
ಬೆಂಗಳೂರು (ಜೂ.02): ಕರ್ನಾಟಕದ ರಾಜಕೀಯ ಅಂಗಳದಲ್ಲಿ ನೂತನ ಮುಖ್ಯಮಂತ್ರಿಯವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಜೂನ್ 03, 2026) ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಸಿಬ್ಬಂದಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಅತ್ತ ವಿಧಾನಸಭೆ ಸಚಿವಾಲಯದ ನೌಕರರಿಗೆ ಸಭಾಧ್ಯಕ್ಷರು ಇಂದು ವಿಶೇಷ ಭೋಜನ ಕೂಟವನ್ನು ಆಯೋಜಿಸಿದ್ದಾರೆ.
ಕರ್ನಾಟಕ ಸರ್ಕಾರದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಜೂನ್ 3, 2026 ರಂದು ಅಪರಾಹ್ನ 4:05 ಗಂಟೆಗೆ ಬೆಂಗಳೂರಿನ 'ಲೋಕಭವನ'ದಲ್ಲಿ ನಡೆಯಲಿದೆ. ಸಮಾರಂಭಕ್ಕೆ ಗಣ್ಯಾತಿಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನಿರೀಕ್ಷೆಯಿರುವುದರಿಂದ, ಭದ್ರತೆ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜೂನ್ 3 ರಂದು ಅಪರಾಹ್ನ (ಮಧ್ಯಾಹ್ನದ ನಂತರ) ರಜೆ ಘೋಷಿಸಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಮತ್ತೊಂದೆಡೆ, ನೂತನ ಸರ್ಕಾರದ ಸ್ವಾಗತದ ಸಡಗರದ ನಡುವೆಯೇ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧಿಕಾರಿ ಮತ್ತು ನೌಕರರಿಗೆ ಇಂದು (ಜೂನ್ 02) ಸಂಜೆ 6:00 ಗಂಟೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿದೆ.
ಸನ್ಮಾನ್ಯ ಸಭಾಧ್ಯಕ್ಷರ ಆದೇಶದಂತೆ ಆಯೋಜಿಸಲಾಗಿರುವ ಈ ಕೂಟದಲ್ಲಿ ಸಚಿವಾಲಯದ ಎಲ್ಲಾ ನೌಕರರು ಭಾಗವಹಿಸುವಂತೆ ಸೂಚಿಸಿ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ. ಲಲಿತಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರದ ಆಡಳಿತ ಆರಂಭವಾಗುವ ಮುನ್ನವೇ ವಿಧಾನಸೌಧದ ಆವರಣದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ನಾಳಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ