
ಬೆಂಗಳೂರು (ಆ.04) ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಾರಿಗೆ ನೌಕರರು ನಾಳೆ (ಆಗಸ್ಟ್ 5) ಬೆಳಗ್ಗೆಯಿಂದ ಮುಷ್ಕರ ನಡೆಸಲು ಆರಂಭಿಸಿದ್ದಾರೆ. ಆದರೆ ಇಂದು ರಾತ್ರಿ ಎಂದಿನಂತೆ ಸಾರಿಗೆ ಬಸ್ ಲಭ್ಯವಿರಲಿದೆ. ಇಂದು ರಾತ್ರಿ ಮೆಜೆಸ್ಟಿಕ್‌ನಿಂದ ಎಲ್ಲಾ ಬಸ್‌ಗಳು ಕಾರ್ಯನಿರ್ವಹಿಸಲಿದೆ ಎಂದು ರಾಜ್ಯ ಸಾರಿಗೆ ನೌಕರರು ಹೇಳಿದ್ದಾರೆ. ಆದರೆ ನಾಳೆ ಬೆಳಗ್ಗೆ 6 ಗಂಟೆಯಿಂದ ಎಲ್ಲಾ ಬಸ್ ಸೇವೆ ಸ್ಥಗಿತಗೊಳ್ಳಲಿದೆ ಎಂದಿದ್ದಾರೆ.
ಸಾರಿಗೆ ನೌಕರರ ಮುಖಂಡ ಮಂಜುನಾಥ್ ಹೈಕೋರ್ಟ್ ನೀಡಿದ ತಡೆಯಾಜ್ಞೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ನೌಕರರು ಹಲವು ದಿನಗಳ ಗಡುವು ನೀಡಿ ಇದೀಗ ಕೊನೆಯ ಅಸ್ತ್ರವಾಗಿ ಮುಷ್ಕರ ಘೋಷಿಸಲಾಗಿದೆ. ಇದೀಗ ವಾಪಸ್ ಪಡೆಯಲು ಸಾಧ್ಯವಿಲ್ಲ. ಜಂಟಿ ಕ್ರಿಯಾ ಸಮಿತಿಗೆ ಮುಂಚಿತವಾಗಿ ಕೋರ್ಟ್ ನೋಟೀಸ್ ಕೊಡಬೇಕಿತ್ತು. ನಮ್ಮ ಅಭಿಪ್ರಾಯವನ್ನು ಕೋರ್ಟ್ ಆಲಿಸಬೇಕಿತ್ತು. ಆದರೆ ಇಲ್ಲಿ ಕೋರ್ಟ್ ನಮ್ಮ ಅಭಿಪ್ರಾಯವೇ ಕೇಳಿಲ್ಲ. ದಿಢೀರ್ ತಡೆಯಾಜ್ಞೆ ನೀಡಿದರೆ ಮುಷ್ಕರ ವಾಪಸ್ ಪಡೆಯುಲ ಸಾಧ್ಯವಿಲ್ಲ ಎಂದು ಮಂಜನಾಥ್ ಹೇಳಿದ್ದಾರೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ಆರಂಭಗೊಳ್ಳಲಿದೆ. ನೌಕರರು ಭಯ ಬೀಳುವ ಅಗತ್ಯ ಇಲ್ಲ. ಕೋರ್ಟ್ ಗೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.
ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ನಾಳೆ ಮುಷ್ಕರದಲ್ಲಿ ಭಾಗಿಯಾಗದಂತೆ ಬಿಎಂಟಿಸಿ ಎಂಡಿ ರಾಮಚಂದ್ರನ್ ಮನವಿ ಮಾಡಿದ್ದಾರೆ. ಮಾನ್ಯ ಉಚ್ಛ ನ್ಯಾಯಾಲಯವು ನಾಳಿನ ( ದಿನಾಂಕ: 05-08-2025ರ) ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ತಡೆಯಾಜ್ಞೆ ನೀಡಿರುವುದರಿಂದ, ಮಾನ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಹಾಗೂ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ, ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ನೌಕರರು ನಾಳಿನ ಮುಷ್ಕರದಲ್ಲಿ ಪಾಲ್ಗೊಳ್ಳಬಾರದೆಂದು ರಾಮಚಂದ್ರನ್ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನೌಕರರಿಗೆ ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ. ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಹೈಕೋರ್ಟ್ ತಡೆ ನೀಡಿದೆ. ಕೆಎಸ್ಆರ್‌ಟಿಸಿ ಸಾರ್ವಜನಿಕರ ಅಗತ್ಯ ಸೇವಾ ಸಂಸ್ಥೆಯಾಗಿದೆ. ಹೀಗಾಗಿ ನೌಕರರು ನಾಳಿನ ಮುಷ್ಕರದಲ್ಲಿ ಪಾಲ್ಗೊಳ್ಳದೆ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಿದ್ದಾರೆ.
ಕೆಎಸ್ ಆರ್ ಟಿಸಿಯ 16 ವಿಭಾಗಗಳ ವ್ಯಾಪ್ತಿಯಲ್ಲಿ ಬಸ್ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಇಂದು ರಾತ್ರಿ 9 ಗಂಟೆಯವರೆಗಿನ ಮಾಹಿತಿಯನುಸಾರ ಹಾಸನ ವಿಭಾಗದಲ್ಲಿ ಸ್ವಲ್ಪ ಬಸ್ ಕಾರ್ಯಚರಣೆಯಲ್ಲಿ ವ್ಯತ್ಯಯವಾಗಿರುವುದನ್ನು ಹೊರತುಪಡಿಸಿದರೆ, ಮತ್ತೆಲ್ಲಾ ವಿಭಾಗಗಳಲ್ಲಿ ಸಂಪೂರ್ಣಬಸ್ ಕಾರ್ಯಾಚರಣೆಯಾಗಿದ್ದು, ಒಟ್ಟಾರೆ ನಿಗಮದಲ್ಲಿ 97.4% ಬಸ್ ಕಾರ್ಯಾಚರಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ