
ಬೆಂಗಳೂರು (ಅ.16): ತಮಿಳು ನಟ ರಜನಿಕಾಂತ್ ಅವರ ಪತ್ನಿ ಲತಾ ವಿರುದ್ಧದ ಫೋರ್ಜರಿ ಪ್ರಕರಣದ ಆರೋಪಗಳನ್ನು ಕೈ ಬಿಡಲು ನಿರಾಕರಿಸಿ ನಗರದ 48ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ. ‘ಕೊಚ್ಚಾಡಿಯನ್’ ಸಿನಿಮಾ ನಷ್ಟಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಾಗಿರುವ ಫೋರ್ಜರಿ ಪ್ರಕರಣದ ಆರೋಪಗಳನ್ನು ಕೈ ಬಿಡಬೇಕು ಎಂದು ಕೋರಿ ಲತಾ ರಜನಿಕಾಂತ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ತಿರಸ್ಕರಿಸಿ ನ್ಯಾಯಾಧೀಶರಾದ ಜ್ಯೋತಿ ಶಾಂತಪ್ಪ ಕಾಳೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ದಾಖಲೆಗಳನ್ನು ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್) ನ್ಯಾಯಾಲಯಕ್ಕೆ ಒದಗಿಸಿಲ್ಲ. ಆದ್ದರಿಂದ ಆರೋಪಗಳನ್ನು ಕೈ ಬಿಡಬೇಕು ಎಂಬ ಲತಾ ರಜನಿಕಾಂತ್ ಮಂಡಿಸಿದ್ದ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿ, ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ, ಮಹಜರು ನಡೆಸಿದ್ದಾರೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅಗತ್ಯ ದಾಖಲೆ ಸಲ್ಲಿಸಿದ್ದಾರೆ. ಸಾಕ್ಷಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ದಾಖಲಿಸಿಕೊಂಡಿದೆ. ವಿವಾದಿತ ದಾಖಲೆಗಳು, ಮಹಜರು, ಆಸ್ತಿ ನಮೂನೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಹ ಇದೆ.
ಅವುಗಳನ್ನು ಪರಿಶೀಲನೆ ನಡೆಸಬೇಕಿದೆ. ಕೇವಲ ಅಸ್ಪಷ್ಟ ಹೇಳಿಕೆ ನೀಡಿರುವುದನ್ನು ಹೊರತುಪಡಿಸಿ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ದಾಖಲೆಗಳು ಮೇಲ್ನೋಟಕ್ಕೆ ಇಲ್ಲ ಎಂಬ ವಾದವನ್ನು ದೃಢಪಡಿಸುವಂತಹ ಯಾವುದೇ ಆಧಾರಗಳನ್ನು ಆರೋಪಿಯು ಕೋರ್ಟ್ ಮುಂದಿಟ್ಟಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಎಲ್ಲಿಯೂ ಕೂಡಾ ತಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ ಮತ್ತು ಇದು ಸಂಪೂರ್ಣವಾಗಿ ಸಿವಿಲ್ ಸ್ವರೂಪದ ಪ್ರಕರಣ ಎಂದು ಲತಾ ಅವರು ನೀಡಿರುವ ಕಾರಣಗಳು ಆರೋಪಗಳನ್ನು ಕೈ ಬಿಡಲು ಸಾಕಾಗುವುದಿಲ್ಲ. ಆರೋಪಿಗಳ ವಿರುದ್ಧ ಮುಂದುವರಿಯಲು ತನಿಖಾಧಿಕಾರಿಗಳು ಪ್ರಾಥಮಿಕ ದಾಖಲೆ ಮತ್ತು ಹೇಳಿಕೆಗಳನ್ನು ಮೇಲ್ನೋಟಕ್ಕೆ ತೋರಿಸಿದ್ದಾರೆ. ಆದ್ದರಿಂದ ಲತಾ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸೂಕ್ತ ಕಾರಣಗಳಿಲ್ಲ ಎಂದು ತಿಳಿಸಿರುವ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.
ರಜನಿಕಾಂತ್ ಪುತ್ರಿ ನಿರ್ದೇಶಿಸಿದ ತಮಿಳು ಚಿತ್ರ ‘ಕೊಚ್ಚಾಡಿಯನ್’ ಚಿತ್ರದ ಸಂಬಂಧ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸಸ್ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದರೂ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ವಿವಾದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಸಾಕಷ್ಟು ಪ್ರಸಾರವಾಗಿತ್ತು. ಈ ಕುರಿತ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಅವರು ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯ ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ನೀಡಿತ್ತು. ಆದರೆ, ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಆದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್ ಅಧೀನದಲ್ಲಿರದ ಸಂಸ್ಥೆಯೊಂದರ ಸಂಬಂಧ ಲತಾ ಅವರು ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಕಂಪನಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಖಾಸಗಿ ದೂರು ದಾಖಲಿಸಿತ್ತು. ಈ ದೂರು ಆಧರಿಸಿ ಪೊಲೀಸರು ಲತಾ ಅವರ ವಿರುದ್ಧ ತನಿಖೆ ಪೂರ್ಣಗೊಳಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ದೋಷಾರೋಪ ಪಟ್ಟಿಯಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಕೈ ಬಿಡಬೇಕು ಎಂದು ಕೋರಿ ಲತಾ ಅವರು ಎಸಿಜೆಎಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ