Suvarna News   | Asianet News
Published : Jul 07, 2022, 09:24 AM ISTUpdated : Jul 07, 2022, 09:16 PM IST

Karnataka Rain Updates: ದಕ್ಷಿಣ ಕನ್ನಡದಲ್ಲಿ ನಾಳೆಯೂ ರೆಡ್ ಅಲರ್ಟ್: ಶಾಲಾ-ಕಾಲೇಜುಗಳಿಗೆ 2 ದಿನ ರಜೆ

ಸಾರಾಂಶ

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕೊಡುಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆ ಮುಂದುವರಿದಿದೆ. ಬುಧವಾರ ಕೊಂಚ ಇಳಿಕೆಯಾಗಿದ್ದರೂ, ಗುರುವಾರ ಮತ್ತೆ ಅಬ್ಬರಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡನಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹಠಾತ್ತನೆ ಹಿಡಿದ ಮಳೆಯಿಂದಾಗಿ ಭತ್ತದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಮನೆಯಲ್ಲಿದ್ದ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿಯೂ ಮಳೆ ಮುಂದುವರೆದಿರುವುದರಿಂದ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ರಕ್ಷಣಾ ಕಾರ್ಯದ ಜೊತೆಗೆ ಪರಿಹಾರ ಕಾರ್ಯಗಳು ನಡೆಯುತ್ತಿದೆ. ಇನ್ನು ನದೀ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕೆಲಸವೂ ನಡೆಯುತ್ತಿದೆ. ಗುರುವಾರದ ಮಳೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Karnataka Rain Updates: ದಕ್ಷಿಣ ಕನ್ನಡದಲ್ಲಿ ನಾಳೆಯೂ ರೆಡ್ ಅಲರ್ಟ್: ಶಾಲಾ-ಕಾಲೇಜುಗಳಿಗೆ 2 ದಿನ ರಜೆ

08:21 PM (IST) Jul 07

ದಕ್ಷಿಣ ಕನ್ನಡ: ನಾಳೆಯೂ ರೆಡ್ ಅಲರ್ಟ್: ಶಾಲಾ-ಕಾಲೇಜುಗಳಿಗೆ 2 ದಿನ ರಜೆ

ದಕ್ಷಿಣ ಕನ್ನಡ: ಜಿಲ್ಲೆಯಾದ್ಯಂತ ನಾಳೆಯೂ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ, ದ.ಕ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ ಮತ್ತು ನಾಡಿದ್ದು ರಜೆ ಘೋಷಿಸಲಾಗಿದೆ.  ಜುಲೈ 08 ಮತ್ತು ಜುಲೈ 09 ರಂದು ರಜೆ ಘೋಷಿಸಿ ದ‌ಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. 

ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ‌ಹಾಗೂ ಪದವಿ ತರಗತಿಗಳಿಗೆ ರಜೆ ಘೋಷಿಸಲಾಗಿದೆ.  ಶಾಲಾ ರಜಾ ದಿನಗಳನ್ನು ಮುಂದಿನ ಬಾರಿ ಶನಿವಾರ ಅರ್ಧ ದಿನಗಳಲ್ಲಿ ಸರಿದೂಗಿಸಲು ಸೂಚನೆ ನೀಡಲಾಗಿದೆ.  ಮಳೆ ನಿಂತ ಬಳಿಕ ಶನಿವಾರ ಪೂರ್ಣ ದಿನ ತರಗತಿ ನಡೆಸಲು ಸೂಚಿಸಲಾಗಿದೆ. 
 

08:12 PM (IST) Jul 07

ಶಿವಮೊಗ್ಗ: ಗಾಳಿ ಮಳೆಗೆ ಹಾರಿಬಿದ್ದ ಮನೆಯ ಛಾವಣಿ

ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರದಲ್ಲಿ ಗಾಳಿ ಮಳೆಗೆ ಮನೆಯ ಛಾವಣಿ ಹಾರಿಬಿದ್ದಿದೆ.  ಆನಂದಪುರ ರಂಗನಾಧ ಬೀದಿಯಲ್ಲಿದ್ದ ಮನೆಯ ಛಾವಣಿ ಹಾರಿಬಿದ್ದಿದೆ. ಗಾಳಿ ಮಳೆಗೆ ಗಂಗಾಮತ ಅಂಬಿಗರ ಯುವವೇದಿಕೆಯ ಸಂಘದ  ಮನೆಯ ಶೀಟ್ ಆಳವಡಿಸಿದ ಭಾಗ ಹಾರಿಬಿದ್ದಿದೆ. 


 

07:49 PM (IST) Jul 07

ದಾವಣಗೆರೆ: ತುಂಗಭದ್ರಾ ನದಿಗೆ ಅಪಾರ ನೀರು ಹರಿವು: ಪ್ರವಾಹದ ಭೀತಿಯಲ್ಲಿ ಗ್ರಾಮಗಳು

ದಾವಣಗೆರೆ: ತುಂಗಭದ್ರಾ ನದಿಗೆ ಅಪಾರ ನೀರು ಹರಿದು ಬರುತ್ತಿದ್ದು,  ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹತ್ತಾರು ಗ್ರಾಮಗಳಿಗೆ  ಪ್ರವಾಹದ ಭೀತಿ ಉಂಟಾಗಿದೆ.  ನದಿ ಪಾತ್ರದ ಪ್ರದೇಶದ ಜನರ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿಜಯನಗರ ಅಪರ ಜಿಲ್ಲಾಧಿಕಾರಿ  ಸೂಚನೆ ನೀಡಿದ್ದಾರೆ. 

ಹರಪನಹಳ್ಳಿ ತಾಲೂಕಿನ ಗುರ್ಭಗುಡಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಭೀತಿ ಉಂಟಾಗಿದೆ. 
ತುಂಗಾ ಮತ್ತು ಭದ್ರಾ ಡ್ಯಾಂ ನಿಂದ ನಿರಂತರ ನೀರು ಬಿಡಲಾಗಿತ್ತಿದೆ‌. ಜನರು ನದಿ ಪಾತ್ರದಲ್ಲಿ ಹೋಗದಂತೆ  ಅಪರ ಜಿಲ್ಲಾಧಿಕಾರಿ ಸೂಚನೆ  ನೀಡಿದ್ದಾರೆ. ಕೆಲ ಗ್ರಾಮಗಳಲ್ಲಿ ಜನರಿಗೆ ಸೂಚನೆ ನೀಡಲು ಸ್ಥಳೀಯ ಆಡಳಿತಕ್ಕೆ ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದದಾರೆ

07:38 PM (IST) Jul 07

ಉಡುಪಿ: ಬಾರ್ಕೂರು ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ನೀರು

ಉಡುಪಿ: ಸತತವಾಗಿ ಸುರಿಯುತ್ತಿರಯವ ಮಳೆಯಿಂದಾಗಿ ಗದ್ದೆಯ ಮೂಲಕ ಹರಿದು ಬಂದು ಬಾರ್ಕೂರು ರೈಲ್ವೆ ನಿಲ್ದಾಣಕ್ಕೆ ನುಗ್ಗಿದೆ.  ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿಲ್ದಾಣದ ಒಳಗೆ ನೀರು ಹರಿದು ಬಂದಿದ್ದು, ಟ್ರ್ಯಾಕ್ ಮೇಲೂ ನೆರೆ ನೀರು ಹರಿಯುತ್ತಿದೆ. 

07:12 PM (IST) Jul 07

ಕಲಬುರಗಿಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ

ಕಲಬುರಗಿ: ಕಲಬುರಗಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು,  ಮಳೆಯಿಂದ ನಗರದ ರಸ್ತೆಗಳಲೆಲ್ಲಾ ನೀರು ತುಂಬಿದೆ. ಈ ಬಾರಿ ಮುಂಗಾರು ಮಳೆ ತೀವ್ರ ಕೊರತೆ ಹಿನ್ನಲೆ ಕಂಗಾಲಾಗಿದ್ದ ರೈತರು ಮಳೆಯಿಂದ ಹರ್ಷಗೊಂಡಿದ್ದಾರೆ. ಇಂದು ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಚುರುಕಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ಇದೆ. 

ಕೋಲಾರ: ಇನ್ನು ಕೋಲಾರದಲ್ಲಿ ಮಳೆ ಆರಂಭವಾಗಿದೆ.  ಜಿಲ್ಲೆಯ ಹಲವೆಡೆ ಜೋರು ಗಾಳಿ ಸಹಿತ ಮಳೆ ಸುರಿಯುತ್ತಿದ್ದು,  ದಿಢೀರ್ ಮಳೆಗೆ ವಾಹನ ಸವಾರರು ಪರದಾಡುತ್ತಿದ್ದಾರೆ. 

07:01 PM (IST) Jul 07

ಕೊಡಿಗಿನಲ್ಲಿ ಮುಂದುವರೆದ ಮಳೆ ಅರ್ಭಟ: ಬೃಹತ್ ಮರ ಬಿದ್ದು ವಾಹನ ಸಂಚಾರ ಸ್ಥಗಿತ

ಕೊಡಗು:  ಕೊಡಗು ಜಿಲ್ಲೆಯಲ್ಲಿ  ಮಳೆ ಅರ್ಭಟ‌ ಮುಂದುವರೆದಿದ್ದು, ಮಡಿಕೇರಿ -ಭಾಗಮಂಡಲ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ.  ಮಡಿಕೇರಿ ಭಾಗಮಂಡಲ ರಸ್ತೆಯ ಬೆಟ್ಟಗೇರಿಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತವಾಗಿದೆ.  ಸಾರ್ವಜನಿಕರು ಮರ ತೆರವು ‌ಮಾಡಲು ಹರಸಾಹಸಪಡುತ್ತಿದ್ದು, ರಸ್ತೆ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ.


 

06:57 PM (IST) Jul 07

ಉಡುಪಿ: ಮುಂಗಾರು ಮಳೆ ಆರ್ಭಟ: ಎರಡು ದಿನ ರೆಡ್ ಅಲರ್ಟ್ ಘೋಷಣೆ

ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಆರ್ಭಟದ ಬೆನ್ನಲ್ಲೆ , ಜಿಲ್ಲೆಯಲ್ಲಿ ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.  ಉಡುಪಿ ಜಿಲ್ಲೆಯ ಎಲ್ಲಾ ಸರ್ಕಾರಿ ಖಾಸಗಿ ಶಾಲಾ ಕಾಲೇಜಿಗೆ ಎರಡು ದಿನ ರಜೆ ನೀಡಲಾಗಿದೆ.  ಹವಾಮಾನ ಇಲಾಖೆ  ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಉಡುಪಿ ಡಿಸಿ  ಕೂರ್ಮಾರಾವ್ ಎಂ. ಮುಂದಿನ ಎರಡು ದಿನ ರಜೆ ಘೋಷಿಸಿದ್ದಾರೆ.  

06:51 PM (IST) Jul 07

ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಸಚಿವರಿಂದ ತರಾಟೆ

ದಕ್ಷಿಣ ಕನ್ನಡ: ಮಳೆಹಾನಿ ಸಂಬಂಧಿಸಿ ದ.ಕ ಜಿಲ್ಲಾಡಳಿತದ ಜೊತೆ ಕಂದಾಯ ಸಚಿವರ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗೆ  ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರ್ಯಪಾಲಕ ಇಂಜಿನಿಯರ್‌ ಕೆ.ಕೃಷ್ಣಕುಮಾರ್‌ ಗೆ ಸಚಿವರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ತಕ್ಷಣ ಹೆದ್ದಾರಿ‌ ಬದಿ ಚರಂಡಿ ಅವ್ಯವಸ್ಥೆ ಸರಿ ಮಾಡಿ ಎಂದು ಆರ್.ಅಶೋಕ್ ಸೂಚಿಸಿದ್ದಾರೆ. 

"ಚರಂಡಿಯಲ್ಲಿ ನೀರು ಹರಿಯೋ ಬದಲು ರಸ್ತೆಯಲ್ಲಿ ಹರೀತಾ ಇದೆ, ಸುಳ್ಯದಿಂದ ಮಂಗಳೂರಿಗೆ ಬರೋ ದಾರಿಯಲ್ಲಿ ‌ನೀರು ರಸ್ತೆಯಲ್ಲಿ ಹರೀತಿದೆ, ನೀವೇನ್ ಕ್ಲೀನ್ ಮಾಡಿದ್ದೀರಾ? ನಾವು ಮೂರೂ ಜನ ಮಿನಿಸ್ಟರ್ಸ್ ಒಂದೇ ಕಾರಲ್ಲಿ ಬಂದ್ವಿ, ಇಲ್ಲಿ ಬಂದು ಸುಖಾಸುಮ್ಮನೆ ಸಮಜಾಯಿಷಿ ಕೊಡಬೇಡಿ, ನೀವು ಹೂಳು ತೆಗೆಯದ ಕಾರಣ ನೀರು ರಸ್ತೆಯಲ್ಲಿ ಹರೀತಾ ಇದೆ" ಎಂದು ಕಂದಾಯ ಸಚಿವ ಆರ್.ಅಶೋಕ್ ಮತ್ತು ಉಸ್ತುವಾರಿ ಸಚಿವ ಸುನೀಲ್ ಕುಮಾರ್‌ ಅಧಿಕಾರಿಗೆ ಕ್ಲಾಸ್  ತೆಗೆದುಕೊಂಡಿದ್ದಾರೆ

06:44 PM (IST) Jul 07

ಹೇಮಾವತಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಜುಲೈ  07 ರಂದು ಬೆಳಿಗ್ಗೆ 6.00 ಗಂಟೆಗೆ 16660 ಕ್ಯುಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟವು 2922.00 ಅಡಿಗಳಾಗಿದ್ದು,  ಜುಲೈ 07 ರಂದು ಬೆಳಿಗ್ಗೆ 6.00 ಗಂಟೆಗೆ 2913.60 ಅಡಿ ತುಂಬಿರುತ್ತದೆ. ಇನ್ನೂ 8.40 ಅಡಿಗಳಷ್ಟು ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದಾಗಿರುತ್ತದೆ.  
ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆಯಿರುವುದರಿಂದ, ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು/ಸ್ಥಳೀಯ ವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ಹೇಮಾವತಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯ‌ರ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.

06:39 PM (IST) Jul 07

ಉತ್ತರಕನ್ನಡ: ಜೊಯಿಡಾದ ಅಣಶಿ ಘಟ್ಟದಲ್ಲಿ ನಿರಂತರ ಗುಡ್ಡ ಕುಸಿತ: ರಾತ್ರಿ ಸಂಚಾರ ಬಂದ್

ಉತ್ತರಕನ್ನಡ: ಜೊಯಿಡಾದ ಅಣಶಿ ಘಟ್ಟದಲ್ಲಿ ನಿರಂತರ ಗುಡ್ಡ ಕುಸಿತ ಹಿನ್ನೆಲೆ, ಅಣಶಿ ಘಟ್ಟ ಪ್ರದೇಶದಲ್ಲಿ ರಾತ್ರಿ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್  ಆದೇಶ ಹೊರಡಿಸಿದ್ದಾರೆ.  ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸದಾಶಿವಗಢ -ಲೋಂಡಾ  ಸಂಪರ್ಕಿಸುವ ರಾಜ್ಯ ಹೆದ್ದಾರಿ- 34 ಬಂದ್ ಮಾಡಲಾಗಿದೆ. 

ಈ ಹಿಂದೆ ಕೇಂದ್ರದ ಭೂ ವಿಜ್ಞಾನಿಗಳ ತಂಡ ಕೂಡಾ ಭಾಗದಲ್ಲಿ ಅಧ್ಯಯನ ನಡೆಸಿ ಸಂಚಾರಕ್ಕೆ ಅಪಾಯ ಎಂದು ವರದಿ ನೀಡಿತ್ತು. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ನಿರಂತರವಾಗಿ ಗುಡ್ಡ ಕುಸಿತವಾಗಿದೆ.  ಅಬ್ಬರದ ಮಳೆ ಹಿನ್ನೆಲೆಯಲ್ಲಿ  ಕಳೆದ ಮೂರು ದಿನದಿಂದ ಈ ಭಾಗದಲ್ಲಿ ಗುಡ್ಡ ಕುಸಿತವಾಗುತಿತ್ತು. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿ ರಸ್ತೆ ಬಂದ್‌ನ ಆದೇಶ ನೀಡಿದ್ದಾರೆ.  

06:25 PM (IST) Jul 07

ಉತ್ತರಕನ್ನಡ: ಮುಂದುವರೆದ ವರುಣಾರ್ಭಟ: ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಉತ್ತರಕನ್ನಡ:  ಜಿಲ್ಲೆಯಲ್ಲಿ ಮಳೆಯ ಅಬ್ಬರದ ಮುಂದುವರೆದ ಹಿನ್ನೆಲೆ, ಹೆಚ್ಚು ಮಳೆ ಬೀಳುತ್ತಿರುವ ತಾಲೂಕುಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.  ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಹಿಲ ಆದೇಶ ಹೊರಡಿಸಿದ್ದಾರೆ.  ಕಾರವಾರ, ಕುಮಟಾ, ಹೊನ್ನಾವರ, ಅಂಕೋಲಾ, ಭಟ್ಕಳ, ಶಿರಸಿ, ಸಿದ್ದಾಪುರ, ಜೊಯಿಡಾ ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ.  ಮುಂಡಗೋಡು, ಹಳಿಯಾಳ, ಯಲ್ಲಾಪುರ ಭಾಗದ ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಿಲ್ಲ.  

06:18 PM (IST) Jul 07

ಮಳೆಹಾನಿ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಜತೆ ಸಚಿವರ ಸಭೆ

ದಕ್ಷಿಣ ಕನ್ನಡ:  ಮಳೆಹಾನಿ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಜತೆ ಸಚಿವರು ನಡೆಸಿದ್ದಾರೆ. ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ದಕ್ಷಿಣ ಕನ್ನಡ ಜಿ.ಪಂ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗಿದೆ.  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ‌ಕುಮಾರ್, ಸಚಿವ ಅಂಗಾರ ಸೇರಿ ಜಿಲ್ಲೆಯ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿ ಹಲವು‌ ಅಧಿಕಾರಿಗಳೂ ‌ಭಾಗಿಯಾಗಿದ್ದಾರೆ..

06:13 PM (IST) Jul 07

ದಕ್ಷಿಣ ಕನ್ನಡ: ತಜ್ಞರ ವರದಿ ಪಡೆದು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ: ಸುನೀಲ್ ಕುಮಾರ್

ದಕ್ಷಿಣ ಕನ್ನಡ: ತಜ್ಞರ ವರದಿ ಪಡೆದು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಮಾಡುತ್ತೆವೆ ಎಂದು  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.  ಸಚಿವರು ಮತ್ತು ಅಧಿಕಾರಿಗಳ ಜೊತೆ  ಚರ್ಚಿಸಿ ಕ್ರಮ ಕೈಗಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 

"ನಮ್ಮ ಮೊದಲ ಆದ್ಯತೆ ವಾಸದ ಮನೆಗಳಿಗೆ ರಕ್ಷಣೆ ಕೊಡುವುದು, ರೆಸಾರ್ಟ್ ಗಳಿಗೆ ನಮ್ಮ ಆದ್ಯತೆ ಅಲ್ಲ, ವಾಸದ ಮನೆ ಮುಖ್ಯ, ಅಲ್ಲಿಗೆ ತುರ್ತು ಪರಿಹಾರ ‌ಮತ್ತು ಶಾಶ್ವತ ಪರಿಹಾರ ಮಾಡ್ತೇವೆ, ಮೂರೂ ಜಿಲ್ಲೆಯ ಸಚಿವರು ಸಿಎಂ ಭೇಟಿಯಾಗಿ ಚರ್ಚೆ ಮಾಡ್ತೇವೆ" ಎಂದು ಸುನೀಲ್‌ ಕುಮಾರ್‌ ಭರವಸೆ ನೀಡಿದ್ದಾರೆ. 
 

06:08 PM (IST) Jul 07

ಉತ್ತರಕನ್ನಡ: ಸಮುದ್ರದಲ್ಲಿ ನಾಳೆ ಭಾರೀ ಅಲೆ ಏಳುವ ಸಾಧ್ಯತೆ

ಉತ್ತರಕನ್ನಡ: ಮಂಗಳೂರು- ಕಾರವಾರ  ಸಮುದ್ರದಲ್ಲಿ ನಾಳೆ ಭಾರೀ ಅಲೆ ಏಳುವ ಸಾಧ್ಯತೆಯಿದೆ.  ನಾಳೆ ರಾತ್ರಿ 11.30ರವರೆಗೆ ಸಮುದ್ರದಲ್ಲಿ 3.5ರಿಂದ 4.2 ಮೀಟರ್ ಎತ್ತರದವರೆಗೆ ಅಲೆಗಳು ಕಾಣಿಸುವ ಸಾಧ್ಯತೆಯಿದೆ.  ಗಾಳಿಯ ವೇಗವು ಗಂಟೆಗೆ 45-55 ಕಿ.ಮೀ. ಹಾಗೂ ಕೆಲವೊಮ್ಮೆ ಗಂಟೆಗೆ 65 ಕಿ.ಮೀ. ಬೀಸಬಹುದು. ಹೀಗಾಗಿ ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಭಾಗಕ್ಕೆ ಹೋಗಬಾರದೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. 

05:51 PM (IST) Jul 07

ಕರಾವಳಿಯಲ್ಲಿ ನಾಳೆ ಸಮುದ್ರದಲ್ಲಿ ಭಾರೀ ಅಲೆ ಏಳುವ ಸಾಧ್ಯತೆ

ಉತ್ತರಕನ್ನಡ: ಮಂಗಳೂರು- ಕಾರವಾರ ನಾಳೆ ಸಮುದ್ರದಲ್ಲಿ ಭಾರೀ ಅಲೆ ಏಳುವ ಸಾಧ್ಯತೆಯಿದೆ. ನಾಳೆ ರಾತ್ರಿ 11.30ರವರೆಗೆ ಸಮುದ್ರದಲ್ಲಿ 3.5ರಿಂದ 4.2 ಮೀಟರ್ ಎತ್ತರದವರೆಗೆ ಅಲೆಗಳು ಕಾಣಿಸುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಯ ವೇಗವು ಗಂಟೆಗೆ 45-55 ಕಿ.ಮೀ. ಹಾಗೂ ಕೆಲವೊಮ್ಮೆ ಗಂಟೆಗೆ 65 ಕಿ.ಮೀ. ಬೀಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಭಾಗಕ್ಕೆ ಹೋಗಬಾರದೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. 

ರಾಯಚೂರು: ರಾಯಚೂರಿನಲ್ಲಿ ಜೋರಾಗಿ ಸುರಿದ ಮಳೆಳೆ ಮರಗಳು ಧರೆಗುರುಳಿದ್ದು, ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಮರ ಬಿದ್ದು ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ನಗರದ ಏಕ್ ಮಿನಾರ್ ಬಳಿ ರಸ್ತೆ ಪಕ್ಕದಲ್ಲಿದ್ದ ಮರ ನೆಲಕ್ಕೆ ಉರುಳಿ ಅವಾಂತರವಾಗಿದೆ. ಕಾರಿನಲ್ಲಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಿಂಗಸುಗೂರು ತಾ. ಹಟ್ಟಿ ಮೂಲದ ಶೇಕ್ ಶಾನು ಪಾಷಾ ಎಂಬಾತನಿಗೆ ಸೇರಿದ ಕಾರಿನ ಮೇಲೆ ಮರ ಬಿದ್ದಿದೆ. ರಾಯಚೂರಿನ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಾಡಿಗೆ ತಂದಿದ್ದರು. 

05:48 PM (IST) Jul 07

ಕೊಡಗು: ಮುಂದುವರೆದ ಮಳೆಯ ಅಬ್ಬರ: ಶಾಲಾ ಕಾಲೇಜುಗಳಿಗೆ ರಜೆ

ಕೊಡಗು:  ಕೊಡಗಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು,  ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.   ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ನಾಳೆ ಒಂದು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಮುಂದುವರೆಯಲಿದೆ.
 

05:48 PM (IST) Jul 07

ಖಾದರ್‌ಗೆ ಸಚಿವ ಆರ್‌ ಅಶೋಕ್‌ ತಿರುಗೇಟು

ಕಡಲ್ಕೊರೆತ ವಿಚಾರದಲ್ಲಿ ಸರ್ಕಾರದಿಂದ ಬೆಂಬಲ ಸಿಗ್ತಿಲ್ಲ ಎಂಬ ಖಾದರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್‌ ಅಶೋಕ್‌ ತಿರುಗೇಟು ನೀಡಿದ್ದಾರೆ. ಉಚ್ಚಿಲದಲ್ಲಿ ಯು.ಟಿ.ಖಾದರ್ ಗೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದ್ದು, ವಿರೋಧ ಪಕ್ಷದ ವ್ಯಕ್ತಿಯಾಗಿ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾತನಾಡಬಾರದು ಎಂದು ಖಾದರ್‌ಗೆ ಹೇಳಿದ್ದಾರೆ. ಬಿಜೆಪಿ ಸರ್ಕಾರ ಹತ್ತು ವರ್ಷ ಇತ್ತು, ಇವರ ಕಾಂಗ್ರೆಸ್ 60 ವರ್ಷ ಇತ್ತು, ಆಗಲೂ ಕಡಲು ಇತ್ತು, ಕೊರೆತ ಇತ್ತು ಜೊತೆಗೆ ಕಾಂಗ್ರೆಸ್ ‌ಕೂಡ ಇತ್ತು. ಇದೆಲ್ಲ ಇದ್ದರೂ ಏನೂ ಮಾಡದೇ ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ನಾವು ಈ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ಹಾಗಿದ್ರೆ ಇವರ ಏರಿಯಾ ಬಿಟ್ಟು ಬಿಜೆಪಿ ಏರಿಯಾಗೆ ಹೋಗ್ತಾ ಇದ್ವಿ. ಆದರೆ ಹಾನಿಗೊಳಗಾದ ಜನ ನಮ್ಮವರು, ಭಾರತೀಯರು. ಹೀಗಾಗಿ ಎನ್ ಡಿಆರ್ ಎಫ್ ಫಂಡ್ ನಲ್ಲಿ ಪರಿಹಾರ ಕೊಡ್ತೇವೆ. ಟೀಕೆ ಟಿಪ್ಪಣಿ ಸಹಜ, ಆದರೆ ನಾವು ನಿಷ್ಪಕ್ಷಪಾತ ಕೆಲಸ ಮಾಡ್ತೇವೆ. ಉಚ್ಚಿಲದಲ್ಲಿ ಕಡಲ್ಕೊರೆತ ಆಗಿ ಮೀನುಗಾರರ ಮನೆಗಳು ಬಿದ್ದಿವೆ. ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಸಂಬಂಧ ಸಿಎಂ ಜೊತೆ ಮಾತನಾಡ್ತೇನೆ. ಸಮುದ್ರ ಕೊರೆತ ನಿಲ್ಲಿಸದೇ ಇದ್ರೆ ಇನ್ನೂ ಮುಂದೆ ಹೋಗ್ತದೆ. ಮತ್ತೊಮ್ಮೆ ಇಲ್ಲಿ ತಜ್ಞರ ಸಮಿತಿ ಮೂಲಕ ಸಮೀಕ್ಷೆ ಮಾಡ್ತೇವೆ. ರಾಜ್ಯದಲ್ಲಿ ಬಹಳಷ್ಟು ಹಾನಿಯಾಗಿದ್ದು, ಏಳು ಜಿಲ್ಲೆಗಳಲ್ಲಿ ಸಮಸ್ಯೆ ಆಗಿದೆ. ಪೂರ್ತಿ ಮನೆ ಬಿದ್ರೆ ಐದು ಲಕ್ಷ ಪರಿಹಾರ ಕೊಡುವ ಆದೇಶಕ್ಕೆ ಬೆಂಗಳೂರಿಗೆ ಹೋಗಿ ಸಹಿ ಮಾಡ್ತೇನೆ. ಎನ್ ಡಿಆರ್ ಎಫ್ ನಿಯಮದ ಪ್ರಕಾರ 95 ಸಾವಿರ ಇತ್ತು, ಸಿಎಂ ಜೊತೆ ಮಾತನಾಡಿ ಐದು ಲಕ್ಷ ಮಾಡಿದ್ದೇವೆ. ಬಂಟ್ವಾಳದ ಪಂಜಿಕಲ್ಲು ಗುಡ್ಡ ಕುಸಿತದ ಮೃತರಿಗೆ ಐದು ಲಕ್ಷ ಪರಿಹಾರ ಕೊಡ್ತೇವೆ. ಅವರು ಕೇರಳದವರು, ಇಲ್ಲಿ ಕೆಲಸಕ್ಕಾಗಿ ಬಂದಿದ್ದಾರೆ. ಭೂ ಕುಸಿತ ಆದ ಜಾಗದ ಜನರನ್ನ ಸ್ಥಳಾಂತರಿಸಲು ಡಿಸಿಗಳಿಗೆ ಸೂಚಿಸಿದ್ದೇನೆ. ಎಲ್ಲಾ ಅಧಿಕಾರಿಗಳು ರಜೆ ಹಾಕದೇ ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ಆರ್ ಅಶೋಕ್‌ ತಿಳಿಸಿದರು.

05:44 PM (IST) Jul 07

ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ:

ಶಿವಮೊಗ್ಗ  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 472.60 ಮಿಮಿ ಮಳೆ

ಸರಾಸರಿ 67.51 ಮಿಮಿ ಮಳೆ ದಾಖಲಾಗಿದೆ.  

ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ 

ಇದುವರೆಗೆ ಸರಾಸರಿ  236.29 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 48.70 ಮಿಮಿ., ಭದ್ರಾವತಿ 31.90 ಮಿಮಿ.

ತೀರ್ಥಹಳ್ಳಿ 94.40 ಮಿಮಿ., ಸಾಗರ 111.4 ಮಿಮಿ.

ಶಿಕಾರಿಪುರ 33.00 ಮಿಮಿ. ಸೊರಬ 46.80 ಮಿಮಿ.

ಹಾಗೂ ಹೊಸನಗರ 106.40 ಮಿಮಿ. ಮಳೆಯಾಗಿದೆ.

ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ ಗಳಲ್ಲಿ

ಲಿಂಗನಮಕ್ಕಿ:
1819 (ಗರಿಷ್ಠ), 1769.05 (ಇಂದಿನ ಮಟ್ಟ), 57638 (ಒಳಹರಿವು), 2444.68 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.60.  

ಭದ್ರಾ:
186 (ಗರಿಷ್ಠ), 163.9 (ಇಂದಿನ ಮಟ್ಟ), 31667.00 (ಒಳಹರಿವು), 136.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 155.60.   

ತುಂಗಾ:
 588.24 (ಗರಿಷ್ಠ), 588.24 (ಇಂದಿನ ಮಟ್ಟ), 45939.00 (ಒಳಹರಿವು), 49638.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.

04:27 PM (IST) Jul 07

ಹಾಸನ: ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ: ಯಗಚಿ ಜಲಾಶಯ ಸಂಪೂರ್ಣ ಭರ್ತಿ

ಹಾಸನ: ಹಾಸನ ಜಿಲ್ಲೆಯ ಬೇಲೂರು, ಚಿಕ್ಕಮಗಳೂರು, ಮೂಡಿಗೆರೆ  ಭಾಗದಲ್ಲಿ‌ ಕಳೆದ ನಾಲ್ಕೈದು  ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೇಲೂರಿನಲ್ಲಿರುವ ಯಗಚಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. 
ಯಗಚಿ ಜಲಾಶಯ ಭರ್ತಿಯಾದ ಹಿನ್ನೆಲೆ, ಐದು ಕ್ರಸ್ಟ್‌ ಗೇಟ್ ಮೂಲಕ ನದಿಗೆ 2500 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. 

ಜಲಾಶಯದ ನೀರಿನ ಸಂಗ್ರಹ ಪ್ರಮಾಣ 3.603 ಟಿಎಂಸಿ ಇದ್ದರೆ ಇಂದು ಜಲಾಶಯದಲ್ಲಿರುವ ನೀರಿನ ಪ್ರಮಾಣ 3.30 ಟಿಎಂಸಿ ಆಗಿದೆ.  ಜಲಾಶಯಕ್ಕೆ 2500 ಕ್ಯೂಸೆಕ್‌ ಹರಿದು ಬಂದಿದ್ದು, 2500 ಕ್ಯುಸೆಕ್‌ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. 

ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದ್ದು ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುವುದು, ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಯಗಚಿ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಶಿವಕುಮಾರ್ ಸೂಚನೆ ನೀಡಿದ್ದಾರೆ. 

03:52 PM (IST) Jul 07

ಉಡುಪಿ: ನಾವುಂದ ಪರಿಸರದಲ್ಲಿ ನೆರೆ ಸ್ಥಿತಿ: ಸುರಕ್ಷಿತ ಸ್ಥಳಗಳಿಗೆ ಸಾರ್ವಜನಿಕರ ರವಾನೆ

ಉಡುಪಿ: ನಾವುಂದ ಪರಿಸರದಲ್ಲಿ ಸಂಪೂರ್ಣ ನೆರೆಯ ಸ್ಥಿತಿ ಉಂಟಾಗಿದೆ.  ಸೌಪರ್ಣಿಕಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು,  ನಡುಗೆಡ್ಡೆ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಸಾರ್ವಜನಿಕರ ರವಾನಿಸಲಾಗುತ್ತಿದೆ.  ದೋಣಿಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುಲಾಗುತ್ತಿದೆ.  ಕೊಲ್ಲೂರು ಪರಿಸರದ ಮಳೆಯಿಂದ ನಾವುಂದಲ್ಲಿ ನೆರೆ ಉಂಟಾಗಿದ್ದು, ಬಂಟ್ವಾಡಿ ಅಣೆಕಟ್ಟು ನಿರ್ಮಾಣದ ನಂತರ ನೆರೆ ಹೆಚ್ಚಾಗಿದೆ.  ತಮ್ಮ ಕಷ್ಟ ಕೇಳದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. 

03:33 PM (IST) Jul 07

ಹಾಸನ: ಸಕಲೇಶಪುರದಲ್ಲಿ ನಿರಂತರ ಮಳೆ: ರಾಷ್ಟ್ರೀಯ ಹೆದ್ದಾರಿ 75ರ ಬಾಳ್ಳುಪೇಟೆ ಬಳಿ ರಸ್ತೆ ಬದಿ ಕುಸಿತ

ಹಾಸನ: ಸಕಲೇಶಪುರ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ, ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಬಳಿ ರಸ್ತೆ ಬದಿ ಕುಸಿತವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬಾಳ್ಳುಪೇಟೆ ಬಳಿಯ ರಸ್ತೆ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ,  ಈ ನಡುವೆ ಕುಸಿದ ರಸ್ತೆ ಕುಸಿತವಾಗಿದ್ದು ಆತಂಕದ ನಡುವೆ ವಾಹನ ಸವಾರರ ಸಂಚರಿಸುತ್ತಿದ್ದಾರೆ. ಇನ್ನು ಕುಸಿತದಿಂದಾಗಿ ಪಕ್ಕದ ಕಾಫಿ, ಅಡಿಕೆ ತೋಟಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಈ ಬೆನ್ನಲ್ಲೇ ರಾಜ್ ಕಮಲ್ ಗುತ್ತಿಗೆದಾರ ಕಂಪೆನಿ ವಿರುದ್ದ  ತೋಟದ ಮಾಲೀಕರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

03:10 PM (IST) Jul 07

ಉತ್ತರಕನ್ನಡ: ಹೋಟೆಲ್ ಮೇಲೆ ಉರುಳಿದ ಮರ: ಹಲವರಿಗೆ ಗಾಯ

ಉತ್ತರಕನ್ನಡ: ಹೋಟೆಲ್ ಮೇಲೆ ಉರುಳಿದ ಮರ ಐವರು ಗಾಯಗೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ್ ಕ್ರಾಸ್ ಬಳಿ ನಡೆದಿದೆ. ಬಶೀರ್ ಎಂಬವರಿಗೆ ಸೇರಿದ್ದ ಹೊಟೇಲ್ ಮೇಲೆ ಮರ ಉರುಳಿದ್ದು ಘಟನೆಯಲ್ಲಿ ಹೊಟೇಲ್ ನಲ್ಲಿದ್ದ ಐವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಹಾಣಿಯಾಗಿಲ್ಲ. ಮರ ಬಿದ್ದದ್ದರಿಂದ ಸುಮಾರು ಐದು ಲಕ್ಷ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿದೆ.  ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಪರೀಶಿಲನೆ ನಡೆಸುತ್ತಿದ್ದಾರೆ. 

02:58 PM (IST) Jul 07

ಚಿಕ್ಕಮಗಳೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಮರ, ವಾಹನ ಸಂಚಾರಕ್ಕೆ ಅಡಚಣೆ!

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದೆ.  ಮಳೆಯ ರಭಸಕ್ಕೆ ಮರ ರಸ್ತೆಗೆ ಉರುಳಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಚಿಕ್ಕಮಗಳೂರು ತಾಲೂಕಿನ ಕೆಳಗೂರಿನಲ್ಲಿ ಘಟನೆ ನಡೆದಿದ್ದು,  ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮರ ಧರೆಗುರುಳಿದೆ.  ಹೀಗಾಗಿ ಚಿಕ್ಕಮಗಳೂರು ಮೂಡಿಗೆರೆ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 

02:15 PM (IST) Jul 07

ಮಳೆ ಹಾನಿ ಪ್ರದೇಶಕ್ಕೆ ಸಚಿವ ಆರ್. ಅಶೋಕ್ ಭೇಟಿ

ಕೊಡಗು: ಕಂದಾಯ ಸಚಿವರಾದ‌ ಆರ್.ಅಶೋಕ್ ಅವರು ಮಡಿಕೇರಿ-ಮಂಗಳೂರು ರಸ್ತೆ ಮಾರ್ಗದ ಕರ್ತೋಜಿ ಪ್ರದೇಶಕ್ಕೆ ಭೇಟಿ ನೀಡಿ ಮಳೆಗೆ ಹಾನಿಗೊಳಗಾದ ಪ್ರದೇಶವನ್ನು ವೀಕ್ಷಿಸಿದರು. ಶಾಸಕರಾದ ಕೆ.ಜಿ.ಬೋಪಯ್ಯ, ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಇತರರು ಇದ್ದರು.

 

01:35 PM (IST) Jul 07

ಮಳೆಗೆ ಸೃಷ್ಟಿಯಾಗಿವೆ ಝರಿಗಳು!

ಕಾರವಾರ: ಮಳೆಯಿಂದಾಗಿ ಹೊನ್ನಾವರದ ಹಲವೆಡೆ ಕಾಣಿಸಿಕೊಂಡಿದೆ ಸಣ್ಣ- ಸಣ್ಣ ಝರಿಗಳು. ರಸ್ತೆಯ ಬಳಿಯೇ ಹಲವೆಡೆ ಎತ್ತರದ ಪ್ರದೇಶದಿಂದ ಹರಿಯುತ್ತಿರುವ ನೀರು. ಹೊನ್ನಾವರದ ಕವಳಕ್ಕಿ, ಭಾಸ್ಕೇರಿ, ಗುಡ್ಡೆಬಾಳ, ಪ್ರಭಾತ್ ನಗರ, ಆರುವಳ್ಳಿಯಲ್ಲಿ ಸಣ್ಣ ಸಣ್ಣ ಝರಿಗಳು. ಮಳೆ ಜೋರಾಗಿ ಬಿದ್ದರೆ ಇನ್ನಷ್ಟು  ರಭಸವಾಗಿ ಹಾಗೂ ಮೈದುಂಬಿ ಹರಿಯುತ್ತಿವೆ. ಜನರ ಆಕರ್ಷಣಾ ಕೇಂದ್ರಗಳಾಗಿವೆ ಹೊನ್ನಾವರದ ಈ ಸಣ್ಣ ಸಣ್ಣ ಝರಿಗಳು. ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಅಬ್ಬರದ ಮಳೆ ಪ್ರಾರಂಭವಾಗಿದ್ದು, ಅಪಾಯದ ಮಟ್ಟ ಮೀರಿ ಹರಿದ ಶರಾವತಿ, ಗಂಗಾವಳಿ, ಅಘನಾಶಿನ, ವರದಾ, ಕಾಳಿ ನದಿ. ಹೊನ್ನಾವರದ ಶರಾವತಿ ತೀರ ಪ್ರದೇಶದ ಗುಂಡಬಾಳ ಭಾಗದಲ್ಲಿ ತೋಟ, ಮನೆಗಳಿಗೆ ನೀರು ನುಗ್ಗುತ್ತಿವೆ. ಹೆಚ್ಚಿನ ಮಳೆಯಾಗುತ್ತಿರುವ ಕಾರಣ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಜಿಲ್ಲಾಡಳಿತ ಸೂಚಿಸಿದೆ.

01:15 PM (IST) Jul 07

Davanagere: ತುಂಗಾಭದ್ರ ನದಿಯ ಒಳ ಹರಿವು ಹೆಚ್ಚಳ ಹಿನ್ನಲೆ

ದಾವಣಗೆರೆ: ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ ಎಚ್ಚರಿಕೆ ನೀಡಿದ ದಾವಣಗೆರೆ ಜಿಲ್ಲಾಡಳಿತ. ಹೊನ್ನಾಳಿ ಹಾಗೂ ಹರಿಹರ ತಹಶೀಲ್ದಾರ್ ಅವರಿಂದ ನದಿ ಪಾತ್ರದ ಜನರು ಎಚ್ಚರವಹಿಸುವಂತೆ ಮನವಿ. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆ ನದಿ‌ನೀರು ಹೆಚ್ಚುತ್ತಿದೆ. ನದಿ ಪಾತ್ರದಲ್ಲಿನ ಜನ ಜಾನುವಾರುಗಳು ನದಿ ಪಾತ್ರದಿಂದ ದೂರವಿರುವಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ನದಿ ನೀರು ಹೆಚ್ಚಾದರೆ ಬಾಲರಾಜ್ ಘಾಟ್, ಕಾಳಿದಾಸ ನಗರ ಸೇರಿ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ. ಇದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಮನವಿ ಮಾಡಿದ ಜಿಲ್ಲಾಡಳಿತ

12:49 PM (IST) Jul 07

Karwar: ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ

ಕಾರವಾರ, ಉತ್ತರಕನ್ನಡ: ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ. ಹೊಸಾಕುಳಿ ಪಂಚಾಯತ್ ವ್ಯಾಪ್ತಿಯ ಗುಡ್ಡೆಬಾಳ ಗ್ರಾಮದ ಬಳಿ ಕುಸಿದ ಗುಡ್ಡ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಸಿದ ಗುಡ್ಡ. ಹೆದ್ದಾರಿ ಮೇಲೆ ಗುಡ್ಡ ಕುಸಿದ ಹಿನ್ನೆಲೆ ಸಂಚಾರ ಅಸ್ತವ್ಯಸ್ತ. ಗ್ರಾಮ ಪಂಚಾಯತ್ ವತಿಯಿಂದ ಮಣ್ಣು ತೆರವು ಕಾರ್ಯಾಚರಣೆ. ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸಿಬ್ಬಂದಿ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

12:18 PM (IST) Jul 07

ಬಂಟ್ವಾಳದಲ್ಲಿ ಗುಡ್ಡು ಕುಸಿದ 3 ಸಾವು, ಸ್ಥಳಕ್ಕೆ ಸುನೀಲ್ ಕುಮಾರ್ ಭೇಟಿ

ಬಂಟ್ವಾಳದ ಪಂಜಿಕಲ್ಲು ಗ್ರಾಮದಲ್ಲಿ ಗುಡ್ಡ ಕುಸಿದು ಮೂವರ ಸಾವು ಪ್ರಕರಣ. ಘಟನಾ ಸ್ಥಳಕ್ಕೆ ದ.ಕ‌ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ‌ಕುಮಾರ್ ಭೇಟಿ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜೊತೆ ಸುನೀಲ್ ಭೇಟಿ. ಮನೆ ಕುಸಿದ ಮತ್ತು ಗುಡ್ಡ ಕುಸಿದ ಭಾಗದಲ್ಲಿ ಪರಿಶೀಲನೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಹಿತ ಅಧಿಕಾರಿಗಳು ‌ಭಾಗಿ. ಈಗ ಬಂದ ವರದಿ ಪ್ರಕಾರ ತುರ್ತು ಕ್ರಮ ಕೈಗೊಳ್ಳಲಾಗಿದೆ. ಪೂರ್ಣ ವರದಿ ಬಂದ ಬಳಿಕ ಪರಿಹಾರದ ಬಗ್ಗೆ ನಿರ್ಧಾರ. ಸದ್ಯ ಜಿಲ್ಲೆಯಲ್ಲಿ ಮಳೆ ಹೆಚ್ಚಿದ್ದು, ಹಾನಿ ಪ್ರದೇಶಕ್ಕೆ ಭೇಟಿ ನೀಡ್ತಾ ಇದೀವಿ. ಅಧಿಕಾರಿಗಳು ‌ಮತ್ತು ಎಲ್ಲಾ ಇಲಾಖೆ ಸನ್ನದ್ದವಾಗಿರಲು ಸೂಚಿಸಲಾಗಿದೆ. ಸಂಜೆ ಸಭೆ ‌ನಡೆಸಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಎದುರಿಸಲು ಸೂಚಿಸಲಾಗುವುದು, ಎಂದ ಸಚಿವರು.

11:23 AM (IST) Jul 07

ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ, ಉತ್ತರ ಕರ್ನಾಟಕಕ್ಕೆ ಮತ್ತೆ ನೆರೆ ಭೀತಿ

11:22 AM (IST) Jul 07

ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋಗಿ 4 ದಿನ ಕಳೆದರೂ ಪತ್ತೆಯಾಗದ ಬಾಲಕಿ ದೇಹ

11:22 AM (IST) Jul 07

ಕಾರವಾರ: ನೀರು ಹರಿಯುವ ಜಾಗದಲ್ಲಿ ನೆಟ್‌! ಹೆದ್ದಾರಿಯಲ್ಲಿ ಕೃತಕ ನೆರೆ, ಮನೆಗಳೊಳಗೆ ಕೆರೆ!

11:21 AM (IST) Jul 07

ಮುಂದಿನ 24 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ; ದ.ಕ, ಉಡುಪಿಯಲ್ಲಿ ರೆಡ್ ಅಲರ್ಟ್

10:39 AM (IST) Jul 07

ಹೇಗಿದೆ ರಾಜ್ಯದಲ್ಲಿ ಮಳೆಯ ಪರಿಸ್ಥಿತಿ? ಕಡಿಮೆಯಾಗಿದ್ಯಾ ವರುಣನ ಆರ್ಭಟ?

ಕರಾವಳಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ನೆರೆ ಪರಿಸ್ಥಿತಿ ಸೃಷ್ಟಿಯಾಗಿತ್ತು. ಹೇಗಿದೆ ರಾಜ್ಯದೆಲ್ಲೆಡೆ ಮಳೆಯ ಅವಾಂತರ?

10:35 AM (IST) Jul 07

Udupi: ಇಳಿಮುಖವಾಯಿತು ನೆರೆಯ ಭೀತಿ

ಉಡುಪಿ: ಕೋಟ ಸಮೀಪದ ಬನ್ನಾಡಿ, ಉಪ್ಲಾಡಿ, ಬೆಟ್ಲಕ್ಕಿಯಲ್ಲಿ ನೆರೆ ಇಳಿಮುಖವಾಗಿದೆ. ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ನೆರೆಯ ಸ್ಥಿತಿ ಸೃಷ್ಟಿಯಾಗಿತ್ತು. ರಾತ್ರಿಯಿಂದ ಮಳೆ ಕಡಿಮೆಯಾದ ಹಿನ್ನೆಲೆ ನೆರೆ ಇಳಿಮುಖವಾಗಿದೆ. ಕಡಲು ಸೇರುತ್ತಿರುವ ನದಿಯ ನೀರು. ಮತ್ತೆ ಮಳೆ ಆರಂಭವಾದರೆ ನೆರೆಯ ಭೀತಿ ಶುರುವಾಗಲಿದೆ. ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಣೆಯಾಗಿದೆ.

09:40 AM (IST) Jul 07

Chikkamgaluru: ರಾಜ್ಯ ಹೆದ್ದಾರಿಗೇ ಉರುಳಿದೆ ಬೃಹತ್ ಮರ

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ. ಬಾಳೆಹೊಳೆ ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಮರ. ಮೂಡಿಗೆರೆ ತಾಲೂಕಿನ ಬಾಳೆಹೊಳೆ ಗ್ರಾಮದಲ್ಲಿ ಮಣ್ಣಿನ ರಾಶಿ ಸಮೇತ ರಸ್ತೆಗೆ ಉರುಳಿ ಬಿದ್ದ ಮರ. ಮಾಗುಂಡಿಯಿಂದ ಕಳಸಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ರಸ್ತೆಗೆ ಮರ ಬಿದ್ದಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಮಳೆಯ ಜೊತೆ ಗಾಳಿಯ ಆರ್ಭಟವೂ ಹೆಚ್ಚಾಗಿದೆ.

 

09:37 AM (IST) Jul 07

Hassan: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ

ರಸ್ತೆಗೆ ಮರ ಉರುಳಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಮುಂಜಾನೆ ಐದು ಗಂಟೆಯಿಂದ ಸತತ ನಾಲ್ಕು ಗಂಟೆಗಳ ಕಾಲ ಸ್ಥಗಿತವಾಗಿತ್ತು ವಾಹನ ಸಂಚಾರ. ತ್ವರಿತ ಕಾರ್ಯಾಚರಣೆ ನಡೆಸಿ ಮರ ತೆರವು ಗೊಳಿಸಿದೆ ಚೆಸ್ಕಾಂ. ಕಂದಾಯ ಇಲಾಖೆ  ಸಿಬ್ಬಂದಿ. ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳೊ ಮಾರ್ಗದಲ್ಲಿ ಬಂದ್ ಆಗಿತ್ತು. ರಸ್ತೆ ಸಂಚಾರ. ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ಭಾಗದಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿದೆ. 

09:35 AM (IST) Jul 07

Mangalore: ಅದ್ಯಪಾಡಿ ಬಳಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್

ಮಂಗಳೂರು ಹೊರವಲಯದ ಅದ್ಯಪಾಡಿ ಗ್ರಾಮದಲ್ಲಿ ರಸ್ತೆಗೆ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರ ಬಂದ್ ಆಗಿದೆ. ಮಂಗಳೂರು ಏರ್‌ಪೋರ್ಟ್ ಬಳಿಯ ಅದ್ಯಪಾಡಿ ಗ್ರಾಮದಲ್ಲಿ ಒಂದೆಡೆ ಗುಡ್ಡ ಕುಸಿದು ರಸ್ತೆ ಬಂದ್ ಆದರೆ, ಮತ್ತೊಂದೆಡೆ ರಸ್ತೆಯೇ ಕಟ್ ಆಗಿದೆ. ಸದ್ಯ ಮಂಗಳೂರು ಮತ್ತು ಬಜಪೆ ಸಂಪರ್ಕಿಸಲಾಗದೇ ಸಂಕಷ್ಟದಲ್ಲಿದ್ದಾರೆ ಗ್ರಾಮಸ್ಥರು. ಅದ್ಯಪಾಡಿ ‌ಮತ್ತು ಪದವು ಗ್ರಾಮದ ಜನರಿಗೆ ತ್ರಿಶಂಕು ಸ್ಥಿತಿ ಎದುರಾಗಿದ್ದು, ಸ್ಥಳೀಯವಾಗಿ ಕಲ್ಲು ಗಣಿಗಾರಿಕೆ ಪರಿಣಾಮ ಗುಡ್ಡಗಳು ಕುಸಿಯುವ ಭೀತಿ ಹೆಚ್ಚಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಸಮಾಧಾನ ತೋಡಿಕೊಂಡಿದ್ದಾರೆ ಗ್ರಾಮಸ್ಥರು. ಕಲ್ಲು ಗಣಿಗಾರಿಕೆ ನಡೆಸಿ ನೀರು ನಿಂತ ಪರಿಣಾಮ ಭಾರೀ ಕುಸಿತ ಕಂಡಿದ್ದು, ಸದ್ಯ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ. ಮಳೆಯಿಂದ ಮತ್ತಷ್ಟು ಕುಸಿತದ ಭೀತಿ ಎದುರಿಸುತ್ತಿದ್ದಾರೆ ಮಂದಿ. 

09:28 AM (IST) Jul 07

ಕರಾವಳಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ

ರಾಜ್ಯದ ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಇಳಿಮುಖವಾಗಿದ್ದರೂ ನಿರಂತರ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧವಾರ ರೆಡ್‌ ಅಲರ್ಟ್‌ ಘೋಷಣೆಯಾಗಿದ್ದು ಉತ್ತರ ಕನ್ನಡದಲ್ಲೂ ಆರೆಂಜ್‌ ಅಲರ್ಚ್‌ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೂರೂ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿದೆ.

Read More

09:27 AM (IST) Jul 07

ರಾಜ್ಯದ 24 ಗಂಟೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ತೀವ್ರಗೊಂಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೊತೆಗೆ ರಾಜ್ಯದ ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಲ್ಲಿ ಶುಕ್ರವಾರದವರೆಗೂ ವರುಣನ ಆರ್ಭಟ ಮುಂದುವರಿಯಲಿದೆ. ಉಳಿದಂತೆ ಒಳನಾಡಿನ ಜಿಲ್ಲೆಗಳಲ್ಲೂ ಮುಂಗಾರು ಚುರುಕಾಗಿರುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ಎಲ್ಲಿ ಎಷ್ಟು ಮಳೆಯಾಗಿದೆ?


More Trending News