ಇಳಕಲ್ ಕಾಲೇಜು ಪ್ರಾಂಶುಪಾಲರ ವಿವಾದ, ತರಗತಿ ರದ್ದುಗೊಳಿಸಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅವಕಾಶ

Published : May 24, 2023, 04:20 PM ISTUpdated : May 24, 2023, 07:08 PM IST
ಇಳಕಲ್ ಕಾಲೇಜು ಪ್ರಾಂಶುಪಾಲರ ವಿವಾದ, ತರಗತಿ ರದ್ದುಗೊಳಿಸಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅವಕಾಶ

ಸಾರಾಂಶ

ಕೇರಳ ಸ್ಟೋರಿ ಚಿತ್ರದ ಕುರಿತು ಪರ ವಿರೋಧಗಳು ಜೋರಾಗಿದೆ. ಕೆಲ ರಾಜ್ಯಗಳು ಈ ಚಿತ್ರ ನಿಷೇಧಕ್ಕೆ ಪ್ರಯತ್ನ ಮಾಡಿದ್ದರೆ, ಕೆಲ ರಾಜ್ಯಗಳು ತೆರಿಗೆ ಮುಕ್ತ ಮಾಡಿದೆ. ಇದೀಗ ಕರ್ನಾಟಕದ ಇಳಕಲ್‌ನ ಮೆಡಿಕಲ್ ಕಾಲೇಜು, ಎಲ್ಲಾ ವಿದ್ಯಾರ್ಥಿನಿಯರು ಕೇರಳ ಸ್ಟೋರಿ ಚಿತ್ರ ವೀಕ್ಷಿಸುವಂತೆ ನೋಟಿಸ್ ನೀಡಿದೆ. ಆದರೆ ವಿವಾದ ಹೆಚ್ಚಾಗುತ್ತಿದ್ದಂತೆ ಆದೇಶ ಹಿಂಪಡೆಯಲಾಗಿದೆ.

ಇಳಕಲ್(ಮೇ.24): ಐಸಿಸ್ ಉಗ್ರವಾದ, ಲವ್ ಜಿಹಾದ್ ಕಥಾಹಂದರದ ದಿ ಕೇರಳ ಸ್ಟೋರಿ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಒಂದೆಡೆ ಚಿತ್ರ 200 ಕೋಟಿ ರೂ ಕ್ಲಬ್ ಸೇರಿಕೊಂಡಿದೆ. ಇತ್ತ ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳು ಚಿತ್ರ ನಿಷೇಧಿಸುವ ಪ್ರಯತ್ನ ಮಾಡಿದೆ. ಕೇರಳ ಸರ್ಕಾರ ಇದು ಆರ್‌ಎಸ್‌ಎಸ್ ಅಜೆಂಡಾ ಚಿತ್ರ ಎಂದಿದೆ. ಕೆಲವರು ಇದು ಸುಳ್ಳು ಕತೆ ಎಂದಿದ್ದಾರೆ. ಇದರ ನಡುವೆ ಈ ಚಿತ್ರಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಭಯೋತ್ಪಾದನೆ ಹಾಗೂ ಷಡ್ಯಂತ್ರದ ಕುರಿತ ಈ ಚಿತ್ರ ಭಾರಿ ವಿವಾದಕ್ಕೂ ಕಾರಣವಾಗಿದೆ. ಇದರ ನಡುವೆ ಕರ್ನಾಟಕ ಇಳಕಲ್ ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಚಿತ್ರ ಪ್ರದರ್ಶನಕ್ಕೆ ನೋಟಿಸ್ ನೀಡಿತ್ತು.  ವಿದ್ಯಾರ್ಥಿನಿಯರಿಗೆ ಉಚಿತ ಚಿತ್ರ ವೀಕ್ಷೆಗೆ ಕಾಲೇಜು ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಆದೇಶ ಹಿಂಪಡೆಯಲಾಗಿದೆ.

ಇಳಕಲ್ ವಿಜಯ್ ಮಹಂತೇಶ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಕೆಸಿ ದಾಸ ಈ ನೋಟಿಸ್ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿನಿಯರು ಇಳಕಲ್ ನಗರದಲ್ಲಿರುವ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಮಧ್ಯಾಹ್ನ 12 ರಿಂದ 3ಗಂಟೆ ವರೆಗೆ ಉಚಿತವಾಗಿ ಕೇರಳ ಸ್ಟೋರಿ ಚಿತ್ರ ವೀಕ್ಷೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಆದೇಶವನ್ನು ರದ್ದು ಮಾಡಲಾಗಿದೆ. ಜೊತೆಗೆ ಪ್ರಾಂಶುಪಾಲರು ಕ್ಷಮೆ ಕೇಳಿದ್ದಾರೆ.

ದಿ ಕೇರಳ ಸ್ಟೋರಿ ಬಳಿಕ ಭುಗಿಲೆದ್ದ 'ಫರ್ಹಾನಾ' ವಿವಾದ: ನಟಿಗೆ ಜೀವ ಬೆದರಿಕೆ

ಮೊದಲ ವರ್ಷದ ಬಿಎಎಂಎಸ್‌ನಿಂದ ವಿದ್ಯಾರ್ಥಿನಿಯರಿಂದ ಹಿಡಿದು, ಅಂತಿಮ ವರ್ಷದ ಬಿಎಎಂಎಸ್, ಸ್ನಾತಕೋತ್ತರ ವಿದ್ಯಾರ್ಥಿನಿಯರು ಸೇರಿದಂತೆ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಚಿತ್ರ ವೀಕ್ಷಣೆ ಮಾಡಬೇಕು. ವಿದ್ಯಾರ್ಥಿನಿಯರು ಬೆಳಗ್ಗೆ 9 ಗಂಟೆಯಿಂಗ 11 ಗಂಟೆ ವರೆಗೆ ತರಗತಿಗೆ ಹಾಜರಾಗಿ ಬಳಿಕ 12 ಗಂಟೆಗೆ ಸರಿಯಾಗಿ ಚಿತ್ರ ವೀಕ್ಷಣೆ ಮಾಡಬೇಕು. ಇದಕ್ಕಾಗಿ ಕಾಲೇಜು ಎಲ್ಲಾ ವ್ಯವಸ್ಥೆ ಮಾಡಿದೆ ಎಂದು ಪ್ರಿನ್ಸಿಪಾಲ್ ಡಾ.ಕೆಸಿ ದಾಸ ಹೇಳಿದ್ದಾರೆ. ಮಧ್ಯಾಹ್ನದ ನಂತ್ರದ ಎಲ್ಲಾ ತರಗತಿಗಳನ್ನು ಚಿತ್ರ ವೀಕ್ಷಣೆಗಾಗಿ ಕಾಲೇಜು ರದ್ದು ಮಾಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಸರ್ಕಾರಗಳು ಕ್ಯಾತೆ ತೆಗೆದಿತ್ತು. ಮಮತಾ ಬ್ಯಾನರ್ಜಿ ಸರ್ಕಾರ ಕೇರಳ ಸ್ಟೋರಿ ಚಿತ್ರ ಪ್ರದರ್ಶವನ್ನು ಪಶ್ಟಿಮ ಬಂಗಾಳದಲ್ಲಿ ನಿಷೇಧಿಸಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಚಿತ್ರ ತಂಡಕ್ಕೆ ಗೆಲುವಾಗಿತ್ತು. ಐಸಿಸ್‌ ಉಗ್ರರ ಕಥಾಹಂದರವನ್ನು ಹೊಂದಿರುವ ‘ದ ಕೇರಳ ಸ್ಟೋರಿ’ ಸಿನಿಮಾದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿಷೇಧಕ್ಕೆ ಸುಪ್ರೀಂಕೋರ್ಚ್‌ ತಡೆ ನೀಡಿತ್ತು. ಇತ್ತ  ಸಿನಿಮಾ ಪ್ರದರ್ಶನಕ್ಕೆ ಅಗತ್ಯ ಭದ್ರತೆಯನ್ನು ಒದಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿತ್ತು.

ಪಠಾಣ್​, ಕೆಜಿಎಫ್ 2​ ದಾಖಲೆ ಉಡೀಸ್​: ಎರಡನೇ ವಾರದಲ್ಲಿ The Kerala Story ಗಳಿಸಿದ್ದೆಷ್ಟು?

ಬಂಗಾಳದಲ್ಲಿ ಕೇರಳ ಸ್ಟೋರಿ ನಿಷೇಧದ ವಿರುದ್ಧ ಹಾಗೂ ತಮಿಳುನಾಡಲ್ಲಿ ಚಿತ್ರಮಂದಿರಗಳು ಸ್ವಯಂ ನಿರ್ಬಂಧ ಹಾಕಿಕೊಂಡಿದ್ದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕ ವಿಪುಲ್‌ ಶಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠ, ‘ಚಿತ್ರಕ್ಕೆ ಭದ್ರತೆ ನೀಡುವ ಹೊಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಸರ್ಕಾರದ್ದಾಗಿದೆ. ಹೀಗಾಗಿ ಸಾರ್ವಜನಿಕರ ಅಸಹಿಷ್ಣುತೆ ಇದೆ ಎಂಬ ಕಾರಣ ನೀಡಿ ಶಾಸನಾತ್ಮಕ ಅಧಿಕಾರ ಚಲಾಯಿಸಲು ಆಗುವುದಿಲ್ಲ. ಏಕೆಂದರೆ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಅನುಮತಿ ಇದೆ’ ಎಂದು ಚಾಟಿ ಬೀಸಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Namma Metro Update: ಕೆಂಗೇರಿ ಮೆಟ್ರೋ ದುರಂತ; ಮೃತರ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ!
ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!