತಿ’ ಎಂದು ಇಬ್ಬರನ್ನೂ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. 2ನೇ ನಿಬಂಧನೆಯಲ್ಲಿ ಕೇವಲ ‘ಸಾಲಗಾರ’ ಮಾತ್ರ ಶೇ.50ರಷ್ಟು ಪೂರ್ವ ಠೇವಣಿ ಇಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ, ಸಾಲಗಾರನಲ್ಲದ 3ನೇ ವ್ಯಕ್ತಿಯ ಮೇಲೆ ಸಾಲದ ಹೊರೆ ಹೊರಿಸುವುದು ತಾರತಮ್ಯ ಮತ್ತು ಅನ್ಯಾಯವಾಗಲಿದೆ ಎಂದು ಪೀಠ ಹೇಳಿದೆ.
ಉತ್ತಮ್ ಚಂದಾನಿ ಎಂಬುವರ ಮಾಲೀಕತ್ವದ ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿರುವ ‘ಕಾನ್ಸುಲೇಟ್-1’ ಕಟ್ಟಡದ 4ನೇ ಮಹಡಿಯಲ್ಲಿ 7,045 ಚದರಡಿಯಲ್ಲಿ ಇಟ್ಟಿಯಂ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ 2001 ರಿಂದ ಬಾಡಿಗೆಗೆ ಇದೆ. ಈ ಕಟ್ಟಡದ ಮಾಲೀಕ ಉತ್ತಮ್ ಚಂದಾನಿ ಎಂಬುವವರು ಮುಂಬೈನ ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ’ ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿಸಲು ವಿಫಲರಾದಾಗ ಬ್ಯಾಂಕ್ ''ಸರ್ಫೇಸಿ’ ಕಾಯ್ದೆಯಲ್ಲಿ ಕಟ್ಟಡದ ಸ್ವಾಧೀನ ಪ್ರಕ್ರಿಯೆ ಆರಂಭಿಸಿ ಕಂಪನಿ ಕಚೇರಿಯನ್ನು ತೆರವಿಗೆ ಮುಂದಾಯಿತು. ಅದನ್ನು ಪ್ರಶ್ನಿಸಿ ಕಂಪನಿಯು ಸಾಲ ವಸೂಲಾತಿ ನ್ಯಾಯಾಧೀಕರಣದ (ಡಿಆರ್ ಟಿ) ಮೊರೆ ಹೋಗಿತ್ತು. ಆ ಅರ್ಜಿಯನ್ನು ಡಿಆರ್‌ಟಿಯು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಕಂಪನಿಯು ಚೆನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಬೇಕಾದರೆ ನಿಯಮಾವಳಿಗಳ ಪ್ರಕಾರ ಪೂರ್ವ ಠೇವಣಿ ಇಡಬೇಕು ಎಂದು ಡಿಆರ್‌ಎಟಿ ಆದೇಶಿಸಿ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಚೆನ್ನೈನ ಡಿಆರ್ ಟಿ ಆದೇಶ ರದ್ದುಗೊಳಿಸಿರುವ ಹೈಕೋರ್ಟ್, ಇಟ್ಟಿಯಂ ಸಿಸ್ಟಮ್ಸ್ ಕಂಪನಿಯಿಂದ ಯಾವುದೇ ಪೂರ್ವ ಠೇವಣಿ ಬಯಸದೆ ಅವರ ಮೇಲ್ಮನವಿಯನ್ನು ಮೆರಿಟ್ ಆಧಾರದ ಮೇಲೆ ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ