
ಬೆಂಗಳೂರು(ಏ.05): ಕೋವಿಡ್ ಎರಡನೇ ಅಲೆಯ ಆತಂಕ ತೀವ್ರವಾಗಿದ್ದರೂ ರಾಜ್ಯದ ಪ್ರಸಿದ್ಧ ನಂದಿ ಗಿರಿಧಾಮ, ಮುಳ್ಳಯ್ಯನಗಿರಿ, ಹಂಪಿ ಸೇರಿದಂತೆ ವಿವಿಧ ಪ್ರವಾಸಿತಾಣ, ಧಾರ್ಮಿಕ ಕ್ಷೇತ್ರಗಳಿಗೆ ವಾರಾಂತ್ಯದಲ್ಲಿ ಭೇಟಿ ನೀಡುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದೇವೇಳೆ ಕೋವಿಡ್ ನಿಯಮಾವಳಿ ಪ್ರಕಾರ ಸರಳ ಆಚರಣೆಗೆ ನಿರ್ದೇಶನವಿದ್ದರೂ ಕೆಲವೆಡೆ ನಡೆಯುತ್ತಿರುವ ಜಾತ್ರೆ, ಉತ್ಸವಗಳಲ್ಲಿ ಜನ ಸಾಮಾಜಿಕ ಅಂತರ ಮರೆತು ವ್ಯವಹರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ ಭಾನುವಾರ 8 ಸಾವಿರಕ್ಕೂ ಅಧಿಕ ಸಂಖ್ಯೆಯ ಪ್ರವಾಸಿಗರಿಗೆ ಸಾಕ್ಷಿಯಾಯಿತು. ಇಲ್ಲಿಗೆ 1200 ಬೈಕ್ ಮತ್ತು 600ಕ್ಕೂ ಅಧಿಕ ಕಾರುಗಳಲ್ಲಿ ಪ್ರವಾಸಿಗರು ಆಗಮಿಸಿದ್ದು, ಕೊರೊನಾ ಎರಡನೇ ಅಲೆ ಬಗ್ಗೆ ಖುದ್ದು ಪೊಲೀಸರು ಧ್ವನಿ ವರ್ಧಕದ ಮೂಲಕ ಪ್ರಚಾರ ನಡೆಸಿದರೂ ಕ್ಯಾರೆ ಎನ್ನದೇ ಎಗ್ಗಿಲ್ಲದೆ ತಿರುಗಾಡುತ್ತಿದ್ದರು. ಜಿಲ್ಲೆಯ ಸೆಲ್ಫಿಸ್ಫಾಟ್ ಅವುಲಬೆಟ್ಟಕ್ಕೂ ಪ್ರವಾಸಿಗರು ಗುಂಪುಗುಂಪಾಗಿ ಆಗಮಿಸಿ ಯಾವುದೇ ಸಾಮಾಜಿಕ ಅಂತರ ಇಲ್ಲದೇ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.
ಇನ್ನು ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ರಾಜ್ಯ ಮಾತ್ರವಲ್ಲದೆ ಸ್ಥಳೀಯ ಪ್ರವಾಸಿಗರ ಜೊತೆಗೆ ಕೇರಳ ಮತ್ತು ತಮಿಳುನಾಡಿನಿಂದ ಬರುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗಿದೆ. ಕೋವಿಡ್ ಪರೀಕ್ಷೆಗೆ ಒಳಗಾಗಿಯೇ ಹಲವು ಮಂದಿ ಹೊರರಾಜ್ಯದ ಪ್ರವಾಸಿಗರು ಅರಮನೆ, ಮೃಗಾಲಯ ಮತ್ತು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದರು. ಅರಮನೆಗೆ ಸುಮಾರು 700ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಆಗಮಿಸಿದ್ದು ಅಂದರೆ ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದರು.
ವಿಶ್ವಪಾರಂಪರಿಕ ತಾಣ ಹಂಪಿಗೆ ವೀಕೆಂಡ್ ಹಿನ್ನೆಲೆಯಲ್ಲಿ ಭಾನುವಾರ ನಾಲ್ಕು ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಹಲವರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಜಾಗೃತಿಯನ್ನು ಸ್ಥಳೀಯ ಸಿಬ್ಬಂದಿ ಮೂಡಿಸಿದರೂ ಪ್ರವಾಸಿಗರು ನಿರ್ಲಕ್ಷ್ಯ ವಹಿಸಿದ್ದರು ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡದ ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು ಕಡಲಕಿನಾರೆಯಲ್ಲಿ ಸಂಜೆ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ಕಾಣಿಸಿಕೊಂಡಿದ್ದು, ಉಡುಪಿಯ ಮಲ್ಪೆ ಬೀಚಿನಲ್ಲಿ ಅಷ್ಟಾಗಿ ಜನಜಂಗುಳಿ ಇರಲಿಲ್ಲ. ಉಡುಪಿ ಕೃಷ್ಣಮಠಕ್ಕೆ ಸುಮಾರು 5 ಸಾವಿರ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ 2 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಇದೇವೇಳೆ ಉತ್ತರ ಕರ್ನಾಟಕದ ಗೋಕರ್ಣ, ಮುರ್ಡೇಶ್ವರ, ಕಾಸರಕೋಡ ಬೀಚ್, ಸಾತೊಡ್ಡಿ ಜಲಪಾತ, ಉಂಚಳ್ಳಿ, ಮಾಗೋಡು, ವಿಭೂತಿ ಫಾಲ್ಸ್‌ಗಳಲ್ಲಿ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
ಕನಕಗಿರಿ ರಥೋತ್ಸವದಲ್ಲಿ ಜನಸಾಗರ
ಐತಿಹಾಸಿಕ ಕನಕಾಚಲಪತಿ ದೇವರ ಜಾತ್ರೆ ನಿಮಿತ್ತ ಭಾನುವಾರ ಬೆಳಗ್ಗೆ ಮಹಾ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ವಿವಿಧೆಡೆ ಕೊರೋನಾ 2ನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆ ಭಾನುವಾರ ಮಧ್ಯಾಹ್ನದ ಸಮಯದಲ್ಲಿ ನಡೆಯಬೇಕಿದ್ದ ರಥೋತ್ಸವ ಬೆಳಗ್ಗೆ ನಡೆಸಲಾಯಿತು. ಒಂದೇ ತಾಸಿನಲ್ಲಿ ರಥೋತ್ಸವ ಸಂಪನ್ನಗೊಂಡಿತಾದರೂ ನೆರೆದಿದ್ದ ಭಕ್ತರು ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಜಾತ್ರೆಯಲ್ಲಿ ಕೋವಿಡ್ ನಿಯಮ ಪಾಲನೆಯಾಗುವುದಿಲ್ಲವೆಂದು ಮನಗಂಡು ರಥವನ್ನು ಮೂಲ ನಕ್ಷತ್ರದಲ್ಲಿ ಎಳೆಯಲಾಗಿಲ್ಲ. ಪ್ರಾತಃಕಾಲದಲ್ಲಿ ಎಳೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ