
ಬೆಂಗಳೂರು (ಅ.06): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈಗ ಮತ್ತೆ ಅನ್ನದ ಬಟ್ಟಲಿಗೆ ಕೈಹಾಕಿದಂತಾಗಿದೆ. ರಾಜ್ಯದಲ್ಲಿ ಅಕ್ಕಿ ಬೆಲೆ ಮತ್ತೊಮ್ಮೆ ಗಣನೀಯವಾಗಿ ಏರಿಕೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರ ಬಜೆಟ್ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕು ತಿಂಗಳಲ್ಲಿ ಸತತ ನಾಲ್ಕನೇ ಬಾರಿಗೆ ಅಕ್ಕಿ ದರ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ.
ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ನೀರಿನ ಕೊರತೆಯಿಂದಾಗಿ ಭತ್ತದ ಕೃಷಿ ಪ್ರದೇಶ ಕ್ಷೀಣಿಸಿದ್ದು, ಇಳುವರಿಯಲ್ಲೂ ಭಾರಿ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಮಾರುಕಟ್ಟೆ ಹಾಗೂ ಎಪಿಎಂಸಿ (APMC) ಯಾರ್ಡ್‌ಗಳಿಗೆ ಬರುತ್ತಿರುವ ಅಕ್ಕಿ ಲೋಡ್‌ಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಅಕ್ಕಿ ದರ ಪ್ರತಿ ಕೆಜಿಗೆ ಸರಾಸರಿ 5 ರಿಂದ 10 ರೂಪಾಯಿವರೆಗೆ ಹೆಚ್ಚಳವಾಗಿದೆ.
ಮಾರುಕಟ್ಟೆಯಲ್ಲಿ ಸಾಮಾನ್ಯ ಜನರು ಹೆಚ್ಚಾಗಿ ಬಳಸುವ ಸೋನಾ ಮಸೂರಿಯಿಂದ ಹಿಡಿದು ಪ್ರೀಮಿಯಂ ತಳಿಗಳವರೆಗೆ ಎಲ್ಲಾ ಅಕ್ಕಿಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ:
ಸೋನಾ ಮಸೂರಿ: ಈ ಹಿಂದೆ 70-75 ರೂ. ಆಸುಪಾಸಿನಲ್ಲಿದ್ದ ದರ ಇದೀಗ ಕೆಜಿಗೆ 83 ರಿಂದ 88 ರೂ. ಗಡಿ ಮುಟ್ಟಿದೆ.
ಬಾಸುಮತಿ ಅಕ್ಕಿ: ಪ್ರತಿ ಕೆಜಿಗೆ 105 ರೂ. ನಿಂದ 120 ರೂ.ಗೆ ಏರಿಕೆಯಾಗಿದೆ.
ಜೀರಾ ರೈಸ್: ಪ್ರತಿ ಕೆಜಿಗೆ 115 ರೂ. ನಿಂದ 125 ರೂ.ಗೆ ಹೆಚ್ಚಳವಾಗಿದೆ.
ರಾಜಮುಡಿ ಅಕ್ಕಿ: ಪ್ರತಿ ಕೆಜಿಗೆ 125 ರೂ. ಇದ್ದದ್ದು ಈಗ ಬರೋಬ್ಬರಿ 150 ರೂ.ಗೆ ಜಿಗಿದಿದೆ.
ಅಕ್ಕಿ ದರ ಏರಿಕೆಯ ಬೆನ್ನಲ್ಲೇ ದಿನನಿತ್ಯದ ಅಡುಗೆಗೆ ಅತ್ಯಗತ್ಯವಾಗಿರುವ ತೊಗರಿ ಬೇಳೆ ದರವೂ ಜನಸಾಮಾನ್ಯರಿಗೆ ಬರೆ ಎಳೆದಿದೆ. ಈ ಹಿಂದೆ ಕೆಜಿಗೆ 110 ರೂಪಾಯಿ ಆಸುಪಾಸಿನಲ್ಲಿದ್ದ ತೊಗರಿ ಬೇಳೆ ದರ, ಈಗ ಸಾರಾಸಗಟಾಗಿ 150 ರೂಪಾಯಿಗೆ ತಲುಪಿದೆ.
ದಿನನಿತ್ಯದ ಊಟಕ್ಕೆ ಬಳಸುವ ಅಕ್ಕಿ ಮತ್ತು ಬೇಳೆ ಎರಡೂ ಏಕಕಾಲದಲ್ಲಿ ದುಬಾರಿಯಾಗಿರುವುದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದು, ಹೋಟೆಲ್ ಉದ್ಯಮ ಹಾಗೂ ಗ್ರಾಹಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ