
ಬೆಂಗಳೂರು (ಮಾ.6) : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಂಡ ನಡೆಸಿದ ಸಭೆಯಲ್ಲಿದ್ದವರು ರೆಡಿಮೇಡ್ ಸ್ವಾಮೀಜಿಗಳು ಎಂದು ಬಿಜೆಪಿ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಸಭೆಯಲ್ಲಿ ಯಾವುದೇ ಪ್ರತಿಷ್ಠಿತ ಸ್ವಾಮೀಜಿಗಳು ಇರಲಿಲ್ಲ. ಅದೆಲ್ಲವೂ ಬಿ.ವೈ.ವಿಜಯೇಂದ್ರ ಪರವಾಗಿ ಮಾಡಿರುವುದು ಎಂಬುದು ಜಗತ್ತಿಗೆ ಗೊತ್ತಿದೆ. ಸಭೆಯಲ್ಲಿ ಕುಳಿತವರೆಲ್ಲ ದೊಡ್ಡ ಲೀಡರ್‌ಗಳಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ ಮನೆಗೆ ರಾತ್ರಿ ತೆರಳಿ ಭೇಟಿ ಮಾಡಿದ್ದಾರೆ. ಅವರ ಬೆಂಬಲ ಸಹ ಕೇಳಿದ್ದಾರೆ. ಯಾವ ಕಾರಣಕ್ಕಾಗಿ ಹೋಗಿ ಬೆಂಬಲ ಕೇಳಿದ್ದಾರೆ? ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರು ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ವೀರಶೈವ ಎಂಬ ಕಾರ್ಡ್ ಉಪಯೋಗ ಮಾಡಲಾಗುತ್ತಿದೆ. ಇದು ಸಾಧ್ಯವಿಲ್ಲ. ವೀರಶೈವರಿಗೆ ಸಿಗುವಂತಹ ಮೀಸಲಾತಿಯನ್ನು ಯಾರಾದರೂ ತಪ್ಪಿಸಿದ್ದರೆ, ಅದು ಯಡಿಯೂರಪ್ಪ ಎಂದು ಆಪಾದಿಸಿದರು.
ಇದನ್ನೂ ಓದಿ: ಸಭೆಗೆ ಬಂದವರು ರೆಡಿಮೇಡ್ ಸ್ವಾಮೀಜಿಗಳು: ಯತ್ನಾಳ್
ಯತ್ನಾಳರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು: ರೇಣುಕಾಚಾರ್ಯ ಕಿಡಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅರೆ ಹುಚ್ಚನಾಗಿದ್ದು, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ವಿಜಯಪುರ ಜಿಲ್ಲೆಯಲ್ಲೇ ವೀರಶೈವ ಮಹಾಸಂಗಮದ ಪೂರ್ವಭಾವಿ ಸಿದ್ಧತೆ ಸಭೆ ನಡೆಸುವ ಜತೆಗೆ ಅಲ್ಲೇ ಸಮಾವೇಶದ ದಿನಾಂಕ ಘೋಷಣೆ ಮಾಡಲಾಗುವುದು ಎಂದೂ ಅವರು ಯತ್ನಾಳ ಅವರಿಗೆ ಟಾಂಗ್ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರಲ್ಲಿ ನಡೆದ ಸಮಾವೇಶಕ್ಕೆ ಯಾವುದೇ ಸ್ವಾಮೀಜಿಗಳನ್ನು ಪೇಮೆಂಟ್ ಕೊಟ್ಟು ಕರೆಸಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ಆಗಮಿಸಿದ್ದರು. ಮೇ 15ರೊಳಗೆ ದಾವಣಗೆರೆಯಲ್ಲಿ ಮಹಾಸಂಗಮ ಮಾಡುತ್ತೇವೆ. ನಾವು ಸಮಾವೇಶ ನಡೆಸಿದ 10 ದಿನ ಬಳಿಕ ಅವರು ಸಮಾವೇಶ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ನಾವು ಆತನಿಗೆ ಮಾದರಿಯಾಗಿದ್ದೇವೆ. ನಮ್ಮನ್ನು ನೋಡಿ ಸಮಾವೇಶ ನಡೆಸಲು ಮುಂದಾಗಿದ್ದಾರೆ. ನಾವು ಹೋಗುವ ದಾರಿಯಲ್ಲಿ ಯಾಕೆ ಹೋಗಬೇಕು ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ಯತ್ನಾಳ್ ಅರೆ ಹುಚ್ಚ.. ಆಸ್ಪತ್ರೆಗೆ ಸೇರಿಸ್ಬೇಕು
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಗ್ಗೆ ಮಾತನಾಡುವವರು ಡಮ್ಮಿಗಳು ಮತ್ತು ಕಾಮಿಡಿ ಪೀಸ್‌ಗಳು. ಆತನೇ ಪೇಮೆಂಟ್ ಗಿರಾಕಿ. ಬಬಲೇಶ್ವರದಲ್ಲಿ ಸ್ಪರ್ಧಿಸಲು ಸಾಧ್ಯವಾಗದೆ ಹೊಂದಾಣಿಕೆ ರಾಜಕೀಯ ಮಾಡಲಾಗುತ್ತಿದೆ. ಸಿದ್ದೇಶ್ವರ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಆತನ ಸಂಬಂಧಿಕರು ಇಲ್ಲವೇ? ಆತನ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ