ಸಿಎಂಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ರಿಂದ ‘ಬಿಸಿ ಪತ್ರ’

By Web DeskFirst Published Oct 18, 2018, 7:42 AM IST
Highlights

ಕಾಂಗ್ರೆಸ್ ನಲ್ಲಿ ಅಳಲು ತೀವ್ರ​ಗೊ​ಳ್ಳು​ತ್ತಿ​ರುವ ಬೆನ್ನಲ್ಲೇ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರು ಈ ಕುರಿತು ನೇರ​ವಾಗಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಪತ್ರ ಬರೆ​ದಿದ್ದಾರೆ. 

ಬೆಂಗಳೂರು :  ಸ್ಥ​ಳೀಯ ಪ್ರಾಧಿ​ಕಾ​ರ​ಗ​ಳಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯ​ಕ​ರ್ತ​ರನ್ನು ಕಡೆ​ಗ​ಣಿ​ಸ​ಲಾ​ಗು​ತ್ತಿದೆ ಎಂಬ ಅಳಲು ತೀವ್ರ​ಗೊ​ಳ್ಳು​ತ್ತಿ​ರುವ ಬೆನ್ನಲ್ಲೇ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರು ಈ ಕುರಿತು ನೇರ​ವಾಗಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಪತ್ರ ಬರೆ​ದಿದ್ದು, ಸ್ಥಳೀಯ ಪ್ರಾಧಿ​ಕಾ​ರ​ಗ​ಳಲ್ಲಿ ಜೆಡಿ​ಎ​ಸ್‌ನ ಜತೆಗೆ ಕಾಂಗ್ರೆಸ್‌ ಕಾರ್ಯ​ಕ​ರ್ತ​ರಿಗೂ ಅವ​ಕಾಶ ನೀಡ​ಬೇಕು ಎಂದು ಆಗ್ರ​ಹಿ​ಸಿ​ದ್ದಾ​ರೆ.

ಸಮ್ಮಿಶ್ರ ಸರ್ಕಾರ ಬಂದ ನಂತರ ಇದೇ ಮೊದಲ ಬಾರಿಗೆ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರು ಮುಖ್ಯ​ಮಂತ್ರಿ​ಯ​ವ​ರಿಗೆ ಪತ್ರ ಬರೆ​ದಿದ್ದು, ಹೊಸದಾಗಿ ರಚಿಸುವ ಅಕ್ರಮ-ಸಕ್ರಮ ಸಮಿತಿ, ಭೂ ನ್ಯಾಯಮಂಡಳಿ ಸೇರಿದಂತೆ ತಾಲೂಕು, ಜಿಲ್ಲಾ ಮಟ್ಟದ ಎಲ್ಲಾ ಸಮಿತಿಗಳಲ್ಲೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದ​ಸ್ಯ​ರಿಗೆ ಸಮಾನ ಅವ​ಕಾಶ ನೀಡ​ಬೇಕು ಎಂದು ಒತ್ತಾ​ಯಿ​ಸಿ​ದ್ದಾ​ರೆ.

ಸಮಿತಿಗಳ ಸದಸ್ಯರ ನೇಮಕದ ವೇಳೆ ಕಾಂಗ್ರೆಸ್‌ ಪಕ್ಷ ಹಾಗೂ ಜೆಡಿಎಸ್‌ ಪಕ್ಷದ ಸದಸ್ಯರಿಗೆ ಹೆಚ್ಚು ಅವಕಾಶ ನೀಡಬೇಕು. ಕಾಂಗ್ರೆಸ್‌ ಪಕ್ಷದ ಶಾಸಕರು ಇರುವಂತಹ ಕ್ಷೇತ್ರ, ತಾಲೂಕುಗಳಲ್ಲಿ ಸಮಿತಿ ರಚಿಸುವಾಗ 2:1 ಅನುಪಾತದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರನ್ನು ನೇಮಿಸಬೇಕು. ಜೆಡಿಎಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ 2:1 ಅನುಪಾತದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರನ್ನು ನೇಮಿಸಬೇಕು. ಈ ಬಗ್ಗೆ ತಮ್ಮ ಮಂತ್ರಿಮಂಡಲದ ಎಲ್ಲಾ ಸಚಿವರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದ ಮೂಲಕ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಆಯಾ ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ರಚನೆಯಾಗುವ ತಾಲೂಕು, ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಎರಡೂ ಪಕ್ಷಗಳಿಗೆ ಪ್ರಾಧ್ಯಾನ್ಯತೆ ದೊರೆಯುವಂತೆ ಮಾಡಬೇಕು. ಸ್ಥಳೀಯವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡುವುದರಿಂದ ಎರಡೂ ಪಕ್ಷಗಳಿಗೂ ಒಳ್ಳೆಯದಾಗಲಿದೆ. ಈ ಮೂಲಕ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಹೀಗಾಗಿ ಇದನ್ನು ಆದ್ಯತೆ ವಿಷಯವಾಗಿ ಗಮನ ಹರಿಸಿ ಪಕ್ಷದ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾ​ರವು ಜಿಲ್ಲಾ ಮಟ್ಟದ ಪ್ರಾಧಿ​ಕಾ​ರಗಳ ನೇಮಕಾತಿ ವೇಳೆ ಕಾಂಗ್ರೆಸ್‌ ಕಾರ್ಯ​ಕ​ರ್ತ​ರನ್ನು ನಿರ್ಲ​ಕ್ಷಿಸಿ ಕೇವಲ ಜೆಡಿ​ಎ​ಸ್‌ನ ಕಾರ್ಯ​ಕ​ರ್ತ​ರನ್ನು ಮಾತ್ರ ನೇಮಕ ಮಾಡು​ತ್ತಿ​ದೆ ಎಂಬ ಬಗ್ಗೆ ಕಾಂಗ್ರೆಸ್‌ ಶಾಸ​ಕ​ರಿಂದ ವ್ಯಾಪಕ ದೂರು​ಗ​ಳಿ​ದ್ದವು. ಇತ್ತೀ​ಚೆಗೆ ಬೆಂಗ​ಳೂ​ರಿಗೆ ಬಂದಿದ್ದ ಕಾಂಗ್ರೆಸ್‌ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ಅವ​ರಿಗೂ ಕಾಂಗ್ರೆಸ್‌ ನಾಯ​ಕರು ಈ ಬಗ್ಗೆ ದೂರು ನೀಡಿ​ದ್ದರು. ಇದಕ್ಕೆ ಪ್ರತಿ​ಯಾಗಿ ವೇಣು​ಗೋ​ಪಾಲ್‌ ಅವರು ಜೆಡಿಎಸ್‌ ಮೈತ್ರಿ ಧರ್ಮ ಪಾಲಿ​ಸ​ದಿ​ದ್ದರೆ, ಕಾಂಗ್ರೆಸ್‌ ಕೂಡ ಪಾಲಿ​ಸು​ವುದು ಬೇಡ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಸಚಿ​ವರು ತಮ್ಮ ಅಧಿ​ಕಾರ ವ್ಯಾಪ್ತಿ​ಯಲ್ಲಿ ಜೆಡಿ​ಎಸ್‌ ಕಾರ್ಯ​ಕ​ರ್ತ​ರಿಗೆ ಪ್ರಾತಿ​ನಿಧ್ಯ ನೀಡ​ಬಾ​ರದು ಎಂದು ಸೂಚಿ​ಸಿ​ದ್ದನ್ನು ಇಲ್ಲಿ ಸ್ಮರಿ​ಸ​ಬ​ಹು​ದು.

click me!