ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ವಾಹನ ಪ್ರವೇಶ ನಿರ್ಬಂಧ: ಟ್ರಾಫಿಕ್‌ ತಡೆಯಲು ಪೊಲೀಸರ ಕ್ರಮ

By Sathish Kumar KH  |  First Published Jul 16, 2023, 6:01 PM IST

ಕರ್ನಾಟಕದ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.


ಚಿಕ್ಕಮಗಳೂರು (ಜು.16): ಕರ್ನಾಟಕದ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಚಿಕ್ಕಮಗಳೂರು ಜಿಲ್ಲೆ ಈ ವರ್ಷ ಪ್ರವಾಸಿಗರ ದಂಡೇ ಹೆಚ್ಚಾಗಿದೆ. ಇನ್ನು ಕರ್ನಾಟಕದ ಅತ್ಯಂತ ಎತ್ತರದ ಗಿರಿ ಪ್ರದೇಶವಾದ ಮುಳ್ಳಯ್ಯನಗಿರಿ ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿಗೆ ಹೋಗುವ ಪ್ರವಾಸಿಗರ ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಕೇವಲ ಸ್ಥಳೀಯ ಟ್ರಿಪ್‌ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ರಾಜ್ಯದಲ್ಲಿ ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ನೋಡುವುದಕ್ಕೆ ಅತ್ಯಂತ ಸೂಕ್ತವಾದ ಸ್ಥಳವೆಂದರೆ ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಹಾಗೂ ಜಲಪಾತಗಳು ಎಂದು ಯಾರು ಬೇಕಾದರೂ ಹೇಳುತ್ತಾರೆ. ಹೀಗಾಗಿ, ಮಳೆಗಾಲದ ಹಿನ್ನೆಲೆಯಲ್ಲಿ ರಜಾ ದಿನಗಳು ಹಾಗೂ ವೀಕೆಂಡ್‌ ವೇಳೆ ಶಿಖರಗಳಲ್ಲಿ ಸೃಷ್ಟಿಯಾಗುವ ಸೊಬಗನ್ನ ಕಣ್ತುಂಬಿಕೊಳ್ಳುವುದಕ್ಕೆ ಸಾವಿರಾರು ಪ್ರವಾಸಿಗರು ದಂಡು, ದಂಡಾಗಿ ಆಗಮಿಸುತ್ತಿದ್ದಾರೆ. ಇನ್ನು ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಎತ್ತರದ ಶಿಖರದ ಮೇಲೆ ನಿಂತು ಮಳೆಗಾಲದಲ್ಲಿ ಸೃಷ್ಟಿಯಾಗಿರುವ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. 

Latest Videos

undefined

ಬೆಂಗಳೂರಿನ ಟ್ರಾಫಿಕ್‌ ಜಾಮ್‌ ಮೀರಿಸಿದ ಮುಳ್ಯಯನಗಿರಿ ಪ್ರವಾಸಿಗರು

ಸ್ಥಳೀಯ ಟ್ರಿಪ್‌ ವಾಹನಗಳಿಗೆ ಮಾತ್ರ ಅವಕಾಶ: ಆದರೆ, ಹೆಚ್ಚಾಗಿ ಹರಿದು ಬರುತ್ತಿರುವ ಪ್ರವಾಸಿಗರಿಂದ ಈಗ ಮುಳ್ಳಯ್ಯನಗಿರಿಯಲ್ಲಿಯೂ ಭಾರಿ ಟ್ರಾಫಿಕ್‌ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಖಾಸಗಿ ವಾಹನಗಳನ್ನು ಮುಳ್ಳಯ್ಯನಗಿರಿ ಪ್ರದೇಶಕ್ಕೆ ಹೋಗಲು ನಿರ್ಬಂಧಿಸಲಾಗಿದೆ. ಜೊತೆಗೆ, ಸ್ಥಳೀಯ ಟ್ರಿಪ್‌ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಎಲ್ಲ ಪ್ರವಾಸಿಗರು ಸ್ಥಳೀಯ ಟ್ರಿಪ್‌ ವಾಹನಗಳಲ್ಲಿ ಮಾತ್ರ ಹೋಗಬೇಕು. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಇಲ್ಲದಿದ್ದರೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ವಾಹನಗಳಿಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ಎಲ್ಲೆಂದರಲ್ಲಿ ವಾಹನ ನಿಲ್ಲಿಸಲು ಕಡಿವಾಣ: ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಸುತ್ತಮುತ್ತಲಿನ ಗಿರಿ ಶಿಖರಕ್ಕೆ ವೀಕೆಂಡ್‌ ವೇಳೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಪ್ರಕೃತಿ ಮಡಿಲಿನಲ್ಲಿ ಸಿಗುವ ಖುಷಿಯನ್ನ ಅನುಭವಿಸುವುದಕ್ಕೆ ಟ್ರಾಫಿಕ್‌ ಸಮಸ್ಯೆಯಿಂದ ಹಿನ್ನಡೆ ಉಂಟಾಗುತ್ತಿದೆ. ಇನ್ನು ಕೆಲವರು ಮುಳ್ಳಯ್ಯನಗಿರಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಹೋಗುವ ರಸ್ತೆಯಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಕುಣಿದು ಕುಪ್ಪಳಿಸುತ್ತಿದ್ದರು. ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿಕೊಂಡು ಇತರೆ ಪ್ರವಾಸಿಗರ ವಾಹನಗಳಿಗೆ ರಸ್ತೆ ಇಲ್ಲದಂತೆ ಮಾಡುತ್ತಿದ್ದರು. ಈಗ ಪ್ರವಾಸಿಗರ ವಾಹನಗಳ ನಿರ್ಬಂಧದಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದಕ್ಕೆ ಕಡಿವಾಣ ಬೀಳಲಿದೆ.

ಪ್ರವಾಸಿಗರ ಸ್ವರ್ಗ ಚಾರ್ಮಾಡಿ ಘಾಟಿಯಲ್ಲಿ ಪುಂಡರ ಹಾವಳಿ: ಪೊಲೀಸರೇ ಏನ್ಮಾಡ್ತೀದ್ದೀರಿ

ಸೀತಾಳಯ್ಯನ ಗಿರಿ ಬಳಿ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್: ಇನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಮುಳ್ಳಯ್ಯನಗಿರಿ ತೆರಳುವ ಮಾರ್ಗ ಮಧ್ಯೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸೀತಾಳಯ್ಯನ ಗಿರಿ ಬಳಿ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ಮಾಡಿಸಿ, ಸ್ಥಳೀಯ ಟ್ರಿಪ್‌ ವಾಹನಗಳ ಮೂಲಕ ಮುಳ್ಳಯ್ಯನಗಿರಿಗೆ ತೆರಳುವಂತೆ ಸೂಚನೆ ನೀಡಿದರು. ಇದರಿಂದ ಟ್ರಿಪ್‌ ವಾಹನಗಳ ಚಾಲಕರು ಒಬ್ಬ ಪ್ರವಾಸಿಗರಿಗೆ ತಲಾ 100 ರೂ. ಪ್ರಯಾಣದ ಚಾರ್ಜ್ ಪಡೆದಿದ್ದಾರೆ.

ಇನ್ನು ಕಳೆದ 15 ದಿನಗಳ ಹಿಂದೆಯೂ ಜು.02ರಂದು ಮುಳ್ಳಯ್ಯಗಿರಿಯಲ್ಲಿ ಮಂಜುಕವಿದ ವಾತಾವರಣ ಮತ್ತು ಮೋಡಗಳನ್ನು ನೋಡಲು ಸಾವಿರಾರು ಪ್ರವಾಸಿಗರು ಬೇಟಿ ನೀಡಿದ ಹಿನ್ನೆಲೆ ಮುಳ್ಳಯ್ಯನಗಿರಿ ಕಿರಿದಾದ ಮಾರ್ಗದಲ್ಲಿ ಸುಮಾರು 2 ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಈ ವೀಕೆಂಡ್‌ನಲ್ಲಿ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಇದಕ್ಕೆ ಪ್ರವಾಸಿಗರಿಂದ ಪರ ಮತ್ತು ವಿರೋಧಗಳು ವ್ಯಕ್ತವಾಗಿವೆ.

click me!