
ವಿಶೇಷ ವರದಿ
ಬೆಂಗಳೂರು (ಜೂ.19)) ಗ್ಯಾಂಗ್ರಿನ್‌ಯಿಂದ ಕಾಲು ಕಳೆದುಕೊಂಡು ಸಂಪಾದಿಸಲು ಅಸಮರ್ಥವಾದ ಪತಿಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ನೀಡಲು ಪತ್ನಿಗೆ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಹಾಗೆಯೇ, ಪತಿ ತನ್ನನ್ನು ಪರಿತ್ಯಜಿಸಿದ್ದು, ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಚ್ಛೇದನ ನೀಡಬೇಕೆಂಬ ಪತ್ನಿಯ ಮನವಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಆದೇಶವನ್ನು ಹೈಕೋರ್ಟ್ ಇದೇ ವೇಳೆ ಪುರಸ್ಕರಿಸಿದೆ.
ದುಡಿವ ಶಕ್ತಿ ಇದ್ದರೆ ಪತಿಗೆ ಜೀವನಾಂಶ ಇಲ್ಲ: ಹೈಕೋರ್ಟ್
ಪತ್ನಿ ದುಡಿದು ಸಂಪಾದಿಸುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಧಾರ, ದಾಖಲೆಯನ್ನು ಪತಿ ಸಲ್ಲಿಸಿಲ್ಲ. ಕೌಟುಂಬಿಕ ನ್ಯಾಯಾಲಯ ಇದೇ ಅಭಿಪ್ರಾಯ ವ್ಯಕ್ತಪಡಿಸಿದರೂ, ಕಾಲು ಕಳೆದುಕೊಂಡ ಪತಿಯ ನಿರ್ವಹಣೆ ಮಾಡುವುದು ಪತ್ನಿಯ ನೈತಿಕ ಬಾಧ್ಯತೆಯಾಗಿರುತ್ತದೆ ಎಂದು ಹೇಳಿ ಜೀವನಾಂಶ ಪಾವತಿಸಲು ಪತ್ನಿಗೆ ನಿರ್ದೇಶಿಸಿದೆ. ಆದರೆ, ಕಾಲು ಕತ್ತರಿಸಿದ ಬಳಿಕ ಆಟೋ ರಿಕ್ಷಾ ಖರೀದಿಸಿರುವುದಾಗಿ ಪಾಟಿ ಸವಾಲಿನಲ್ಲಿ ಪತಿಯೇ ಹೇಳಿರುವುದು ಆತ ಆದಾಯ ಸಂಪಾದನೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಪತಿಗೆ ಜೀವನಾಂಶ ನೀಡಲು ಪತ್ನಿಗೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ ಪತ್ನಿ ಮೇಲೆ ಪತಿ ಕ್ರೌರ್ಯ ಎಸಗಿದ್ದಾರೆ ಮತ್ತು ಆಕೆಯನ್ನು ಪತಿಯೇ ತ್ಯಜಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಧಾರವಿಲ್ಲ. ಮೇಲಾಗಿ ಕಾಲು ಕತ್ತರಿಸಿದ ಬಳಿಕ 2010ರಿಂದ ದಂಪತಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಪತ್ನಿಯೇ ಪತಿಯನ್ನು ಪರಿತ್ಯಜಿಸಿದ್ದರು. ಇದರಿಂದ ವಿಚ್ಛೇದನ ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಸೂಕ್ತವಾಗಿದೆ ಎಂದು ವಿಭಾಗೀಯಪೀಠ ಆದೇಶಿಸಿದೆ.
ಗ್ಯಾಂಗ್ರಿನ್‌ಗೆ ಎಡಗಾಲು ಕತ್ತರಿ
ತುಮಕೂರಿನ ಲಕ್ಷ್ಮೇ ಮತ್ತು ಚಿಕ್ಕಮಗಳೂರಿನ ಶಿವು (ಹೆಸರು ಬದಲಿಸಲಾಗಿದೆ) 2000ರಲ್ಲಿ ಮದುವೆಯಾಗಿದ್ದರು. ಒಂದು ವರ್ಷದ ನಂತರ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 2009ರವರೆಗೆ ದಂಪತಿ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಈ ಮಧ್ಯ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಪತ್ನಿಯನ್ನು ಮದುವೆಯ ಬಳಿಕ ಪತಿಯೇ ಬಿ.ಕಾಂ. ಪದವಿಗೆ ಸೇರಿಸಿದ್ದರು. ಆದರೆ, ಗ್ಯಾಂಗ್ರಿನ್ ಸಮಸ್ಯೆಯಿಂದ 2009ರ ಡಿ.30ರಂದು ಪತಿಯ ಎಡಗಾಲನ್ನು ವೈದ್ಯರು ಕತ್ತರಿಸಿದ್ದರು. ಇದಾದ ಬಳಿಕ ಪತಿಯನ್ನು ಪತ್ನಿ ಪರಿತ್ಯಜಿಸಿದ್ದರು ಎಂಬ ಆರೋಪವಿದೆ.
ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ ಶಿವು, ಕಾಲು ಕತ್ತರಿಸಿರುವ ಕಾರಣ ತಾನು ಸಂಪಾದನೆ ಮಾಡುವ ಸ್ಥಿತಿಯಲ್ಲಿ ಇಲ್ಲ. ತಂದೆ-ತಾಯಿ ಸಾವನ್ನಪ್ಪಿದ್ದಾರೆ. ಸಹೋದರರು ಅವರು ಕುಟುಂಬದೊಂದಿಗೆ ನೆಲೆಸಿದ್ದಾರೆ. ಪತ್ನಿ ಮಾಸಿಕ 25 ಸಾವಿರ ರು. ಸಂಪಾದಿಸುತ್ತಿದ್ದ, ತನಗೆ ಮಾಸಿಕ ಹತ್ತು ಸಾವಿರ ರು. ಜೀವನಾಂಶ ನೀಡಲು ನಿರ್ದೇಶಿಸುವಂತೆ ಕೋರಿದ್ದರು. ಪತಿಯ ಎಲ್ಲ ಆರೋಪಗಳನ್ನು ಪತ್ನಿ ಅಲ್ಲಗೆಳೆದಿದ್ದರು. ಕೌಟುಂಬಿಕ ನ್ಯಾಯಾಲಯ, ಶಿವುಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ನೀಡುವಂತೆ ಪತ್ನಿಗೆ ನಿರ್ದೇಶಿಸಿತ್ತು.
ಎಚ್ಡಿಕೆಯಿಂದ ಜಮೀನು ವಾಪಸ್ ಪಡೆದಿದ್ದೀರಾ?: ಹೈಕೋರ್ಟ್
ವಿಚ್ಛೇದನಕ್ಕೆ ಪತ್ನಿ ಮೊರೆ
ಮದುವೆ ನಂತರ ಮಿನಿ ಲಾರಿ ಹಾಗೂ ಹತ್ತು ಟೈರ್‌ಗಳ ಲಾರಿ ಖರೀದಿಸಲು ತಮ್ಮ ಪೋಷಕರು ಪತಿಗೆ ಹಣಕಾಸು ನೆರವು ನೀಡಿದ್ದರು. ಪತಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾ ಕಿರುಕುಳ ನೀಡುತ್ತಿದ್ದರು. ಹಲವು ಬಾರಿ ಹಲ್ಲೆ ಮಾಡಿದ್ದಾರೆ. ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದರು. ಹಿರಿಯರು ಬುದ್ಧಿ ಹೇಳಿದರೂ ಪತಿ ತಮ್ಮ ನಡೆ ಬದಲಿಸಿಕೊಳ್ಳಲಿಲ್ಲ. ಹಾಗಾಗಿ, ವಿಚ್ಛೇದನ ನೀಡುವಂತೆ ಕೋರಿ ಲಕ್ಷ್ಮಿ ಕೌಟುಂಬಿಕ ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಆಕೆಯ ಎಲ್ಲ ಆರೋಪಗಳನ್ನು ನಿರಾಕರಿಸಿದ ಶಿವು, ಮದುವೆ ಬಳಿಕ ಒಂಬತ್ತು ವರ್ಷ ಕಾಲ ಸಂತೋಷದಿಂದಲೇ ಜೀವನ ನಡೆಸಿದೆವು. ಗ್ಯಾಂಗ್ರಿನ್‌ಯಿಂದ ಕಾಲು ಕತ್ತರಿಸಿದ ನಂತರ ಪತ್ನಿ ತನ್ನನ್ನು ಬಿಟ್ಟು ಹೋಗಿ, ಪುತ್ರಿಯೊಂದಿಗೆ ನೆಲೆಸಿದ್ದಾರೆ. ಸುಳ್ಳು ಆರೋಪ ಮಾಡಿ ವಿಚ್ಛೇದನಕ್ಕೆ ಸಲ್ಲಿಸಿರುವ ಅರ್ಜಿ ವಜಾಗೊಳಿಸುವಂತೆ ಕೋರಿದ್ದರು. ಆದರೆ ಲಕ್ಷ್ಮೇಯ ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ