
ಬೆಂಗಳೂರು (ಜು.16): ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5ರ ಬೆಳಗ್ಗೆ 6 ಗಂಟೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲು ಸಜ್ಜಾಗಿದ್ದಾರೆ. KSRTC, BMTC, NWKRTC ಹಾಗೂ KKRTC ನೌಕರರು ಸೇರಿ ಈ ಬಾರಿಯ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ವೇತನ ಶೇ.25ರಷ್ಟು ಹೆಚ್ಚಳ ಹಾಗೂ 38 ತಿಂಗಳ ಬಾಕಿಯ ವೇತನ ಬಿಲ್‌ಗಳ ಬಿಡುಗಡೆ ಅವರಿಗೆ ಪ್ರಮುಖ ಬೇಡಿಕೆಯಾಗಿವೆ.
ಮುಷ್ಕರಕ್ಕೆ ಕಾರಣವಾದ ಅಂಶಗಳು:
ಈ ಹಿಂದೆ, ನೌಕರರ ಬೇಡಿಕೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 4ರಂದು ಸಭೆ ಕರೆದು, 'ಆರು ದಿನದೊಳಗೆ ಮತ್ತೊಂದು ಸಭೆ ಕರೆಯುತ್ತೇನೆ' ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಸಭೆ ಕರೆಯದೇ ಇರುವುದರಿಂದ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಷ್ಕರಕ್ಕೆ ನಿರ್ಧಾರ ಮಾಡಿದ್ದಾರೆ. 'ನಾವು 25% ವೇತನ ಹೆಚ್ಚಳ ಕೇಳಿದ್ದೆವು. ಆದರೆ, ಬೊಮ್ಮಾಯಿ ಸರ್ಕಾರ ಶೇ.15ರಷ್ಟು ಹೆಚ್ಚಳ ಮಾಡಿತು. ಅದೂ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಿಲ್ಲ. ಈಗ 38 ತಿಂಗಳ ಅರಿಯರ್ಸ್ (ಹಿಂಬಾಕಿ) ಇನ್ನೂ ಕೊಡಲಾಗಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ. ಅಲ್ಲದೆ, ಶ್ರೀನಿವಾಸ ಮೂರ್ತಿ ಸಮಿತಿಯ ಶಿಫಾರಸ್ಸುಗಳನ್ನು ಸ್ವೀಕರಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಬೇಕೆಂಬ ಬೇಡಿಕೆಯೂ ನೌಕರರಿಂದ ಬಂದಿದೆ. ಈ ಸಮಿತಿಯ ಶಿಫಾರಸ್ಸುಗಳಂತೆ ತ್ವರಿತವಾಗಿ ಶೇ.25ರಷ್ಟು ವೇತನ ಹೆಚ್ಚಳ ಮಾಡಿ, ಬಾಕಿ ಹಣ ಬಿಡುಗಡೆ ಮಾಡಬೇಕೆಂಬ ಒತ್ತಾಯ ಉಂಟಾಗಿದೆ.
ಹಳೆಯ ಭರವಸೆಗಳು ಮತ್ತು ಹೊಸ ನಿರೀಕ್ಷೆಗಳು
ಈ ಹಿಂದೆ ಡಿಸೆಂಬರ್ 31ರಿಂದಲೇ ಮುಷ್ಕರ ಮಾಡುವ ನಿರ್ಧಾರ ತೆಗೆದುಕೊಂಡಿದ್ದ ನೌಕರರು, ಮುಖ್ಯಮಂತ್ರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂದೇಟು ಹಾಕಿದ್ದರು. ಆದರೆ, ಈಗ ಯಾಕೆಂದು ಎತ್ತಿರುವ ಪ್ರಶ್ನೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ನೌಕಕರ ಸಭೆ ಕರೆಯಲಿಲ್ಲ, ಸಾರಿಗೆ ನೌಕರರಿಗೆ ಕಳೆದ ವರ್ಷ ನೀಡಿದ್ದ ಯಾವುದೇ ಬೇಡಿಕೆ ಈಡೇರಿಕೆಯ ಭರವಸೆಗಳನ್ನು ಈಡೇರಿಸಲಿಲ್ಲ. ಈಗ ಮತ್ತೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ಕೊಟ್ಟು ಜನರ ಮೆಚ್ಚುಗೆ ಗೆಲ್ಲಲು ಯತ್ನಿಸುತ್ತಿದ್ದಾರೆ. ಆದರೆ ನೌಕರರ ವೇತನ ಯಾಕೆ ಮರೆತುಹೋಗುತ್ತಿದೆ?' ಎಂದು ಪ್ರಶ್ನೆ ಮಾಡಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ಉಚಿತ ಸೌಲಭ್ಯ, ಆದರೆ..?
ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್‌ಗಾಗಿ ಸರ್ಕಾರ 500 ಕೋಟಿ ವೆಚ್ಚವನ್ನ ಹೊರಡಿಸಿದೆ. ಆದರೆ, ಡ್ರೈವರ್, ಕಂಡಕ್ಟರ್‌ಗಳ ಬವಣೆ ಯಾರಿಗೂ ಕಾಣಿಸುತ್ತಿಲ್ಲ. ಇದು ನಮಗೆ ಸಂಭ್ರಮವಲ್ಲ, ನೋವಿನ ವಿಷಯವಾಗಿದೆ ಎಂದು ಸಾರಿಗೆ ನೌಕರರು ಅಳಲು ತೋಡಿಕೊಂಡಿದ್ದಾರೆ. 'ಈ ಬಾರಿ ಯಾವುದೇ ಮಾತಿನ ಭರವಸೆ, ಸಭೆಯ ಒತ್ತಡ… ನಾವು ಒಪ್ಪೋದಿಲ್ಲ. ನಮಗೆ ಬೇಕಾಗಿರುವುದು ವೇತನ ಶೇ.25ರಷ್ಟು ಹೆಚ್ಚಳ ಹಾಗೂ ಎಲ್ಲಾ ಅರಿಯರ್ಸ್. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆಗಸ್ಟ್ 5ರ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಖಚಿತ' ಎಂದು ನೌಕರರ ಸಂಘ ಘೋಷಿಸಿದೆ.
ಘಟನೆಯ ಹೈಲೈಟ್‌ಗಳು:
ಮುಷ್ಕರ ದಿನಾಂಕ: ಆಗಸ್ಟ್ 5, ಬೆಳಗ್ಗೆ 6 ಗಂಟೆಯಿಂದ
ಬೇಡಿಕೆಗಳು: ಶೇ.25ರಷ್ಟು ವೇತನ ಹೆಚ್ಚಳ, 38 ತಿಂಗಳ ಬಾಕಿ ಅರಿಯರ್ಸ್ ಬಿಡುಗಡೆ
ಭರವಸೆ ವಿಫಲ: ಜುಲೈ 4ರಂದು ಸಿಎಂ ಸಭೆ ಕರೆದು ಬಾಕಿ ವಿಚಾರನೆ ಮಾಡಲು ಭರವಸೆ
ಸರ್ಕಾರದ ಕ್ರಮ: ಯಾವುದೇ ಹೊಸ ಸಭೆ ಇಲ್ಲ, ಆದೇಶಗಳ ನಿರೀಕ್ಷೆ ವಿಫಲ
ಸಂಘಟನೆಗಳ ನಿರ್ಧಾರ: ಯಾವುದೇ ಮಾತು, ಭರವಸೆ ಒಪ್ಪದಿರಿ – ಆದೇಶ ಮಾತ್ರ ಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ