ಕೊಡಗಿನಲ್ಲಿ ಬುಲ್ಡೋಜರ್ ಭೀತಿ: ಅರಣ್ಯ ಕಾಯ್ದೆಯ ಹೆಸರಲ್ಲಿ ಬೀದಿಗೆ ಬೀಳಲಿದೆಯೇ 50 ಕುಟುಂಬ?

Published : Jan 10, 2026, 09:36 PM IST
Kodagu 50 Families Face Eviction Risk Over Forest Act Bulldozer Fear Grips

ಸಾರಾಂಶ

ಕೊಡಗಿನ ಸುಂದರನಗರದಲ್ಲಿ 50 ವರ್ಷಗಳಿಂದ ವಾಸಿಸುತ್ತಿರುವ 50ಕ್ಕೂ ಹೆಚ್ಚು ಕುಟುಂಬಗಳು 'ಸಿ ಅಂಡ್ ಡಿ' ಭೂಮಿ ನಿಯಮದಿಂದಾಗಿ ಮನೆ ಕಳೆದುಕೊಳ್ಳುವ ಆತಂಕದಲ್ಲಿವೆ. ಅರಣ್ಯ ಇಲಾಖೆಯು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದು, ನಿವಾಸಿಗಳು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು

ಕೊಡಗು(ಜ.10) : ಇವರೆಲ್ಲಾ ಕಳೆದ ಅರ್ಧ ಶತಮಾನಗಳಿಗೂ ಹಿಂದೆ ಈ ಜಾಗಗಳಿಗೆ ಬಂದು ಕೃಷಿ ಮಾಡಿಕೊಂಡು, ಅಲ್ಲಿಯೇ ಒಂದು ಮನೆ ನಿರ್ಮಿಸಿಕೊಂಡು ನಿರಮ್ಮಳವಾಗಿ ಬದುಕು ದೂಡುತ್ತಿದ್ದರು. ಆದರೀಗ ಸಿ ಅಂಡ್ ಡಿ ಎಂಬ ಭೂತ ಅರಣ್ಯ ಇಲಾಖೆ ಅಧಿಕಾರಿಗಳ ಮೂಲಕ ಬಂದು ಕಾಡಲಾರಂಭಿಸಿದ್ದು ಈ ರೀತಿ ಬೀದಿಗೆ ಬಂದು ನಿಲ್ಲುವಂತೆ ಆಗಿದೆ.

ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರದ ವೃಂದಾ ಬಡಾವಣೆಯಲ್ಲಿ ಇಡೀ ಬಡಾವಣೆಯ 50 ಕ್ಕೂ ಹೆಚ್ಚು ಕುಟುಂಬಗಳು ಈಗ ಮನೆ, ಮಠ ಕಳೆದುಕೊಳ್ಳುತ್ತೇವಾ ಎನ್ನುವ ಆತಂಕ ಶುರುವಾಗಿದೆ. ಅದಕ್ಕೆ ಕಾರಣ 2006 ರಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಹಾಗೂ ಅಂದಿನ ಶಾಸಕರು ಮಾಡಿರುವ ಎಡವಟ್ಟು.

ಹೌದು ಇವರೆಲ್ಲರೂ ಕಳೆದ 50 ವರ್ಷಗಳಿಂದಲೂ ಬದುಕುತ್ತಿದ್ದಾಗ ಈ ಜಾಗ ಸರ್ಕಾರಿ ಜಾಗವಾಗಿತ್ತು. ಅಂದಿನಿಂದ ಇದನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಜನರು ಹಲವು ಬಾರಿ ಪ್ರಯತ್ನಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. 2006 ರವರೆಗೆ 30/1 ಸರ್ವೆ ನಂಬರ್ 30.40 ಎಕರೆಯ ಭೂಮಿ ಸರ್ಕಾರದವರದ್ದು ಎಂದೇ ಇದೆ. ಆದರೆ 2006 ರಲ್ಲಿ ಇದ್ದಕ್ಕಿದ್ದ ಹಾಗೆ ಇದನ್ನು ಸಿ ಅಂಡ್ ಡಿ ಲ್ಯಾಂಡ್ ಎಂದು ಮಾಡಲಾಗಿದೆ. ಇದೀಗ ಅರಣ್ಯ ಸಚಿವರು ಸಿ ಅಂಡ್ ಡಿ ಭೂಮಿಯನ್ನು ಅರಣ್ಯಕ್ಕೆ ಕೊಡುವುದಾಗಿ ಆದೇಶ ಮಾಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಈ ಕುಟುಂಬಗಳಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಬಿದ್ದು ಹೋಗಬಾರದು ಎನ್ನುವ ದೃಷ್ಟಿಯಿಂದ ಹಳೆ ಮನೆಯನ್ನು ಮರು ನಿರ್ಮಾಣ ಮಾಡುವುದಕ್ಕೆ ಬಿಡುತ್ತಿಲ್ಲ. ಇನ್ನು ಹೊಸ ಮನೆಗಳ ನಿರ್ಮಿಸುವುದಕ್ಕೆ ಯಾರಿಗೂ ಅವಕಾಶವೇ ಇಲ್ಲ. ಇಷ್ಟಾದರೂ ಹೋಗಲಿ ಎಂದಕೊಂಡರೆ ಅರಣ್ಯ ಇಲಾಖೆ ಸಿಬ್ಬಂದಿ ಅಷ್ಟಕ್ಕೆ ಸುಮ್ಮನಾಗದೆ ಜನರು ತಮ್ಮ ಹೊಲ ಮನೆಗಳ ಸುತ್ತ ನಿರ್ಮಿಸಿರುವ ಬೇಲಿಗಳನ್ನು ಕಿತ್ತು ಬಿಸಾಡುತ್ತಿದ್ದಾರೆ. ಇದು ಜನರಿಗೆ ತೀವ್ರ ಆತಂಕ ತಂದೊಡ್ಡಿದೆ.

ಇಷ್ಟು ವರ್ಷಗಳ ಸುಮ್ಮನಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈಗ ಏಕೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ಇದೆಲ್ಲವೂ ಈಗಿನ ಅರಣ್ಯ ಸಚಿವರು ಮಾಡುತ್ತಿರುವ ಜನ ವಿರೋಧಿ ನೀತಿಗಳಿಂದಾಗಿ ಜನರಿಗೆ ಇಷ್ಟು ಸಮಸ್ಯೆಯಾಗುತ್ತಿದೆ. ಒಂದೆಡೆ ಕುಳಿತು ಆದೇಶ ಮಾಡುವುದು ಸರಿಯಲ್ಲ. ಎಲ್ಲಿ ಜನವಸತಿ ಇವೆ, ಎಲ್ಲಿ ಕೃಷಿ ಭೂಮಿ ಇವೆ ಎಂಬುದನ್ನೆಲ್ಲಾ ಪರಿಶೀಲನೆ ಮಾಡಬೇಕು. ಸಿ ಅಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟಿರುವುದು ಸರಿಯಲ್ಲ. ಆ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಇನ್ನು ಸ್ಥಳೀಯರು ನಾವು ಇಷ್ಟು ವರ್ಷಗಳ ಕಾಲ ಸಮಸ್ಯೆ ಬಗೆಹರಿಸುವಂತೆ ಎಷ್ಟೇ ಆಗ್ರಹಿಸಿದರೂ ಸಮಸ್ಯೆ ಬಗೆಹರಿಸಿಲ್ಲ. ನಾವು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಿದ್ದೇವೆ. ಅದಕ್ಕೂ ಅಧಿಕಾರಿಗಳು, ಶಾಸಕರು ಸಮಸ್ಯೆ ಬಗೆಹರಿಸದಿದ್ದರೆ ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಷ್ಟೇ ಉಳಿದಿದೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸರ್ಕಾರಗಳ ನಡುವಿನ ಗೊಂದಲದಿಂದಾಗಿ ಈ ಸಮಸ್ಯೆ ಎದುರಾಗಿದ್ದು ಆದಷ್ಟು ಶೀಘ್ರವೇ ಸಮಸ್ಯೆ ಬಗೆಹರಿಸಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮ ಫಲಾನುಭವಿಗಳ ಮನೆ ಹಂಚಿಕೆ ಯಾವಾಗ? ತಿಳ್ಕೊಳ್ಳಿ
ಕೊಪ್ಪಳ: ದಾಸೋಹದಲ್ಲಿ ಹೆಗಲಮೇಲೆ ಅಕ್ಕಿ ಮೂಟೆ ಹೊತ್ತ ಗವಿಸಿದ್ದೇಶ್ವರ ಶ್ರೀಗಳು!