ಲಕ್ಷಾಂತರ ಭಕ್ತರಿಗೆ ಸಿದ್ಧಗಂಗಾ ಶ್ರೀ ದರ್ಶನ ಭಾಗ್ಯವಿಲ್ಲ

By Web DeskFirst Published Jan 23, 2019, 8:46 AM IST
Highlights

ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿ ಶ್ರೀಗಳ ಶಿವೈಕ್ಯ ಶರೀರದ ದರ್ಶನ ಮಾಡಿದರು. ಸಾಗರೋಪಾದಿಯಲ್ಲಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ತುಮಕೂರು :  ‘ನಡೆದಾಡುವ ದೇವರು’ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಹೊರ ರಾಜ್ಯ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. 

ಸೋಮವಾರ ಮಧ್ಯಾಹ್ನದಿಂದಲೇ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ರಾಜ್ಯದ ಎಲ್ಲಾ ದಿಕ್ಕುಗಳಿಂದಲೂ ಭಕ್ತರು ಸಿದ್ಧಗಂಗೆ ಕಡೆ ಮುಖ ಮಾಡಿದರು. ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿ ಶ್ರೀಗಳ ಶಿವೈಕ್ಯ ಶರೀರದ ದರ್ಶನ ಮಾಡಿದರು. ಸಾಗರೋಪಾದಿಯಲ್ಲಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಲಕ್ಷಾಂತರ ಭಕ್ತರಿಗೆ ದರ್ಶನವಿಲ್ಲ

24 ಗಂಟೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರೆ ಇನ್ನುಳಿದ ಲಕ್ಷಾಂತರ ಭಕ್ತರಿಗೆ ಶ್ರೀಗಳ ದರ್ಶನ ಸಾಧ್ಯವಾಗದೇ ಹೋಯಿತು. ದೂರದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಪಾರ್ಥಿವ ಶರೀರವನ್ನು ಕೊನೆಯ ಬಾರಿ ನೋಡಬೇಕೆಂಬ ಅದಮ್ಯ ಆಸೆ ಹೊಂದಿದ್ದರು. 

ಆದರೆ ಕ್ರಿಯಾವಿಧಿಗೆ ತೆರಳಬೇಕಾಗಿದ್ದರಿಂದ ಮಂಗಳವಾರ ಸಂಜೆ ಬಳಿಕ ದರ್ಶನ ನಿರಾಕರಿಸಲಾಯಿತು. ಹೀಗಾಗಿ ಕೆಲ ಭಕ್ತರು ದೂರದೂರಿಂದ ಬಂದಿದ್ದೇವೆ, ಸ್ವಾಮೀಜಿಗಳ ಮುಖವನ್ನು ಒಮ್ಮೆ ನೋಡಿಕೊಂಡು ಹೋಗುತ್ತೇವೆ ಎಂದು ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

click me!