ಹಾಲು ರೈತಗೆ ಕೆಎಂಎಫ್‌ 530 ಕೋಟಿ ರೂ. ಪ್ರೋತ್ಸಾಹ ಧನ!

By Suvarna News  |  First Published Jul 16, 2020, 9:00 AM IST

ಹಾಲು ರೈತಗೆ ಕೆಎಂಎಫ್‌ 530 ಕೋಟಿ ಪ್ರೋತ್ಸಾಹ ಧನ| ನೆರ​ವು- ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ| ಶೀಘ್ರ ರೈತರ ಖಾತೆಗಳಿಗೆ ಹಣ ಜಮೆ


ಬೆಂಗಳೂರು(ಜು.16): ಹಾಲು ಉತ್ಪಾದಕರಿಗೆ ಕಳೆದ ಫೆಬ್ರವರಿಯಿಂದ ಜುಲೈ 4ರವರೆಗೆ ಪಾವತಿಸಬೇಕಿದ್ದ 530 ಕೋಟಿ ರು. ಪೋ›ತ್ಸಾಹ ಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಶೀಘ್ರವೇ ರೈತರ ಖಾತೆಗಳಿಗೆ ಜಮಾ ಆಗಲಿದೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಕಚೇರಿಯಲ್ಲಿ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ಅವರು ಮಾತನಾಡಿದರು.

Tap to resize

Latest Videos

ರಾಜ್ಯದ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳಿಂದ ಪ್ರತಿದಿನ ಸುಮಾರು 88 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಇದು ಕಳೆದ ವರ್ಷಕ್ಕಿಂತ ಆರು ಲಕ್ಷ ಲೀಟರ್‌ ಶೇಖರಣೆ ಹೆಚ್ಚಾದಂತಾಗಿದೆ. ಕಳೆದ ಮಾಚ್‌ರ್‍ಗೆ ಹೋಲಿಸಿದರೆ ಪ್ರತಿದಿನ ಸುಮಾರು 20 ಲಕ್ಷ ಲೀಟರ್‌ ಹಾಲು ಹೆಚ್ಚಾಗಿದೆ ಎಂದು ಹೇಳಿದರು.

ಆರ್ಥಿಕ ಸಂಕಷ್ಟದಲ್ಲಿ ಕೆಎಂಎಫ್‌:

ಕೋವಿಡ್‌ ಹಿನ್ನೆಲೆಯಲ್ಲಿ ಹಾಲು ಮತ್ತು ಮೊಸರಿಗೆ ಬೇಡಿಕೆ ಕುಸಿದಿದ್ದು ಪ್ರತಿ ದಿನ 10ರಿಂದ 12 ಲಕ್ಷ ಲೀಟರ್‌ ಹಾಲು ಮಾರಾಟ ಕಡಿಮೆಯಾಗಿದೆ. ಶಾಲೆ ಮುಚ್ಚಿರುವುದರಿಂದ ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿತರಿಸುತ್ತಿದ್ದ ಎರಡು ಸಾವಿರ ಮೆಟ್ರಿಕ್‌ ಟನ್‌ ಹಾಲಿನ ಪುಡಿ ಕೂಡ ಇದುವರೆಗೂ ವಿಲೇವಾರಿಯಾಗಿಲ್ಲ. ಹಾಲಿನ ಶೇಖರಣೆ ಹೆಚ್ಚಳ ಮತ್ತು ತೀವ್ರ ಮಾರಾಟ ಕುಸಿತದಿಂದ ಪ್ರತಿದಿನ 35 ಲಕ್ಷ ಲೀಟರ್‌ನಷ್ಟುಹೆಚ್ಚುವರಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ನಿತ್ಯ 305 ಮೆಟ್ರಿಕ್‌ ಟನ್‌ ಹಾಲಿನ ಪುಡಿ ಮತ್ತು 150 ರಿಂದ 160 ಮೆಟ್ರಿಕ್‌ ಟನ್‌ ಬೆಣ್ಣೆ ಉತ್ಪಾದನೆಯಾಗಿ ದಾಸ್ತಾನು ಹೆಚ್ಚುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆರ್ಥಿಕವಾಗಿ ಸಂಕಷ್ಟಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವರ್ಷಾಂತ್ಯಕ್ಕೆ ಕೆನೆರಹಿತ ಹಾಲಿನ ಪುಡಿ 55 ಸಾವಿರ ಮೆಟ್ರಿಕ್‌ ಟನ್‌ ಆಗಬಹುದು ಎಂದು ಅಂದಾಜಿಸಲಾಗಿದ್ದು, ಈಗಾಗಲೇ ದೇಶಾದ್ಯಂತ 1.50 ಲಕ್ಷ ಮೆಟ್ರಿಕ್‌ ಟನ್‌ ಕೆನೆರಹಿತ ಹಾಲಿನ ಪುಡಿ ದಾಸ್ತಾನು ಇದೆ ಎಂದು ವರದಿಯಾಗಿದೆ ಎಂದು ತಿಳಿಸಿದರು.

ಕೇರಳದಲ್ಲಿ ನಡೆಯಲಿರುವ ವಿಷು ಹಬ್ಬದ ಪ್ರಯುಕ್ತ ಹೆಚ್ಚಿನ ಹಾಲಿನ ಬೇಡಿಕೆ ಬಂದಿದ್ದು ಈಗಾಗಲೇ 15 ಲಕ್ಷ ಲೀಟರ್‌ ಹಾಲನ್ನು ರವಾನಿಸಲಾಗಿದೆ. ಆಂಧ್ರಪ್ರದೇಶದ ಕೋರಿಕೆಯಂತೆ ಅಲ್ಲಿನ ಅಂಗನವಾಡಿ ಮಕ್ಕಳಿಗೆ ಯುಎಚ್‌ಟಿ ಹಾಲನ್ನು ಪ್ರತಿ ತಿಂಗಳಿಗೆ 56 ಲಕ್ಷ ಲೀಟರ್‌ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ತೆಲಂಗಾಣ ರಾಜ್ಯಕ್ಕೂ ಸಹ 20 ಲಕ್ಷ ಲೀಟರ್‌ ಯುಎಚ್‌ಟಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಕೆನೆರಹಿತ ಹಾಲಿನ ಪುಡಿ ಮತ್ತು ಬೆಣ್ಣೆ ದರಗಳು ದಿನೇ ದಿನೇ ಇಳಿಕೆಯಾಗುತ್ತಿದ್ದು, ಪ್ರಸ್ತುತ ಹಾಲಿನ ಪುಡಿ ದರವು ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 130 ಮತ್ತು ಬೆಣ್ಣೆಗೆ 207 ರು.ಗೆ ಕುಸಿದಿದೆ ಎಂದು ತಿಳಿಸಿದರು.

ವೆಚ್ಚ ಕಡಿತಕ್ಕೆ ಸಮಿತಿ ರಚನೆ:

ವೆಚ್ಚ ಕಡಿತಕ್ಕೆ ಕೆಎಂಎಫ್‌ನಿಂದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ರೈತರು ಮತ್ತು ಒಕ್ಕೂಟಗಳಿಗೆ ನಷ್ಟವಾಗದಂತೆ ಕಾರ್ಯಕ್ರಮಗಳನ್ನು ರೂಪಿಸಲು ಬಾಲಚಂದ್ರ ಜಾರಕಿಹೊಳಿ ಸೂಚಿಸಿದರು. ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಪಶು ಸಂಗೋಪನಾ ನಿರ್ದೇಶಕ ಡಾ.ಡಿ.ವಿ.ಹೆಗಡೆ, ಮಾರುಕಟ್ಟೆನಿರ್ದೇಶಕ ಮೃತ್ಯುಂಜಯ ಕುಲಕರ್ಣಿ, ಅಪರ ನಿರ್ದೇಶಕ ರಘುನಂದನ್‌ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

click me!