'ಕೊಡವರು ಬಂದೂಕು ಪರವಾನಗಿ ಪಡೆಯಬೇಕಿಲ್ಲ'

By Kannadaprabha NewsFirst Published Sep 23, 2021, 8:09 AM IST
Highlights

*  ಪರವಾನಗಿ ವಿನಾಯಿತಿ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟಿಂದ ವಜಾ
*  ಜುಮ್ಮಾಬಾಣೆ ಜಮೀನು ಹೊಂದಿದವರಿಗೂ ಲೈಸೆನ್ಸ್‌ ಬೇಕಿಲ್ಲ
*  ಈ ಸೌಲಭ್ಯವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಹೊಂದಿರುವ ಕೊಡವರು 
 

ಬೆಂಗಳೂರು(ಸೆ.23): ಕೊಡವರು ಮತ್ತು ಜುಮ್ಮಾಬಾಣೆ ಭೂಮಿ ಹೊಂದಿರುವವರಿಗೆ ಬಂದೂಕು ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್‌(HighCourt) ಆದೇಶಿಸಿದೆ.

ಈ ಕುರಿತಂತೆ ಮಡಿಕೇರಿಯ ಗಾಳಿಬೀಡು ನಿವಾಸಿ, ನಿವೃತ್ತ ಸೇನಾಧಿಕಾರಿ ವೈ.ಕೆ. ಚೇತನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಸಿ. ಶರ್ಮಾ ನೇತೃತ್ವದ ವಿಭಾಗೀಯ ಪೀಠ ಬುಧವಾರ ಪ್ರಕಟಿಸಿತು. ಇದೇ ವೇಳೆ ಬಂದೂಕು(Gun) ಪರವಾನಗಿ ವಿನಾಯಿತಿ ನೀಡಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ 2019 ಅ.29ರಂದು ಹೊರಡಿಸಿರುವ ಅಧಿಸೂಚನೆಯನ್ನು ಎತ್ತಿಹಿಡಿದಿದೆ.

Latest Videos

ಕೊಡವರನ್ನು 1890ರಿಂದ ಮಾರ್ಷಲ್‌ ಜನಾಂಗದವರೆಂದು ಪರಿಗಣಿಸಲಾಗಿದೆ. ಆಗಿನಿಂದಲೂ ಬಂದೂಕು ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಶಸ್ತ್ರಾಸ್ತ ಕಾಯ್ದೆ-1959ರ ಸೆಕ್ಷನ್‌ 41 ಅನುಸಾರ ಕೊಡವರಿಗೆ ಹಾಗೂ ಜಮ್ಮಾ ಬಾಣೆ ಭೂಮಿ ಹೊಂದಿರುವವರಿಗೆ 10 ವರ್ಷಗಳ ಅವಧಿಗೆ ಬಂದೂಕು ಪರವಾನಗಿ ವಿನಾಯಿತಿ ನೀಡಿ ಕೇಂದ್ರ ಸರ್ಕಾರ 2019ರ ಅ.29ರಂದು ಅಧಿಸೂಚನೆ ಹೊರಡಿಸಿದೆ. ಅನೇಕ ಷರತ್ತು ವಿಧಿಸಿಯೇ ವಿನಾಯಿತಿ ನೀಡಲಾಗಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

'ಮತಾಂತರ ತಡೆಗೆ ರಾಜ್ಯದಲ್ಲೂ ಕಾನೂನು ತನ್ನಿ'

ಅಲ್ಲದೆ, ಕೊಡವರು ಹಾಗೂ ಜಮ್ಮಾ ಬಾಣೆ ಭೂಮಿ ಹೊಂದಿರುವವರು ಸ್ವಾತಂತ್ರ್ಯಾ ಪೂರ್ವದಿಂದಲೂ ಬಂದೂಕು ಪರವಾನಗಿ ಹೊಂದುವುದರಿಂದ ವಿನಾಯಿತಿ ಪಡೆಯುತ್ತಾ ಬಂದಿದ್ದಾರೆ. ಸ್ವ-ರಕ್ಷಣೆಗಾಗಿ ಬಂದೂಕುಗಳನ್ನು ಹೊಂದಿರುತ್ತಾರೆ. ಅದರಂತೆಯೇ ಅವರಿಗೆ ಬಂದೂಕು ಪರವಾನಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಾಯಿತಿ ನೀಡಿರುವುದು ಕಾನೂನುಬದ್ಧವಾಗಿದೆ. ಇದರಲ್ಲಿ ಯಾವುದೇ ಸಾಂವಿಧಾನಿಕ ಹಕ್ಕು ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪುರಸ್ಕರಿಸಿದೆ.

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲೆ ಬಿ.ವಿ. ವಿದ್ಯುಲ್ಲತಾ ವಾದ ಮಂಡಿಸಿ, ಬಂದೂಕು ಸೇರಿ ಶಸ್ತಾಸ್ತ್ರ ಹೊಂದಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಭಾರತೀಯ ಶಸ್ತ್ರಾಸ್ತ ಕಾಯ್ದೆ-1959 ಪ್ರಕಾರ ಪರವಾನಗಿ ಪಡೆಯಲೇಬೇಕು. ಆದರೆ, ಕೊಡವ ಜನಾಂಗಕ್ಕೆ ಕತ್ತಿ, ಬಂದೂಕು ಹೊಂದುವುದು ಸಾಂಪ್ರದಾಯಿಕ ಹಕ್ಕು ಎಂದು ತಿಳಿಸಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಕೊಡವರು ಹಾಗೂ ಜಮ್ಮಾ ಭೂಮಿ ಹೊಂದಿರುವವರಿಗೆ ಬಂದೂಕು ಪರವಾನಿಗೆ ಪಡೆಯುವುದರಿಂದ ವಿನಾಯಿತಿ ನೀಡಿದೆ. ಅದಕ್ಕೆ ಯಾವುದೇ ಮಾನದಂಡ ನಿಗದಿಪಡಿಸಿಲ್ಲ ಎಂದು ಆಕ್ಷೇಪಿಸಿದ್ದರು.

ಹಾಗೆಯೇ, ಕೊಡಗಿನಲ್ಲೇ ಇರುವ ಇತರೆ ಜನಾಂಗ, ಬುಡಕಟ್ಟು ವಾಸಿಗಳಿಗೆ ಆ ವಿನಾಯಿತಿ ಇಲ್ಲ. ಇದು ತಾರತಮ್ಯವಾಗಿದೆ. ಕೊಡವರಿಗೆ ವಿನಾಯಿತಿ ನೀಡಿರುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ, ಇದು ಶಸ್ತ್ರಾಸ್ತ್ರ ಶ್ರೇಣೀಕರಣವನ್ನು ಉತ್ತೇಜಿಸುತ್ತದೆ. ಪರವಾನಿಗೆ ವಿನಾಯಿತಿ ತೆಗೆಯುವುದರಿಂದ ಕೊಡವರ ಸಂಪ್ರದಾಯಗಳಿಗೆ ತೊಂದರೆ ಇಲ್ಲ. ವಿನಾಯಿತಿ ನೀಡಿರುವುದು ಅಸಾಂವಿಧಾನಿಕವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ 2019 ಅ.29ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದರು.

ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ.ನರಗುಂದ ವಾದಿಸಿ, ಕೊಡವರಿಗೆ ಬಂದೂಕು ಪರವಾನಗಿ ವಿನಾಯಿತಿ ನೀಡುವುದರಿಂದ ಅರ್ಜಿದಾರರ ಮೂಲಭೂತ ಹಕ್ಕಿಗೆ ತೊಂದರೆ ಇಲ್ಲ. ಕೊಡವರು ವಿಶೇಷ ಬುಡಕಟ್ಟು ಜನಾಂಗ, ಅವರಲ್ಲಿ ಜಾತಿಗಳಿಲ್ಲ. ಅವರು ಕಾವೇರಿ ಮಾತೆ ಮತ್ತು ಶಸ್ತ್ರಾಸ್ತ್ರಗಳನ್ನು ಮಾತ್ರ ಪೂಜಿಸುತ್ತಾರೆ. ಕೇವಲ ಒಂದು ಬಗೆಯ ರೈಫಲ್‌ಗೆ ಮಾತ್ರ ಪರವಾನಗಿ ವಿನಾಯಿತಿ ನೀಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.

ಕೊಡಗು(Kodagu) ಮೂಲದ ಹಿರಿಯ ವಕೀಲರಾದ ಸಜನ್‌ ಪೂವಯ್ಯ, ಎ.ಎಸ್‌. ಪೊನ್ನಣ್ಣ ಮತ್ತು ಎಂ.ಟಿ ನಾಣಯ್ಯ ಅವರು ಕೇಂದ್ರದ ಅಧಿಸೂಚನೆ ಸಮರ್ಥಿಸಿಕೊಂಡು ಪ್ರಬಲವಾಗಿ ವಾದ ಮಂಡಿಸಿದ್ದರು. ಬಂದೂಕುಗಳನ್ನು ಇಟ್ಟುಕೊಳ್ಳುವುದು ಹಾಗೂ ಪೂಜಿಸುವುದು ಕೊಡವ ಸಂಪ್ರದಾಯದ ಭಾಗ. ಈ ಸೌಲಭ್ಯವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಕೊಡವರು ಹೊಂದಿದ್ದಾರೆ. ಅನುಭವಿಸುತ್ತಿದ್ದಾರೆ ಎಂದು ವಾದಿಸಿದ್ದರು.
 

click me!