'10 ದಿನದಲ್ಲಿ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್'

By Web DeskFirst Published Oct 18, 2019, 3:59 PM IST
Highlights

'10 ದಿನದಲ್ಲಿ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್'| ಶೇ.99.5ರಷ್ಟುಹಣ ಪಾವತಿ| ರೈತರ ಮೌಖಿಕ ಒಪ್ಪಂದಕ್ಕೆ ಸರ್ಕಾರ ಹೊಣೆಯಲ್ಲ: ಸಚಿವ

 ಬೆಂಗಳೂರು[ಅ.18]: ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯ ಮತ್ತು ಗೌರವಯುತ ಬೆಲೆಗಿಂತ (ಎಫ್‌ಆರ್‌ಪಿ) ಹೆಚ್ಚು ಪ್ರಮಾಣದ ದರ ಕುರಿತು ರೈತರು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮೌಖಿಕವಾಗಿ ಒಪ್ಪಂದ ಮಾಡಿಕೊಂಡಿದ್ದಲ್ಲಿ ಅದರ ಹೊಣೆಯನ್ನು ರಾಜ್ಯ ಸರ್ಕಾರ ಹೊರುವುದಿಲ್ಲ ಎಂದು ಸಕ್ಕರೆ ಸಚಿವ ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾಗಿದ್ದ ಶೇ.99.5ರಷ್ಟು(11948 ಕೋಟಿ ರು.) ಹಣವನ್ನು ಈಗಾಗಲೇ ಕೊಡಿಸಲಾಗಿದೆ. ಇನ್ನುಳಿದ ಶೇ.0.5ರಷ್ಟು(84 ಕೋಟಿ ರು.)ಹಣ ಮಾತ್ರ ಬಾಕಿಯಿದೆ. ಈ ಹಣವನ್ನು ಮುಂದಿನ ಹತ್ತು ದಿನಗಳಲ್ಲಿ ಕೊಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಗುರುವಾರ ಸಕ್ಕರೆ ನಿರ್ದೇಶನಾಲಯದ ಸಭೆ ನಡೆಸಿದ ಬಳಿಕ ಗೃಹ ಮತ್ತು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್‌ಆರ್‌ಪಿ ದರದ ಪ್ರಕಾರ ಕಬ್ಬು ಬೆಳೆಗಾರರಿಗೆ ಹಣ ಕೊಡಿಸಲು ಸರ್ಕಾರ ಸಿದ್ಧವಿದೆ. ಆದರೆ, ಹೆಚ್ಚು ದರ ಸಂಬಂಧ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮೌಖಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದಲ್ಲಿ ಅಂತಹ ಹಣ ಕೊಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗದಂತೆ ಮಾಡಲು ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳೊಂದಿಗೆ ಕಾನೂನಾತ್ಮಕ ಒಪ್ಪಂದ (ಲೀಗಲ್‌ ಅಗ್ರಿಮೆಂಟ್‌) ಮಾಡಿಕೊಳ್ಳಬೇಕು ಎಂದು ರೈತ ಮುಖಂಡರಿಗೆ ಸಲಹೆ ನೀಡಲು ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಅವರು ತಿಳಿಸಿದರು. ರಾಜ್ಯದಲ್ಲಿ 85 ಸಕ್ಕರೆ ಕಾರ್ಖಾನೆಗಳಿದ್ದು ಅವುಗಳಲ್ಲಿ 67 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಸುಮಾರು 410 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸಲಾಗಿದೆ ರವಿ ಹೇಳಿದರು.

10 ದಿನಗಳಲ್ಲಿ ಬಾಕಿ ಹಣ:

ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾಗಿದ್ದ ಶೇ.99.5ರಷ್ಟು(11948 ಕೋಟಿ ರು.) ಹಣವನ್ನು ಈಗಾಗಲೇ ಕೊಡಿಸಲಾಗಿದೆ. ಇನ್ನುಳಿದ ಶೇ.0.5ರಷ್ಟು(84 ಕೋಟಿ ರು.)ಹಣ ಮಾತ್ರ ಬಾಕಿಯಿದೆ. ಈ ಹಣವನ್ನು ಮುಂದಿನ ಹತ್ತು ದಿನಗಳಲ್ಲಿ ಕೊಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳಿಂದ ಪಾವತಿ ಬಾಕಿ ಉಳಿಸಿಕೊಂಡಿರುವ ಪ್ರಮಾಣ ತೀರಾ ಕಡಮೆ. ಉತ್ತರ ಪ್ರದೇಶದಲ್ಲಿ ಶೇ.15, ಮಹಾರಾಷ್ಟ್ರದಲ್ಲಿ ಶೇ.5, ಆಂಧ್ರಪ್ರದೇಶದಲ್ಲಿ ಶೇ.25 ಮತ್ತು ತಮಿಳು ನಾಡಿನಲ್ಲಿ ಶೇ.30 ರಷ್ಟುಹಣ ಬಾಕಿ ಉಳಿಸಿಕೊಂಡಿರುವುದಾಗಿ ಅವರು ವಿವರಿಸಿದರು.

ನಿಧಿ ಸ್ಥಾಪಿಸಲು ತೀರ್ಮಾನ:

ಸಕ್ಕರೆ ಬೆಲೆ ಕುಸಿತ ಕಂಡಲ್ಲಿ ರೈತರಿಗೆ ಎಫ್‌ಆರ್‌ಪಿ ದರ ಹಣ ಒದಗಿಸಲು ‘ಸಕ್ಕರೆ ಬೆಲೆ ಸ್ಥಿರ ನಿಧಿ’ ಸ್ಥಾಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಅಲ್ಲದೆ, ಕೈಗಾರಿಕೆಗಳಲ್ಲಿ ಕಬ್ಬನ್ನು ತೂಕ ಹಾಕುವ ಸಂಬಂಧ ಗಮನ ಹರಿಸಲು ಒಂದು ತಂಡ ರಚಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರದ ಪ್ರಕಾರ ಶೇ.10 ರಷ್ಟುಇಳುವರಿ ಹೊಂದಿರುವ ಪ್ರತಿ ಟನ್‌ ಕಬ್ಬಿಗೆ 2,750 ರು.ನಿಗದಿ ಮಾಡಲಾಗಿದೆ. ಇಳುವರಿ ಪ್ರಮಾಣ ಹೆಚ್ಚಾದಂತೆ ಶೇ.1 ರಷ್ಟುಇಳುವರಿಗೆ ಪ್ರತಿ ಟನ್‌ಗೆ 275 ರು.ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಸಚಿವ ರವಿ ತಿಳಿಸಿದರು.

click me!