ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಬಿಬಿಎಂಪಿಯ 45 ಕಂದಾಯ ವಿಭಾಗದ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಫೀಲ್ಡ್‌ಗಿಳಿದಿದ್ದಾರೆ.
ಬೆಂಗಳೂರು (ಆ.03): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಯಾದ ಬಿಬಿಎಂಪಿಯ 29 ವಿಧಾನಸಭಾ ಕ್ಷೇತ್ರದ 45 ಕಂದಾಯ ಅಧಿಕಾರಿ (ಆರ್‌ಒ) ಮತ್ತು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಬಿಬಿಎಂಪಿ ಕಚೇರಿಗಳಲ್ಲಿ ಸಾರ್ವಜನಿಕರಿಂದ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ದೂರುಗಳು ಬಂದಿದ್ದವು. ಇದರ ಬೆನ್ನಲ್ಲಿಯೇ ಗುರುವಾರ ಮಧ್ಯಾಹ್ನದ ವೇಳೆಗೆ ಬಿಬಿಎಂಪಿಯ 28 ವಿಧಾನಸಭಾ ಕ್ಷೇತ್ರಗಳ 45 ಬಿಬಿಎಂಪಿ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ವೇಳೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸ್ವತಃ ಫೀಲ್ಡ್‌ಗಿಳಿದಿದ್ದು, ಬಿಬಿಎಂಪಿ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
Bengaluru City Police: ಸೈಬರ್ ವಂಚಕನಿಂದ 3 ಲಕ್ಷಕ್ಕೆ ಕೈಯೊಡ್ಡಿ, ಕೇರಳ ಪೊಲೀಸರಿಗೆ ಸಿಕ್ಕಿಬಿದ್ದರು
ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಂದ ದೊಡ್ಡ ಮಟ್ಟದ ಲೋಕಾಯುಕ್ತ ದಾಳಿ ಎಂದೇ ಹೇಳಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಪದ್ಮನಾಭನಗರ, ಜಯನಗರ, ವಿಜಯನಗರ, ಬಸವನಗುಡಿ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ ಕೆ.ಆರ್.ಪುರಂ ಕ್ಷೇತ್ರಗಳ ಕಂದಾಯ ಅಧಿಕಾರಿ ಕಚೇರಿಗಳು ಹಾಗೂ ಎಆರ್‌ಒ ಕಚೇರಿಗಳಲ್ಲಿ ಮಧ್ಯಾಹ್ನದಿಂದ ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಬಿಬಿಎಂಪಿ ಅಧಿಕಾರಿಗಳು ವ್ಯಾಪಕವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಕಾರ್ಯ ನಿರ್ವಹಿಸಿದ ನಂತರ, ಮಧ್ಯಾಹ್ನದ ವೇಳೆಗೆ ದಾಳಿ ಮಾಡಲಾಗಿದೆ. ಆದರೆ, ಈವರೆಗೆ ಕಚೇರಿಗಳಲ್ಲಿ ಅಧಿಕಾರಿಗಳ ಬಳಿ ಹಣ ಅಥವಾ ಅಕ್ರಮ ದಾಖಲೆಗಳು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕಡತ ವಿಲೇವಾರಿ ಮಾಡದೇ ಲಂಚಕ್ಕೆ ಬೇಡಿಕೆ: ಇನ್ನು ಬಿಬಿಎಂಪಿ ಹಾಗೂ ಇತರೆ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ವಿಳಂಬ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಹಾಗೂ ಸಾರ್ವಜನಿಕರಿಗೆ ನಿಗದಿತ ವೇಳೆಗೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಕಾಲ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಸಕಾಲ ಯೋಜನೆ ಸೇರಿ ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದರೂ ವಿವಿಧ ನೆಪಗಳನ್ನು ಒಡ್ಡಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸದೇ ಕಳ್ಳಾಟ ಆಡುತ್ತಾ ಲಂಚ ವಸೂಲಿ ಮಾಡುತ್ತಿದ್ದರು ಎಂಬ ದೂರು ಕೇಳಿಬಂದಿದ್ದವು. ಇನ್ನು ಸಕಾಲ ಅವಧಿ ಮೀರಿದರೂ ವಿಲೇವಾರಿ ಮಾಡದ ನೂರಾರು ದಾಖಲೆಗಳು ಲಭ್ಯವಾಗಿರುವ ಕುರಿತು ಮಾಹಿತಿ ಸಿಕ್ಕಿದೆ.
Bengaluru: ನಾಳೆಯಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಆರಂಭ: ಸಂಚಾರ ಮಾರ್ಗ, ವಾಹನ ನಿಲುಗಡೆಯಲ್ಲಿ ಬದಲಾವಣೆ
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಪರಿಶೀಲನೆ: ಇನ್ನು ಬೆಂಗಳೂರಿನ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರ ಜೊತೆಗೆ, ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಕೂಡ ಫೀಲ್ಡ್‌ಗೆ ಇಳಿದಿದ್ದಾರೆ. ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ರಾಜಾಜಿನಗರ ಕಂದಾಯ ಕಚೇರಿಯಲ್ಲಿ ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ. ಈ ವೇಳೆ ಸಹ ಕಂದಾಯ ಅಧಿಕಾರಿ ಭಾರತಿ ಅವರಿಗೆ ಪ್ರಶ್ನೆಗಳ ಸುರಿಮಳೆ ಮಾಡಿದ್ದಾರೆ. ಪ್ರತಿಯೊಂದು ಕಡತಗಳ ಪರಿಶೀಲನೆಯನ್ನು ಮಾಡುತ್ತಿದ್ದು, ಪ್ರಶ್ನೆಗೆ ಉತ್ತರಿಸಲಾಗದೇ ಕೈಕಟ್ಟಿ ನಿಂತಿರುವ ಘಟನೆ ಕಂಡುಬರುತ್ತಿದೆ.