
ಬೆಂಗಳೂರು (ಜೂ.22): ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್-KMF) ಉತ್ಪನ್ನವಾದ 'ನಂದಿನಿ ಸುವಾಸಿತ ಹಾಲು' (Nandini Flavoured Milk) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕವಾಗಿ ವಿಡಿಯೋ ಮಾಡಿ ವೈರಲ್ ಮಾಡಿದ್ದ ವೈದ್ಯೆ ಡಾ. ಶರಣ್ಯ ಪದ್ಮಾ ಅವರಿಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದುಗೊಳಿಸಬೇಕು ಅಥವಾ ತಡೆ ನೀಡಬೇಕು ಎಂಬ ವೈದ್ಯೆಯ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸದೇ, ತನಿಖೆ ಮುಂದುವರೆಸಲು ಹಸಿರುನಿಶಾನೆ ತೋರಿದೆ.
ಕೆಲವು ದಿನಗಳ ಹಿಂದೆ ಡಾ. ಶರಣ್ಯ ಪದ್ಮಾ ಅವರು ಇನ್‌ಸ್ಟಾಗ್ರಾಂನಲ್ಲಿ ರೀಲ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ನಂದಿನಿ ಸುವಾಸಿತ ಹಾಲು ಆರೋಗ್ಯಕ್ಕೆ ಸರಿಯಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಮತ್ತು ನಂದಿನಿ ಬ್ರ್ಯಾಂಡ್ ಹೆಸರಿಗೆ ಧಕ್ಕೆ ತಂದ ಆರೋಪದಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವೈದ್ಯೆಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. 'ಇನ್‌ಸ್ಟಾಗ್ರಾಂ ರೀಲ್ಸ್ ಮಾಡುವುದು ಜನರಲ್ಲಿ ಆತಂಕ ಮೂಡಿಸುವುದಕ್ಕಲ್ಲ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವೈದ್ಯರು ಈ ರೀತಿ ವರ್ತಿಸುವುದು ಸರಿಯಲ್ಲ' ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. 'ನೀವು ಆ ಹಾಲನ್ನು ಯಾವುದಾದರೂ ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿಸಿದ್ದೀರಾ? ಸರ್ಕಾರದ ಗಮನಕ್ಕೆ ಏನಾದರೂ ತಂದಿದ್ದೀರಾ? ಯಾವ ಆಧಾರದ ಮೇಲೆ ಅದು ಸರಿಯಿಲ್ಲ ಎಂದು ಹೇಳುತ್ತಿದ್ದೀರಿ? ನಿಮಗೆ ಆ ಹಾಲು ಇಷ್ಟವಿಲ್ಲದಿದ್ದರೆ ಅದನ್ನು ಕುಡಿಯಬೇಡಿ, ಆದರೆ ಈ ರೀತಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸಬೇಡಿ' ಎಂದು ಹೈಕೋರ್ಟ್ ವೈದ್ಯೆಯನ್ನು ಪ್ರಶ್ನಿಸಿದೆ.
ವೈದ್ಯೆಯ ಪರ ವಕೀಲರು ಎಫ್‌ಐಆರ್‌ಗೆ ತಡೆ ನೀಡುವಂತೆ ಕೋರಿದರು. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ತನಿಖೆಯ ಅಗತ್ಯವಿರುವುದರಿಂದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಗಾಗಿ ಅಥವಾ ವೈಯಕ್ತಿಕ ಅಭಿಪ್ರಾಯಗಳನ್ನು ಜನರ ಮೇಲೆ ಹೇರುವ ಸಲುವಾಗಿ ಮಾಡುವ ಪೋಸ್ಟ್‌ಗಳು ಕಾನೂನಿನ ಸಂಕಷ್ಟಕ್ಕೆ ಗುರಿಯಾಗಬಹುದು ಎಂಬ ಎಚ್ಚರಿಕೆಯನ್ನು ಈ ಆದೇಶ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ