ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸುವ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ಪಿಎಂ ಮೋದಿ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಬೆಂಗಳೂರು (ಅ.26): ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸುವ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ಪಿಎಂ ಮೋದಿ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ನವೆಂಬರ್ 11ರಂದು ಬೆಂಗಳೂರು ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮವಿದೆ.
ಈ ಕಾರ್ಯಕ್ರಮದ ಕುರಿತು ಚರ್ಚಿಸಲು ಮೋದಿ ಗುರುವಾರ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಸಭೆಯಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮದ ವಿವರಗಳನ್ನು ನರೇಂದ್ರ ಮೋದಿಗೆ ಬಸವರಾಜ ಬೊಮ್ಮಾಯಿ ವಿವರಿಸಲಿದ್ದಾರೆ. ಇದರ ಜೊತೆಗೆ ನವೆಂಬರ್ 11ರಂದು ಬೆಂಗಳೂರಿನಲ್ಲಿ ಬೇರೆ ಯಾವ ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.
ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಕಾರ‍್ಯಕ್ರಮ ಸಿದ್ಧತೆ ಪರಿಶೀಲಿಸಿದ ಸಚಿವರು
ಮುಖ್ಯಮಂತ್ರಿಗಳ ಸಭೆ: ಗುರುವಾರ ಪ್ರಧಾನಿಗಳ ಜೊತೆ ಸಭೆ ಇರುವ ಹಿನ್ನಲೆಯಲ್ಲಿ ಬುಧವಾರ ಸಂಜೆ 7ಕ್ಕೆ ಮುಖ್ಯಮಂತ್ರಿಗಳು ಪೂರ್ವಭಾವಿ ಸಭೆ ಕರೆದಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಅಭಿಯಾನ ಯಶಸ್ಸಿಗೆ ಸಿಎಂ ಸೂಚನೆ: ಇದಕ್ಕೂ ಮೊದಲು ವಿಧಾನಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಲೋಕಾರ್ಪಣೆ ಅಂಗವಾಗಿ ರಾಜ್ಯಾದ್ಯಂತ ನಡೆಯಲಿರುವ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನದ ಯಶಸ್ಸಿಗೆ ಎಲ್ಲರೂ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರದ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಪೂರ್ವಭಾವಿ ಸಭೆ ಈಗಾಗಲೇ ಜರುಗಿದೆ.
ಶಾಸಕ ಎಲ್. ನಾಗೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರು ಆಗಮಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿಮೆ ನಿರ್ಮಿಸಿದ್ದು ಹೆಗ್ಗಳಿಕೆಯ ಸಂಗತಿ. ಈ ಕಾರ್ಯ ಮುನ್ನಡೆಯಲು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಶಕ್ತಿ ಕಾರಣ ಎಂದರು. ಒಕ್ಕಲಿಗರು ಹಿಂದಿನಿಂದಲು ಇತಿಹಾಸವನ್ನ ಸೃಷ್ಟಿಸಿಕೊಂಡು ಬಂದಿದ್ದೇವೆ. ಹಾಗೆಯೇ ನ. 10 ರಂದು 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳ್ಳಲಿದೆ. ಮತ್ತೆ ನಾವೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮತ್ತೆ ಇತಿಹಾಸ ನಿರ್ಮಿಸೋಣ ಎಂದರು.
ಕೆಂಪೇಗೌಡ ಥೀಮ್ ಪಾರ್ಕ್ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ
ಮಾಜಿ ಶಾಸಕ ವಾಸು ಮಾತನಾಡಿ, ಈ ಕಾರ್ಯಕ್ರಮದ ಗೆಲುವು ನಮ್ಮೆಲ್ಲರ ಗೆಲುವು ಆಗಬೇಕು. ಇದೊಂದು ಪಕ್ಷಾತೀತ ಕಾರ್ಯಕ್ರಮ. ಇದರಲ್ಲಿ ನಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗೋಣ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಅ. 22 ರಿಂದ 10 ದಿನಗಳ ಕಾಲ ಜಿಲ್ಲೆಯಲ್ಲಿ ರಥಯಾತ್ರೆ ಇದ್ದು, ಕೆಂಪೇಗೌಡರ ಕಾರ್ಯಕ್ಷಮತ ಸಾರುವ ಹಾಗೂ ಪ್ರತಿ ಜಿಲ್ಲೆಗಳಿಂದ ಥೀಮ್ ಪಾರ್ಕ್ಗೆ ಮಣ್ಣು ಮತ್ತು ನೀರನ್ನು ಸಂಗ್ರಹಿಸುವ ಯೋಜನೆ ಇದಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕಿದೆ ಎಂದರು.