ಕೇಂದ್ರಕ್ಕೆ ಕೆಎಸ್ಸಾರ್ಟಿಸಿಯಿಂದ ಪತ್ರ

By Kannadaprabha NewsFirst Published Nov 29, 2019, 8:56 AM IST
Highlights

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಕ ಮಾದರಿ ಟೋಲ್‌ ವಸೂಲಿಗೆ ಡಿ.1ರಿಂದ ಕಡ್ಡಾಯಗೊಳಿಸಿರುವ ‘ಫಾಸ್ಟ್‌ ಟ್ಯಾಗ್‌’ ಅಳವಡಿಕೆಗೆ ಸಮಯಾವಕಾಶ ನೀಡುವಂತೆ ಕೇಂದ್ರಕ್ಕೆ KSRTCಯಿಂದ ಪತ್ರ ಬರೆಯಲಾಗಿದೆ. 

ಬೆಂಗಳೂರು [ನ.29]:   ಕೇಂದ್ರ ಸರ್ಕಾರ ದೇಶದೆಲ್ಲೆಡೆ ಎಲ್ಲಾ ರೀತಿಯ ವಾಹನಗಳಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಕ ಮಾದರಿ ಟೋಲ್‌ ವಸೂಲಿಗೆ ಡಿ.1ರಿಂದ ಕಡ್ಡಾಯಗೊಳಿಸಿರುವ ‘ಫಾಸ್ಟ್‌ ಟ್ಯಾಗ್‌’ ಅಳವಡಿಕೆಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿವೆ.

ಕೆಎಸ್‌ಆರ್‌ಟಿಸಿಯ ಸುಮಾರು ನಾಲ್ಕು ಸಾವಿರ ಬಸ್‌ಗಳು ಪ್ರತಿ ದಿನ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ಸೇರಿದಂತೆ ಏಳು ರಾಜ್ಯಗಳ 81 ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುತ್ತವೆ. ಇದರಿಂದ ಪ್ರತಿ ತಿಂಗಳು ಸುಮಾರು ಆರು ಕೋಟಿ ರು. ಟೋಲ್‌ ಶುಲ್ಕ ಪಾವತಿಸಲಾಗುತ್ತಿದೆ. ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಈ ವ್ಯವಸ್ಥೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸಿ ಬಳಿಕ ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. 

ನಾಲ್ಕು ಸಾವಿರ ಬಸ್‌ಗಳಿಗೆ ಡಿ.1ರೊಳಗೆ ಅಳವಡಿಸುವುದು ಸುಲಭದ ಮಾತಲ್ಲ. ಹಾಗಾಗಿ ಮೂರು ತಿಂಗಳು ಕಾಲಾವಕಾಶ ಕೋರಿ ವಾರದ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಹಾಗೂ ಹೊರಾಜ್ಯಗಳಿಗೆ ಸೇವೆ ನೀಡುವ ಕೆಎಸ್‌ಆರ್‌ಟಿಯು 2017ರಲ್ಲೇ ನಿಗಮದ ಐದು ಸಾವಿರ ಬಸ್‌ಗಳಿಗೆ ಫಾಸ್ಟ್‌ ಟ್ಯಾಗ್‌ ಅಳವಡಿಕೆ ಮಾಡಿತ್ತು. ಈ ವೇಳೆ ಕೆಲ ಟೋಲ್‌ ಪ್ಲಾಜಾದಲ್ಲಿ ಬಸ್‌ ಹೋದರೆ ಫಾಸ್ಟ್‌ ಟ್ಯಾಗ್‌ ಖಾತೆಯಿಂದ ಎರಡು, ಮೂರು ಬಾರಿ ಹಣ ಕಡಿತವಾಗುತ್ತಿತ್ತು. ಪ್ರತಿ ದಿನ ಇಂತಹ ಸಮಸ್ಯೆಗಳು ಹೆಚ್ಚಾದ್ದರಿಂದ ನಿರ್ವಹಿಸುವುದು ಕಷ್ಟವಾಗಿತ್ತು. ಹಾಗಾಗಿ ಈ ಫಾಸ್ಟ್‌ ಟ್ಯಾಗ್‌ ಕೈಬಿಡಲಾಗಿತ್ತು. ಈಗ ಇಡೀ ದೇಶಕ್ಕೆ ಅನ್ವಯವಾಗುವಂತೆ ಫಾಸ್ಟ್‌ ಟ್ಯಾಗ್‌ ಅಳವಡಿಕೆ ಕಡ್ಡಾಯಗೊಳಿಸಲಾಗುತ್ತಿದೆ. ಹಾಗಾಗಿ ಅನಿವಾರ್ಯವಾಗಿ ನಿಗಮದ ಬಸ್‌ಗಳಿಗೂ ಅಳವಡಿಸಿಕೊಳ್ಳಬೇಕು. ಆದರೆ, ಸಮಯಾವಕಾಶದ ಕೊರತೆಯಿಂದ ಮೂರು ತಿಂಗಳು ಕಾಲಾವಕಾಶ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು.

click me!