2 ಲಕ್ಷ ಮರಗಳ ಮಾರಣಹೋಮಕ್ಕೆ ಬ್ರೇಕ್| ವಾಜಪೇಯಿ ಅಡಿಗಲ್ಲು ಹಾಕಿದ್ದ ಯೋಜನೆ| ಉತ್ತರ ಕರ್ನಾಟಕ-ಮಧ್ಯ ಕರ್ನಾಟಕದ ಮಧ್ಯೆ 164 ಕಿ.ಮೀ. ರೈಲುಮಾರ್ಗ
ಬೆಂಗಳೂರು[ಮಾ.10]: ಎರಡು ದಶಕಗಳ ಹಿಂದೆ (1997-98) ಕೇಂದ್ರ ಸರ್ಕಾರ ರಾಜ್ಯದ ಉತ್ತರ ಮತ್ತು ಮಧ್ಯ ಭಾಗವನ್ನು ಕರಾವಳಿಗೆ ಸಂಪರ್ಕಿಸುವಂತಹ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ನೀಡಿತ್ತು. 164 ಕಿ.ಮೀ. ಉದ್ದದ ಈ ರೈಲು ಮಾರ್ಗದ ಯೋಜನೆಗೆ 2000ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದರು.
ಹುಬ್ಬಳ್ಳಿಯಿಂದ ಯಲ್ಲಾಪುರದವರೆಗಿನ ಸುಮಾರು 75 ಕಿ.ಮೀ. ಸಮತಟ್ಟು ಪ್ರದೇಶವಾಗಿದ್ದು, ಯಲ್ಲಾಪುರದಿಂದ ಸುಂಕಸಾಲದವರೆಗಿನ ಮಾರ್ಗ ಘಟ್ಟಪ್ರದೇಶವಿದೆ. ಪಶ್ಚಿಮ ಘಟ್ಟವನ್ನು ರೈಲುಮಾರ್ಗ ಹಾದು ಹೋಗಬೇಕಾಗುತ್ತದೆ. ಉಳಿದಂತೆ ಸುಂಕಸಾಲದಿಂದ ಅಂಕೋಲವರೆಗಿನ ಮಾರ್ಗದ ಅಲ್ಲಲ್ಲಿ ಬೆಟ್ಟಗಳು ಎದುರಾಗುತ್ತವೆ. ಒಟ್ಟಾರೆ ಯೋಜನೆಯ ಶೇ.80 ಭಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಯಾಗುವುದರಿಂದ ಕಾಡು ಕಡಿಯುವುದು ಅನಿವಾರ್ಯವಾಗಿತ್ತು. ಈ ಯೋಜನೆಗೆ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ಅರಣ್ಯ ಪ್ರದೇಶದಲ್ಲಿ 595.64 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆ ಮಾಡಬೇಕಾಗಿತ್ತು.
ಆದರೆ ಬೇರೆ ಬೇರೆ ಯೋಜನೆಗಳಿಂದ ಕಾಡು ಕಳೆದುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಇನ್ನಷ್ಟುಕಾಡು ರೈಲ್ವೆ ಯೋಜನೆಯಿಂದ ನಾಶವಾಗುತ್ತದೆ ಎಂದು ಶಿರಸಿಯ ಪರಿಸರ ಸಂರಕ್ಷಣಾ ಕೇಂದ್ರ ಮತ್ತು ಬೆಂಗಳೂರಿನ ‘ಉತ್ತರ ಕನ್ನಡ ವೈಲ್ಡರ್‌ನೆಸ್ ಕ್ಲಬ್’ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ನಂತರ ಹಸಿರು ನ್ಯಾಯಮಂಡಳಿ ಒಂದು ಬಾರಿ ಯೋಜನೆಗೆ ತಡೆ ನೀಡಿತ್ತು.
ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ನಿರ್ಮಾಣವಾದರೆ ಕರ್ನಾಟಕದ ಉತ್ತರ ಹಾಗೂ ಮಧ್ಯ ಭಾಗದ ಪ್ರದೇಶಗಳಿಂದ ಕರಾವಳಿಗೆ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೆ, ಬಳ್ಳಾರಿ ಹೊಸಪೇಟೆಯಿಂದ ರಾಜ್ಯದ ಪಶ್ಚಿಮ ಕರಾವಳಿಯ ಬಂದರುಗಳಿಗೆ ಕಬ್ಬಿಣದ ಅದಿರು ಸಾಗಣೆಗೆ ನೆರವಾಗಲಿದೆ. ಈ ಯೋಜನೆಯಿಂದಾಗಿ ಒಟ್ಟು ಎರಡು ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶಗಳಿಗೆ ಸಂಪರ್ಕ ಸಾಧಿಸಬಹುದಿತ್ತು. ಜೊತೆಗೆ, ಈ ಭಾಗಗಳಲ್ಲಿ ವಾಣಿಜ್ಯೋದ್ಯಮ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಹಾಗಾಗಿ ಯೋಜನೆ ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿತ್ತು.