ಅತ್ತ ಕಾರವಾರದಲ್ಲಿ ಆಸ್ಪತ್ರೆಗಾಗಿ ರಕ್ತ ಪತ್ರ ಚಳವಳಿ ನಡೆದರೆ, ಇತ್ತ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಆಸ್ಪತ್ರೆ ನಿರ್ಮಾಣದ ಸುಳಿವು ಕೊಟ್ಟಿದ್ದಾರೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರವಾರ
ಕಾರವಾರ, (ಆಗಸ್ಟ್. 01): ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನರು ಬೀದಿಗಿಳಿದು ಹೋರಾಟ ನಡೆಸಲು ಪ್ರಾರಂಭಿಸಿದ್ದಾರೆ. ಈ ನಡುವೆ ಒಂದೆಡೆ ವಿಶೇಷವಾಗಿ ಸಾರ್ವಜನಿಕ ರಕ್ತ ಚಳವಳಿಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ರೆ, ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಸಿದ್ಧತೆಯ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...
undefined
ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಹಲವು ದಿನಗಳಿಂದ ಪ್ರತಿಭಟನೆ, ಹೋರಾಟ ಮುಂದುವರಿದಿದೆ. ಇಂದೂ(ಸೋಮವಾರ) ಕೂಡಾ ಕಾರವಾರದ ಮಹಾತ್ಮಗಾಂಧಿ ರಸ್ತೆಯಲ್ಲಿ ಸಮಾನ ಮನಸ್ಕರಿಂದ ರಕ್ತ ಚಳುವಳಿ ನಡೆದಿದ್ದು,ಕಾರವಾರಿಗರು ರಕ್ತದಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ತಮ್ಮ ರಕ್ತದಿಂದಲೇ ಕಾರ್ಡ್‌ನಲ್ಲಿ "ವೀ ನೀಡ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್", "ನಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು" ಎಂದು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪತ್ರ ಬರೆದು ಕಳುಹಿಸಿದ್ದಾರೆ.
ಉತ್ತರ ಕನ್ನಡಕ್ಕೊಂದು ಆಸ್ಪತ್ರೆಗಾಗಿ ಬೆಂಗ್ಳೂರಲ್ಲಿ ಪ್ರತಿಭಟನೆ, ಮನ್ ಕೀ ಬಾತ್‌ಗೆ ಕರೆ ಮಾಡಲು ನಿರ್ಣಯ
ಈ ಚಳವಳಿಯಲ್ಲಿ ಅಂಗವಿಕಲರು, ಕಾಲೇಜು ವಿದ್ಯಾರ್ಥಿಗಳು, ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದು, ಆಸ್ಪತ್ರೆ ಒದಗಿಸಲು ಪ್ರಧಾನಿಯವರ ಬಳಿ ಪತ್ರದ ಮೂಲಕ ವಿನಂತಿಸಿದ್ದಾರೆ. ಒಟ್ಟು 412 ರಕ್ತದಿಂದ ಬರೆದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಸ್ಟ್ ಮೂಲಕ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಸಾವಿರಾರು ಜನರು ಆಸ್ಪತ್ರೆಯಿಲ್ಲದೇ ಸತ್ತಿದ್ದಾರೆ. ಸರಕಾರಕ್ಕೆ ಇನ್ನೆಷ್ಟು ಜನಸಾಮಾನ್ಯರು ಸಾಯಬೇಕು..?. ಸ್ವಾತಂತ್ಯೋತ್ಸವದ ಮುನ್ನ ಪ್ರಧಾನಿ ಮೋದಿಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗದಿದ್ರೆ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ನಡೆಸುವುದಲ್ಲದೇ, ಚುನಾವಣೆ ಬಹಿಷ್ಕರಿಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.
ಆಸ್ಪತ್ರೆಯ ಸುಳಿವು ನೀಡಿದ ಸಚಿವ ಶ್ರೀನಿವಾಸ್ ಪೂಜಾರಿ
ಇನ್ನು ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ನಿರ್ಮಾಣದ ಬಗ್ಗೆ ಸುಳಿವು ನೀಡಿದ್ದಾರೆ. ಕುಮಟಾದ ಆಸುಪಾಸಿನಲ್ಲಿ 25 ಎಕರೆ ಪ್ರದೇಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕಾಯ್ದಿರಿಸಲಾಗುವುದು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು. ಇದರೊಂದಿಗೆ ಚಾಮರಾಜನಗರ ಹಾಗೂ ಕಾರವಾರ ವಿಧಾನ ಸಭಾ ಕ್ಷೇತ್ರದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ ಎಂದರು.
ಈ ಕಾರಣದಿಂದ ಅಂಕೋಲಾದ ಹಟ್ಟಿಗೇರಿಯಲ್ಲಿ ಸುಮಾರು 16.50 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಸುಮಾರು 10 ದಿನಗಳ ಒಳಗಾಗಿ ಉತ್ತರಕನ್ನಡ ಜಿಲ್ಲೆಗೆ ಆರೋಗ್ಯ ಸಚಿವರು ಭೇಟಿ ನೀಡಲಿದ್ದಾರೆ. ಇದೇ ತಿಂಗಳ 16-17ನೇ ತಾರೀಕಿನಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಕ್ಕೆ ಸಿಎಂ ಭೇಟಿ ನೀಡುವ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ ಸಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಅಂತಿಮ ನಿರ್ಣಯ ಸಿಎಂ ಕೈಗೊಳ್ಳಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಒಟ್ಟಿನಲ್ಲಿ ಉಡುಪಿಯ ಶಿರೂರಿನ ಟೋಲ್‌ಗೇಟ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ನಾಲ್ವರು ಕೊನೆಯುಸಿರೆಳೆದ ಬಳಿಕ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೂಗು ಹೆಚ್ಚಾಗಿ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಾ ಜನರ ಬೇಡಿಕೆಯನ್ನು ಈಡೇರಿಸುವಲ್ಲಿ ಗ್ರೀನ್ ಸಿಗ್ನಲ್ ನೀಡಿದ್ದು, ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾರ್ಯ ಯಾವಾಗ ಪ್ರಾರಂಭವಾಗುತ್ತೆ ಅನ್ನೋದು ಕಾದು ನೋಡಬೇಕಷ್ಟೇ.