ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತೀವ್ರ ಸ್ವರೂಪ ಪಡೆದಿರುವ ನಡುವೆಯೇ, ಮಹಾರಾಷ್ಟ್ರದಲ್ಲಿ ಮರಾಠಿಗರ ಪುಂಡಾಟ ಮುಂದುವರಿದಿದೆ. ಕರ್ನಾಟಕ ಮೂಲದ ಬಸ್ ಹಾಗೂ ಬ್ಯಾಂಕುಗಳಿಗೆ ಮಸಿ ಬಳಿದು ಮರಾಠಿ ಪುಂಡರು ವಿಕೃತಿ ಮೆರೆದಿದ್ದಾರೆ.
ಬೆಳಗಾವಿ/ನಾಸಿಕ್ (ಡಿ.08): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತೀವ್ರ ಸ್ವರೂಪ ಪಡೆದಿರುವ ನಡುವೆಯೇ, ಮಹಾರಾಷ್ಟ್ರದಲ್ಲಿ ಮರಾಠಿಗರ ಪುಂಡಾಟ ಮುಂದುವರಿದಿದೆ. ಕರ್ನಾಟಕ ಮೂಲದ ಬಸ್ ಹಾಗೂ ಬ್ಯಾಂಕುಗಳಿಗೆ ಮಸಿ ಬಳಿದು ಮರಾಠಿ ಪುಂಡರು ವಿಕೃತಿ ಮೆರೆದಿದ್ದಾರೆ. ನಾಸಿಕ್‌ನಲ್ಲಿ ಸ್ವರಾಜ್ ಸಂಘಟನೆಯ ಕಿಡಿಗೇಡಿಗಳು ಕರ್ಣಾಟಕ ಬ್ಯಾಂಕ್‌ನ ನಾಮಫಲಕ, ಬಾಗಿಲಿಗೆ ಮಸಿ ಬಳಿದು, ಕರ್ನಾಟಕ ಸರ್ಕಾರ ಮತ್ತು ಕನ್ನಡ ವಿರೋಧಿ ಘೋಷಣೆ ಕೂಗಿದ್ದಾರೆ. ಕರ್ನಾಟಕದ ಬಸ್‌ಗಳನ್ನು ಮಹಾರಾಷ್ಟ್ರಕ್ಕೆ ಬರಲು ಬಿಡುವುದಿಲ್ಲ, ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವುದಿಲ್ಲ.
ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಸರಿಯಾದ ಉತ್ತರ ನೀಡದಿದ್ದರೆ ಸಂಘಟನೆಯ ಕಾರ್ಯಕರ್ತರು ಕರ್ನಾಟಕಕ್ಕೆ ನುಗ್ಗುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಇದೇ ವೇಳೆ, ಪುಣೆಯಲ್ಲಿ ರಾಜ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಣೆಯಿಂದ ಬೆಳಗಾವಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ತಡೆದು, ಬಸ್‌ಗೆ ಮಸಿ ಬಳಿದು, ‘ಜೈ ಮಹಾರಾಷ್ಟ್ರ’ ಎಂಬ ಬರಹ ಬರೆದಿದ್ದಾರೆ. ಸಿಂಧದುರ್ಗ ಜಿಲ್ಲೆಯ ಕುಡಾಲ ಬಸ್ ನಿಲ್ದಾಣದಲ್ಲಿ ಡಿಪೋಗೆ ನುಗ್ಗಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬೆಳಗಾವಿ ಘಟಕಕ್ಕೆ ಸೇರಿದ ಬಸ್‌ಗಳಿಗೆ ಕೇಸರಿ ಬಣ್ಣ, ಕಪ್ಪು ಬಣ್ಣ ಬಳಿದಿದ್ದಾರೆ.
ಮಹಾ ಕಿಡಿಗೆ ಬೆಳಗಾವಿ ಗಡಿ ಉದ್ವಿಗ್ನ: ರಾಜಕಾರಣಿಗಳ ವಿರುದ್ಧ ಕರವೇ ಕೆಂಡ
ಸೊಲ್ಲಾಪುರದಲ್ಲಿ ಪ್ರಹಾರ ಎನ್ನುವ ಸಂಘಟನೆಯ ಕಾರ್ಯಕರ್ತರು, ಕರ್ನಾಟಕದ ಬಸ್‌ಗಳಿಗೆ ಕಪ್ಪು ಮಸಿ ಬಳಿದು, ಬಸ್ ಮೇಲಿದ್ದ ಸಿಎಂ ಬೊಮ್ಮಾಯಿಯವರ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ, ಬೊಮ್ಮಾಯಿ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಅಲ್ಲದೆ, ಮೀರಜ್ ಮತ್ತು ಬಾರಾಮತಿಯಲ್ಲಿ ಶಿವಸೇನೆ ಕಾರ್ಯಕರ್ತರು, ಕರ್ನಾಟಕದ ಬಸ್‌ಗಳಿಗೆ ಕಪ್ಪು ಮಸಿ ಬಳಿದು, ‘ಜೈ ಶಿವಾಜಿ, ಜೈ ಭವಾನಿ’ ಎಂಬ ಘೋಷಣೆ ಕೂಗಿದ್ದಾರೆ. ಇದೇ ವೇಳೆ, ಸಾಂಗ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಸಾಂಗ್ಲಿ ಜಿಲ್ಲೆಯ ಅಧ್ಯಕ್ಷ, ಕನ್ನಡಿಗರನ್ನು ಮಹಾರಾಷ್ಟ್ರದಿಂದ ಓಡಿಸಬೇಕಾಗುತ್ತದೆ.
ಮಹಾರಾಷ್ಟ್ರಕ್ಕೆ ಕರ್ನಾಟಕ ಬಸ್ ಬರುವುದನ್ನು ಬ್ಯಾನ್ ಮಾಡಬೇಕಾಗುತ್ತೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾನೆ. ಈ ಮಧ್ಯೆ, ಕೊಲ್ಲಾಪುರದಲ್ಲಿ ಮಾತನಾಡಿದ ಕೊಲ್ಲಾಪುರ ಶಿವಸೇನೆ ಜಿಲ್ಲಾ ಮುಖಂಡ ಸಂಜಯ ಪವಾರ, ಕರ್ನಾಟಕದಲ್ಲಿ ನೀವು 5 ಕಾರುಗಳಿಗೆ ಕಲ್ಲು ಹೊಡೆದರೆ, ಮಹಾರಾಷ್ಟ್ರದಲ್ಲಿ 50 ಕಾರುಗಳನ್ನು ಒಡೆಯುತ್ತೇವೆ. ನೀವು 10 ಕಾರುಗಳನ್ನು ಒಡೆದರೆ ನಾವು 100 ಕಾರುಗಳನ್ನು ಒಡೆಯುತ್ತೇವೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾನೆ. ಜೊತೆಗೆ, ಮಹಾವಿಕಾಸ ಆಘಾಡಿ (ಎಂವಿಎ)ಯಿಂದ ಶನಿವಾರ ಕೊಲ್ಲಾಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟದಲ್ಲಿ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾನೆ.
ಶಾಂತಿ ಕಾಪಾಡಲು ಸಿಎಂ ಬೊಮ್ಮಾಯಿ-ಮಹಾರಾಷ್ಟ್ರ ಸಿಎಂ ಶಿಂಧೆ ಸಮ್ಮತಿ
ಗಡಿಯಲ್ಲಿ ಹೈ ಅಲರ್ಟ್: ಈ ಮಧ್ಯೆ, ಗಡಿ ವಿವಾದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೆಳಗಾವಿ ಬಳಿ ಬಾಚಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದಾರೆ. ಮಹಾರಾಷ್ಟ್ರದಿಂದ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ 1 ಕೆಎಸ್‌ಆರ್‌ಪಿ ತುಕಡಿ ಸೇರಿ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ, ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ 400ಕ್ಕೂ ಅಧಿಕ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ, ಮಹಾರಾಷ್ಟ್ರದಿಂದ ಬರಬೇಕಿದ್ದ 60 ರಿಂದ 70 ಬಸ್‌ಗಳ ಸಂಚಾರ ಕೂಡ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.