
ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರದ ನೋಟಿಸ್ ನೀಡಿದ್ದು, ಸರ್ಕಾರದ ಎಸ್ಮಾ ಎಚ್ಚರಿಕೆಯನ್ನು ಲೆಕ್ಕಿಸದ ನೌಕರರು ಮುಷ್ಕರದ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದ 1,15,000ಕ್ಕೂ ಹೆಚ್ಚು ನೌಕರರು ವೇತನ ಪರಿಷ್ಕರಣೆ, ಬಾಕಿ ಇರುವ ಅರಿಯರ್ಸ್ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. 38 ತಿಂಗಳ ಅರಿಯರ್ಸ್, ಹೊಸ ವೇತನ ಪರಿಷ್ಕರಣೆ (ಶೇಕಡಾ 25%) ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಸರಕಾರ ವಿಳಂಬ ಮಾಡುತ್ತಿರುವುದರಿಂದ ಮುಷ್ಕರ ತಪ್ಪಿಸಿಕೊಳ್ಳಲಾಗದೆ ಬಂದ ಸ್ಥಿತಿಯಾಗಿದೆ.
ಸರ್ಕಾರ ಸಾರಿಗೆ ನೌಕರರಿಗೆ ಎಸ್ಮಾ (Essential Services Maintenance Act) ಜಾರಿ ಮಾಡಿ, ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದರೂ ನೌಕರರು ತಮ್ಮ ನಿರ್ಧಾರದಿಂದ ಹಿಮ್ಮೆಟ್ಟಿಲ್ಲ. ಎಸ್ಮಾ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, "ಸಾರ್ವಜನಿಕ ಸೇವೆಯ ಹೆಸರಿನಲ್ಲಿ ನಮ್ಮ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ" ಎಂಬ ಆರೋಪಗಳು ಕೇಳಿಬರುತ್ತಿವೆ. ಎಸ್ಮಾ ಜಾರಿ ಮಾಡ್ತಿವಿ ಅನ್ನೋದು, ಮುಷ್ಕರ ಮಾಡಿದ್ರೆ ಸಂಬಳ ನೀಡುವುದಿಲ್ಲ ಎನ್ನುವುದು ಸರಿಯಲ್ಲ ಏನಾದರೂ ಹಿಂದಿನ ಆದೇಶದಲ್ಲಿ ತಪ್ಪಾಗಿದ್ರೆ ಅದನ್ನು ಬದಲಾವಣೆ ಮಾಡಿ. ನಮ್ಮ ಬೇಡಿಕೆಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಬೇಡಿ ಸಿದ್ದರಾಮಯ್ಯ ಅವರೇ ಎಂದು ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಮುಷ್ಕರದ ಒಂದು ದಿನ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೌಕರರ ಜಂಟಿ ಕ್ರಿಯಾ ಸಮಿತಿಯ ನೇತೃತ್ವದ 6 ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆ ವಿಧಾನಸೌಧದಲ್ಲಿ ಆಗಸ್ಟ್ 4 ಮಧ್ಯಾಹ್ನ 11:45ಕ್ಕೆ ನಡೆಯಲಿದೆ. ಸಭೆಯಲ್ಲಿ ವೇತನ ಹೆಚ್ಚಳ, ಬಾಕಿ ಹಣ ಪಾವತಿ ಕುರಿತು ನಿರ್ಣಯವಾಗುವ ನಿರೀಕ್ಷೆ ಇದೆ. ಜಂಟಿ ಕ್ರಿಯಾ ಸಮಿತಿಯ ವಕ್ತಾರರು, "ನಮ್ಮ ಬೇಡಿಕೆ ಈಡೇರಿಕೆಯಾಗದಿದ್ದರೆ ಮುಷ್ಕರವನ್ನು ಹಿಂತೆಗೆದುಕೊಳ್ಳುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅವರ ಪ್ರಕಾರ, “2016 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವೇತನ ಪರಿಷ್ಕರಣೆ ವಿಳಂಬವಾದ ಹಿನ್ನೆಲೆಯಲ್ಲಿ ಶೇಕಡಾ 12.5% ಹೆಚ್ಚಳ ಮಾಡಲಾಗಿತ್ತು. ಈಗ 38 ತಿಂಗಳ ಅರಿಯರ್ಸ್ ಪಾವತಿ ಬಾಕಿ ಇದೆ. ಈ ಬಾರಿ ಶೇಕಡಾ 25% ವೇತನ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬೇಡಿಕೆ. ನಾಳಿನ ಸಿಎಂ ಸಭೆಯಲ್ಲಿ ನಮ್ಮ ಈ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲಾಂದ್ರೆ ಮುಷ್ಕರ ವಾಪಸ್ಸು ಪಡೆಯಲ್ಲ ಎಂದಿದ್ದಾರೆ.
ನೌಕರರು ಆಗಸ್ಟ್ 5ರಂದು ಯಾವುದೇ ರ್ಯಾಲಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಊಟ ಮಾಡಿಕೊಂಡು ಮನೆಯಲ್ಲಿ ಕುಳಿತುಕೊಳ್ಳುತ್ತಿವಿ. ಈಗಾಗಲೇ ಸಾರಿಗೆ ನೌಕರರ ಕೂಟ ಸೇರಿದಂತೆ ಸಾಕಷ್ಟು ಸಾರಿಗೆ ನೌಕರರ ಸಂಘಟನೆಗಳು ನಮಗೆ ಬೆಂಬಲ ಸೂಚಿಸಿ ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದಾರೆ. ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ನಮ್ಮ ಜೊತೆಗೆ ಗೌರವಯುತವಾಗಿ ನಡೆದುಕೊಂಡರು. ನಾಲ್ಕು ನಿಗಮದ ನೌಕರರು ಮುಷ್ಕರ ಮಾಡಲು ಸಿದ್ದರಾಗಿದ್ದಾರೆ ಎಂದು ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಘಟನೆ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳದೇ ಇದ್ದರೆ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳ್ಳುವ ಸಂಭವವಿದೆ. ಜನಸಾಮಾನ್ಯರ ಅಡಚಣೆ ತಪ್ಪಿಸಲು ಸರ್ಕಾರ ಶೀಘ್ರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ