
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಅ.09): ಹಚ್ಚ ಹಸಿರ ತೋಟದೊಳಗೆ ಇದ್ದ ಆ ಶಾಲೆಯಲ್ಲಿ ಇನ್ನೊಂದೇ ಒಂದು ಗಂಟೆ ಕಳೆದಿದ್ದರೆ ಎಲ್ಲಾ ವಿದ್ಯಾರ್ಥಿಗಳು ಮುಂಜಾನೆ ಎದ್ದು ಯೋಗ ಮಾಡುತ್ತಿದ್ದರು. ಆ ಮೂಲಕ ಅವರ ನಿತ್ಯದ ಕಲಿಕೆಗೆ ಚಾಲನೆ ಸಿಗುತ್ತಿತ್ತು. ಆದರೆ ಒಂದು ಗಂಟೆ ಮುಂಚೆಯೇ ನಡೆದ ಅಗ್ನಿ ಅವಘಡ ವಿದ್ಯಾರ್ಥಿಯೊಬ್ಬನನ್ನು ಮಲಗಿದ್ದಲ್ಲೇ ಚಿರನಿದ್ರೆಗೆ ಜಾರಿಸಿ ಇಡೀ ಶಾಲೆಯನ್ನು ಸ್ಮಶಾನದಂತೆ ಆಗಿಸಿದೆ. ಏನಿದು ದುರಂತ ಅಂತ ನೀವೆ ಓದಿ. ಧಗಧಗಿಸಿ ಹೊತ್ತಿ ಉರಿಯುತ್ತಿರುವ ಶಾಲೆ, ಛಾವಣಿ ಸಹಿತ ಕುಸಿದು ಬೀಳುತ್ತಿರುವ ಕಟ್ಟಡದ ಗೋಡೆಗಳು. ಎತ್ತ ನೋಡಿದರೂ ದಟ್ಟ ಹೊಗೆ, ಬೆಂಕಿ. ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಅಗ್ನಿ ಶಾಮಕ, ಪೊಲೀಸ್ ಮತ್ತು ಸ್ಥಳೀಯ ನಾಗರಿಕರು.
ಹೌದು ಇಂತಹ ಬೀಭತ್ಸ ದೃಶ್ಯ ಕಂಡು ಬಂದಿದ್ದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿರುವ ಹರ್ ಮಂದಿರ್ ಶಾಲೆಯಲ್ಲಿ. ಹೌದು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದ ವಸತಿ ಶಾಲೆ ಕಳೆದ 7 ವರ್ಷಗಳಿಂದ ಕಾರ್ಯ ನಿರ್ವಹಿಸುತಿತ್ತು. 80 ಎಕರೆ ವಿಶಾಲವಾದ ತೋಟದ ಒಳಗಿರುವ ಶಾಲೆಯಲ್ಲಿ ಎಲ್ಲವೂ ಚೆನ್ನಾಗಿತ್ತು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತಿತ್ತು. ದಸರಾ ರಜೆ ಇದ್ದಿದ್ದರಿಂದ ರಜೆ ಮುಗಿಸಿ 53 ವಿದ್ಯಾರ್ಥಿಗಳು ಮಾತ್ರವೇ ಶಾಲೆಗೆ ವಾಪಸ್ಸಾಗಿದ್ದರು. ಆದರೆ ದುರಾದೃಷ್ಟವಶಾತ್ ಮುಂಜಾನೆ ನಾಲ್ಕುವರೆ ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಿದ್ಯಾರ್ಥಿಗಳು ಮಲಗಿದ್ದ ಶಾಲಾ ಕೊಠಡಿಯಲ್ಲಿ ಬೆಂಕಿ ಹೊತ್ತಿಉರಿದಿದೆ.
ಮುಂಜಾನೆ ಗಾಢವಾದ ನಿದ್ರೆಯಲ್ಲಿ ಇದ್ದಿದ್ದರಿಂದ ಇದು ಯಾರ ಗಮನಕ್ಕೂ ಬಂದಿಲ್ಲ. ಯಾವಾಗ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡು ಧಗಧಗಿಸಿ ಹೊತ್ತಿ ಉರಿಯಲು ಆರಂಭವಾಯಿತೋ ಆಗ ಕೆಲ ವಿದ್ಯಾರ್ಥಿಗಳಿಗೆ ಎಚ್ಚರವಾಗಿದೆ. ವಿದ್ಯಾರ್ಥಿ ಬಬಿನ್, ಯಶ್ವಿನ್ ಹಾಗೂ ರಚನ್ ಮೂವರು ಕೊಠಡಿಯಿಂದ ಹೊರ ಬಂದು ಕೂಗಾಡಿ ವಿದ್ಯಾರ್ಥಿಗಳು ಹಾಗೂ ವಾರ್ಡನ್ ಅನ್ನು ಹೊರಗೆ ಕರೆತಂದಿದ್ದಾರೆ. ಅಷ್ಟೊತ್ತಿಗಾಗಲೇ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದ್ದರಿಂದ ಕಟ್ಟಡದ ಛಾವಣಿ ಇನ್ನೂ ಒಳಗೆ ಇದ್ದ ವಿದ್ಯಾರ್ಥಿ ಪುಷ್ಪಕ್ ಮೇಲೆ ಕುಸಿದು ಬಿದ್ದಿದೆ. ಹೀಗಾಗಿ ವಿದ್ಯಾರ್ಥಿ ಸ್ಥಳದಲ್ಲಿಯೇ ಸಜೀವ ದಹನವಾಗಿದ್ದಾನೆ.
ಶಾಲೆ ಎಂದರೆ ಅತ್ಯಂತ ಖುಷಿ ಪಡುತ್ತಿದ್ದ ಪುಷ್ಪಕ್, ತನ್ನ ಅಕ್ಕನೂ ಇದೇ ಶಾಲೆಯಲ್ಲಿ ಕಲಿಯುತ್ತಿದ್ದರಿಂದ ನಾನು ಇಲ್ಲಿಯೇ ಓದುತ್ತೇನೆ ಎಂದು ಹಠ ಹಿಡಿದು ಇದೇ ಶಾಲೆಗೆ ಸೇರಿದ್ದ. ಆದರೆ ಅದೇ ಶಾಲೆಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ ಎಂದು ತಾಯಿ ತ್ರಿವೇಣಿ ಕಣ್ಣೀರಿಟ್ಟಿದ್ದಾರೆ. ವಸತಿ ಶಾಲೆಯಾಗಿದ್ದರಿಂದ ವಿದ್ಯಾರ್ಥಿಗಳ ಜೊತೆಗೆ ಒಂದಷ್ಟು ಶಿಕ್ಷಕರು ಕೂಡ ಇಲ್ಲಿಯೇ ತಂಗುತ್ತಿದ್ದರು. ಆದರೆ ಮುಂಜಾನೆ ನಾಲ್ಕುವರೆ ಗಂಟೆ ಸಂದರ್ಭದಲ್ಲಿ ಆದ ಅಗ್ನಿ ಅವಘಡ ಯಾರಿಗೂ ಏನು ಮಾಡಬೇಕೆಂದು ದಿಕ್ಕು ತೋಚದಂತೆ ಆಗಿದೆ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಆದರೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವಷ್ಟರಲ್ಲಿ ಇಡೀ ಕಟ್ಟಡ ಹೊತ್ತಿ ಉರಿದಿದೆ. ನಿತ್ಯ ಶಾಲೆಯಲ್ಲಿ ಐದುವರೆ ಗಂಟೆಗೆ ಎಲ್ಲಾ ವಿದ್ಯಾರ್ಥಿ, ಶಿಕ್ಷಕರು ಎದ್ದೇಳುತ್ತಿದ್ದರು. ಎದ್ದು ಸಿದ್ಧರಾಗಿ ಯೋಗಭ್ಯಾಸ ಮಾಡುತ್ತಿದ್ದರು. ಆದರೆ ಅದಕ್ಕಿಂತ ಒಂದು ಗಂಟೆಯ ಮುಂಚಿತವಾಗಿ ನಡೆದ ಘೋರ ದುರಂತ ಇಡೀ ಶಾಲೆಯಲ್ಲಿ ಸ್ಮಶಾನದಂತೆ ಮಾಡಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ರಾಜಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ. ದಿನೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಮಗುವಿನ ಪೋಷಕರಿಗೆ ಸಾಂತ್ವನ ಹೇಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಆಗಿರುವುದಾಗಿ ಗೊತ್ತಾಗಿದೆ. ತನಿಖೆಯಿಂದ ನಿಜಾಂಶ ಏನು ಎನ್ನುವುದು ಗೊತ್ತಾಗಬೇಕಾಗಿದೆ. ಜೊತೆಗೆ ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ದೊರೆಯುತ್ತದೆಯೇ ಪರಿಶೀಲಿಸುತ್ತೇವೆ ಎಂದಿದ್ದಾರೆ. ಏಳು ವರ್ಷದ ಬಾಲಕ ಪುಷ್ಪಕ್ ಬಹುತೇಕ ಸುಟ್ಟು ಕರಕಲಾಗಿದ್ದರಿಂದ ಸ್ಥಳದಲ್ಲಿಯೇ ಶವ ಪರೀಕ್ಷೆ ಮಾಡಿ, ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಏನೇ ಆಗಲಿ, ಬಡ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ನೀಡುತ್ತಿದ್ದ ಶಾಲೆಯಲ್ಲಿ ಘೋರ ದುರಂತ ನಡೆದಿರುವುದು ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ