
ಮಂಡ್ಯ(ಅ.04): ಕೊರೋನಾ ಸೋಂಕಿಗೆ ಬಲಿಯಾದ 1200 ಅನಾಥ ಶವಗಳಿಗೆ(Unclaimed Bodies) ಮುಕ್ತಿ ದೊರಕಿಸಲು ಜೂನ್ ತಿಂಗಳಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದ ಕಂದಾಯ ಸಚಿವ ಆರ್.ಅಶೋಕ(R Ashok) ಅವರು ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸೋಮವಾರ ಮೃತರಿಗೆ ಪಿಂಡಪ್ರದಾನ ಮಾಡುವುದರೊಂದಿಗೆ ಮೋಕ್ಷ ದೊರಕಿಸುವ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದ ಗೋಸಾಯ್‌ಘಾಟ್‌ನಲ್ಲಿ ನೆರವೇರಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಶ್ರೀರಂಗಪಟ್ಟಣದ ಗೋಸಾಯ್ ಘಾಟ್‌ಗೆ ಆಗಮಿಸಲಿರುವ ಸಚಿವ ಆರ್.ಅಶೋಕ್ ಅವರು ಪಿಂಡ ಪ್ರದಾನದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವರು. ಸಚಿವ ಕೆ.ಸಿ.ನಾರಾಯಣಗೌಡ, ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಜಿಲ್ಲಾಧಿಕಾರಿ ಅಶ್ವತಿ ಹಾಗೂ ಇನ್ನಿತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಚಿತಾಭಸ್ಮ ವಿಸರ್ಜನೆ ಮಾಡಿದ್ದ ಸಚಿವ ಆರ್. ಅಶೋಕ್ ರಿಂದ ಮತ್ತೊಂದು ಮಾನವೀಯ ಕಾರ್ಯ
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೋನಾಗೆ ಬಲಿಯಾದ 1200 ಅನಾಥ ಶವಗಳ ಅಸ್ಥಿಯನ್ನು ಕಳೆದ ಜೂ.2ರಂದು ಕಂದಾಯ ಸಚಿವ ಆರ್.ಅಶೋಕ್ ಅವರು ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ಹಿಂದು ಸಂಪ್ರದಾಯದ ಪ್ರಕಾರ ವಿಸರ್ಜನೆ ಮಾಡಿದ್ದರು. ಆ ಮೂಲಕ ಅನಾಥ ಅಸ್ಥಿಗಳಿಗೆ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದರು.
ಆ 1200 ಮಂದಿಗೆ ಸೋಮವಾರ ಗೋಸಾಯ್ ಘಾಟ್‌ನಲ್ಲಿ ಕರ್ಮ ಪುಣ್ಯಾಹಗಳು ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಯಿಂದ ಪೂಜಾ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ಮೋಕ್ಷನಾರಾಯಣ ಬಲಿ, ಕರ್ಮವನ್ನು ಮಾಡಲಾಗುತ್ತದೆ, ಪ್ರಾರಂಭದಲ್ಲಿ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಮತ್ತು ದ್ವಾರಸ ನಾರಾಯಣರ 12 ಕಳಸ ಪೂಜೆ, ಪ್ರಾಯಶ್ಚಿತ ತಿಲಹೋಮಗಳು ನಡೆಯುತ್ತದೆ.
ಪಂಚಗವ್ಯ ಪೂಜೆ ಮಾಡಿ ನಾಲ್ಕೂವರೆ ಅಡಿ ಉದ್ದದ ವಿಷ್ಣುಪಾದವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ದಶಪಿಂಡ ಪ್ರದಾನ ವಿಧಾನಗಳ ನಂತರ 11 ನೇ ದಿನದ ರುದ್ರಪಾರಾಯಣ, ದಶದಾನ ಕಾರ್ಯಗಳನ್ನು ನಡೆಸಲಾಗುವುದು.
ಗೋಸಾಯ್‌ಘಾಟ್‌ನಲ್ಲಿ ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ ಸಚಿವ ಆರ್.ಅಶೋಕ್ ಅವರು ಶ್ರೀರಂಗನಾಥ ಸ್ವಾಮಿ ದರ್ಶನ ಪಡೆದು ನಂತರ ಶಾಶ್ವತಿ ಧಾರ್ಮಿಕ ಕೇಂದ್ರದಲ್ಲಿ ಮೃತರಿಗೆ ಎಡೆ ಪೂಜೆ ನೆರವೇರಿಸಿ, ಸ್ವಯಂಪಾಕಾದಿಗಳನ್ನು ದಾನ ಮಾಡುವರು. ನಂತರ ಭೋಜನ, ಪ್ರಸಾದ ಸ್ವೀಕರಿಸುವರು ಎಂದು ಡಾ.ಭಾನುಪ್ರಕಾಶ್ ಶರ್ಮ ಕನ್ನಡಪ್ರಭಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ