
ಬೆಂಗಳೂರು (ಮಾ. 9): ರಾಜ್ಯಕ್ಕೆ (Karnataka) ಕೊರೋನಾ ವೈರಸ್ (Coronavirus)ಸೋಂಕು ಕಾಲಿಟ್ಟು ಇಂದಿಗೆ (ಮಾರ್ಚ್ 9) ಬರೋಬ್ಬರಿ ಎರಡು ವರ್ಷ! ಈವರೆಗೂ ಹೆಚ್ಚು ಕಡಿಮೆ ರಾಜ್ಯದ ಜನಸಂಖ್ಯೆಯಷ್ಟು(6.5 ಕೋಟಿ) ಸೋಂಕು ಪರೀಕ್ಷೆ (Covid Test) ನಡೆದಿದ್ದು, ಪ್ರತಿ 15 ಮಂದಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರ ಪೈಕಿ ಪ್ರತಿ 100ರಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಮೊದಲನೇ ಅಲೆ ನಂತರ ಇನ್ನೂ 2 ಕೊರೋನಾ ಅಲೆಗಳು (ಡೆಲ್ಟಾಅಲೆ ಹಾಗೂ ಒಮಿಕ್ರೋನ್ ಅಲೆ) ಎದ್ದಿವೆ. ಇದರೊಂದಿಗೆ ಮೊದಲ ಅಲೆಗಿಂತ (Covid Waves) ಉಳಿದರರಡು ಅಲೆಗಳಲ್ಲಿ 3 ಪಟ್ಟು ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಮೂರು ಪಟ್ಟು ಸೋಂಕಿತರು ಬಲಿಯಾಗಿದ್ದಾರೆ. ಈ ಮೂರೂ ಅಲೆಗಳಿಗೆ ಹೋಲಿಸಿದರೆ 2ನೇ ಅಲೆ ಅತಿ ಭೀಕರ.
ಮೊದಲ ಸೋಂಕು ಪ್ರಕರಣ: ವಿದೇಶದಿಂದ ರಾಜ್ಯಕ್ಕೆ ಮರಳಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರಲ್ಲಿ (Bengaluru Techie) ಸೋಂಕು ಪತ್ತೆಯಾಗಿ 2020 ಮಾಚ್‌ರ್ 9 ರಂದು ಕೊರೋನಾ (Corona) ಮೊದಲ ಪ್ರಕರಣ ದಾಖಲಾಗಿತ್ತು. ಈವರೆಗೂ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 40 ಲಕ್ಷ (39.42 ಲಕ್ಷ) ಸಮೀಪಿಸಿವೆ. ಸೋಂಕಿತರ ಪೈಕಿ ಶೇ.99ರಷ್ಟುಮಂದಿ ಗುಣಮುಖರಾಗಿದ್ದು, ಬರೋಬ್ಬರಿ 40 ಸಾವಿರ ಮಂದಿ ಜೀವಕಳೆದುಕೊಂಡಿದ್ದಾರೆ. ಒಟ್ಟಾರೆ ಸೋಂಕಿತರಲ್ಲಿ 20 ರಿಂದ 59 ವರ್ಷದವರ ಯುವ, ಮಧ್ಯಮ ವಯಸ್ಕರ ಸಂಖ್ಯೆ 30 ಲಕ್ಷ, ಒಟ್ಟಾರೆ ಸಾವಿನಲ್ಲಿ 50 ವರ್ಷ ಮೇಲ್ಪಟ್ಟವರ ಸಂಖ್ಯೆ 30 ಸಾವಿರದಷ್ಟಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು, ಒಂಬತ್ತು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಸದ್ಯ ದೇಶದಲ್ಲಿಯೇ ಸೋಂಕು ಪ್ರಕರಣಗಳ ಮತ್ತು ಸೋಂಕಿತರ ಸಾವಿನ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ ಮೂರನೆ ಅಲೆಯು ಮುಕ್ತಾಯ ಹಂತದಲ್ಲಿದ್ದು, ಇಂದಿಗೂ 3 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.
ಮೊದಲ ಅಲೆ ಭಯ, ಎರಡನೆ ಅಲೆ ಅಬ್ಬರ, ಮೂರನೆ ಅಲೆ ಲಘು: ಕೊರೋನಾ ಮೊದಲ ಅಲೆಯಲ್ಲಿ ಸೋಂಕಿನ ಬಗ್ಗೆ ಸಾಕಷ್ಟುಆತಂಕವಿತ್ತು. ಆರನೇ ಪ್ರಕರಣ ಪತ್ತೆಯಾಗುವಷ್ಟರಲ್ಲಿ (2020 ಮಾ.14ಕ್ಕೆ) ರಾಜ್ಯಸರ್ಕಾರದಿಂದ ಲಾಕ್‌ಡೌನ್ (Lock Down) ಘೋಷಿಸಲಾಯಿತು. 2020 ಮಾರ್ಚ ರಿಂದ 2021 ಮಾರ್ಚ್ ವರೆಗಿನ ಮೊದಲ ಅಲೆಯಲ್ಲಿ 10.1 ಲಕ್ಷ ಮಂದಿ ಸೋಂಕಿತರಾಗಿ, 12 ಸಾವಿರ ಮಂದಿ ಮೃತಪಟ್ಟಿದ್ದರು. ಆದರೆ, ಎರಡನೇ ಅಲೆಯಲ್ಲಿ ಕೊರೋನಾ ರೂಪಾಂತರಿ ಡೆಲ್ಟಾಆರ್ಭಟಿಸಿದ್ದು, 2021 ಏಪ್ರಿಲ್ ಮತ್ತು ಮೇ ಎರಡನೇ ತಿಂಗಳಲ್ಲಿ 15 ಲಕ್ಷ ಮಂದಿಗೆ ಸೋಂಕು ತಗುಲಿ ಬರೋಬ್ಬರಿ 20 ಸಾವಿರ ಮಂದಿ ಸಾವಿಗೀಡಾಗಿದ್ದರು. ಒಟ್ಟಾರೆ ಎರಡನೇ ಅಲೆಯಯಲ್ಲಿ (2021 ಏಪ್ರಿಲ್-ನವೆಂಬರ್) 20 ಲಕ್ಷ ಪ್ರಕರಣಗಳು, 26 ಸಾವಿರ ಸಾವು ದಾಖಲಾಗಿದ್ದವು.
ಆದರೆ, ಲಸಿಕೆ ಪರಿಣಾಮ ಜತೆಗೆ ಸೋಂಕಿನ ಬಗೆಗಿನ ಜಾಗೃತಿಯಿಂದ ಮೊದಲೆರಡು ಅಲೆಗಳಿಗಿಂತ ಮೂರನೇ ಅಲೆಯಲ್ಲಿ ಹೆಚ್ಚಿನ ಸಾವಾಗಿಲ್ಲ. 2021 ಡಿಸೆಂಬರ್‌ನಿಂದ ಈವರೆಗೂ 9.5 ಲಕ್ಷ ಮಂದಿ ಸೋಂಕಿತರಾಗಿದ್ದು, 1,780 ಮಂದಿ ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಹಾನಿಮಾಡುತ್ತದೆ ಎಂಬ ಅಂದಾಜು ಹುಸಿಯಾಗಿಯಿತು.
ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ: ಕೊರೋನಾ ಸೋಂಕು ಸಾಕಷ್ಟುಸಾವು ನೋವು ನೀಡುವ ಜತೆಗೆ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿದೆ. ಕೊರೋನಾ ಪೂರ್ವಕ್ಕೆ ಹೋಲಿಸಿದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆಕ್ಸಿಜನ್, ಐಸಿಯು ಸೇರಿದಂತೆ ವಿವಿಧ ಮಾದರಿ ಹಾಸಿಗೆಗಳ ಸಂಖ್ಯೆದುಪ್ಪಟ್ಟು ಹೆಚ್ಚಾಗಿದ್ದು, ತಾಲೂಕು ಆಸ್ಪತ್ರೆಗಳಲ್ಲಿಯೂ ಆರು ಐಸಿಯು ಹಾಸಿಗೆಗಳು, ಸಮುದಾಯ ಕೇಂದ್ರದಲ್ಲಿ ಆಕ್ಸಿಜನ್ ಹಾಸಿಗೆಗಳು ಲಭ್ಯವಿದೆ. ಪ್ರತಿ ಜಿಲ್ಲೆಗಳು, ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಅತ್ಯಾಧುನಿತ ಪ್ರಯೋಗಾಲಯ, ಆಕ್ಸಿಜನ್ ಪ್ಲಾಂಟ್‌ಗಳು ಅವಳವಡಿಸಲಾಗಿದೆ. ಆಸ್ಪತ್ರೆಗಳ ಕಟ್ಟಡ ನವೀಕರಣ, ಮೂಲ ಸೌಕರ್ಯ ಜತೆಗೆ ವೈದ್ಯರು ಮತ್ತು ಸಿಬ್ಬಂದಿ ಕೂಡಾ ಹೆಚ್ಚಳವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್‌ನಲ್ಲಿ ನಾಲ್ಕನೇ ಅಲೆ ಆತಂಕ: ಕೊರೋನಾ ಎರಡನೇ ವರ್ಷದಲ್ಲಿ ರೂಪಾಂತರಿಗಳ ಅಬ್ಬರ ಹೆಚ್ಚಿತ್ತು. ಒಟ್ಟಾರೆ ಆಲ್ಪಾ, ಬೀಟಾ, ಡೆಲ್ಟಾ, ಒಮಿಕ್ರೋನ್ ಮತ್ತು ಇತರೆ ರೂಪಾಂತರಿಗಳು ಪತ್ತೆಯಾಗಿದ್ದವು. ಒಮಿಕ್ರೋನ್‌ನಿಂದ ಉಂಟಾದ ಮೂರನೇ ಅಲೆ ಸಾಕಷ್ಟುತಗ್ಗಿದ್ದು, ಹೊಸ ಪ್ರಕರಣಗಳು 150 ಆಸುಪಾಸಿಗೆ, ಸಾವು ಬೆರಳೆಣಿಕೆಗೆ ತಗ್ಗಿದೆ. ಮುಂಬರುವ ಜೂನ್‌ನಲ್ಲಿ ಕೊರೋನಾ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಐಐಟಿ ಕಾನ್ಪುರ ಅಂದಾಜಿಸಿದೆ. ಈ ಮೂಲಕ ಇನ್ನಷ್ಟುದಿನ ಕೊರೋನಾ ಆತಂಕದೊಂದಿಗೆ ಸಾಗಬೇಕಿದೆ.
ಅಂಕಿ-ಅಂಶ (ಒಂದು ದಿನದಲ್ಲಿ)
*ಅತಿ ಹೆಚ್ಚು ಪ್ರಕರಣಗಳು 50,210 ಜ.23, 2022
*ಅತಿ ಹೆಚ್ಚು ಸಾವು 626 , ಮೇ 23, 2021
*ಅತಿ ಹೆಚ್ಚು ಪರೀಕ್ಷೆ 2.5ಲಕ್ಷ , ಜ.20, 2022
*ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.39 ಮೇ 17, 2021
ಈ ಜಿಲ್ಲೆಗಳಲ್ಲಿ ಲಕ್ಷಕ್ಕಿಂತ ಹೆಚ್ಚು ಮಂದಿಗೆ ಸೋಂಕು
ಜಿಲ್ಲೆ ಕೇಸ್ (ಲಕ್ಷಗಳಲ್ಲಿ)
ಬೆಂಗಳೂರು 17.8
ಮೈಸೂರು 2.3
ತುಮಕೂರು 1.6
ಹಾಸನ 1.4
ದಕ್ಷಿಣ ಕನ್ನಡ 1.35
ಬಳ್ಳಾರಿ 1.15
ಮಂಡ್ಯ 1.01
ಬೆಳಗಾವಿ 1
2 ವರ್ಷದಲ್ಲಿ ಕೊರೋನಾದಿಂದ ಏನಾಯ್ತು?
- 39.42 ಲಕ್ಷ ಮಂದಿಗೆ ಸೋಂಕು
- ಶೇ.99ರಷ್ಟುಮಂದಿ ಗುಣಮುಖ
- 40000 ಮಂದಿ ಸೋಂಕಿಗೆ ಬಲಿ
- 6.5 ಕೋಟಿಯಷ್ಟುಕೋವಿಡ್ ಪರೀಕ್ಷೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ